ಪ್ರವಾಸೋದ್ಯಮ ಪ್ರಾಧಿಕಾರ ರಚನೆ ಸದ್ಯಕ್ಕಿಲ್ಲ
ಕ.ಪ್ರ.ವಾರ್ತೆ ಮೈಸೂರು ಜೂ. 22
ಪ್ರವಾಸೋದ್ಯಮ ಪ್ರಾಧಿಕಾರ ರಚನೆ ಸದ್ಯಕ್ಕಿಲ್ಲ. ಬದಲಾಗಿ ಪ್ರತಿ ಜಿಲ್ಲೆಯಲ್ಲಿಯೂ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಪ್ರವಾಸೋದ್ಯಮ ಸಮಿತಿಯಿದ್ದು, ಅದು ಹಲ್ಲು ಕಿತ್ತ ಹಾವಿನಂತಾಗಿದೆ. ಹೀಗಾಗಿ ಅದಕ್ಕೆ ಮರುಜೀವ ತುಂಬುವ ಕೆಲಸ ಮಾಡುತ್ತೇವೆ ಎಂದು ಪ್ರವಾಸೋದ್ಯಮ ಹಾಗೂ ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು.
ಮೈಸೂರಿನ ಕುಕ್ಕರಹಳ್ಳಿ ಕೆರೆಗೆ ಶನಿವಾರ ಭೇಟಿ ನೀಡಿದ ಸಂದರ್ಭದಲ್ಲಿ ಮೈಸೂರಿನ ಉದ್ಯಮಿ ಆರ್. ಗುರು ಅವರು ಎತ್ತಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಮೈಸೂರು ಪ್ರವಾಸೋದ್ಯಮ ತಾಣವಾಗಿದೆ. ನಗರ ಭಾಗದಿಂದ 35 ಕಿಮೀ ವ್ಯಾಪ್ತಿಯಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ. ಅವುಗಳನ್ನು ಅಭಿವೃದ್ಧಿಪಡಿಸಲು ಜಿಲ್ಲಾ ಪ್ರವಾಸೋದ್ಯಮ ಸಮಿತಿಯನ್ನು ಕ್ರಿಯಾಶೀಲವನ್ನಾಗಿ ಮಾಡಬೇಕಿದೆ ಎಂದರು.
ಕುಕ್ಕರಹಳ್ಳಿ ಕೆರೆಯ ಸ್ವಚ್ಛತೆಯ ಬಗ್ಗೆ ಮೈಸೂರು ವಿವಿ ಅಧಿಕಾರಿಗಳನ್ನು ಪ್ರಶ್ನಿಸಿದ ಸಚಿವರು, ಪ್ರವಾಸೋದ್ಯಮ ಇಲಾಖೆಯಿಂದ ಕೆರೆ ಅಭಿವೃದ್ಧಿಗೆ 2 ಕೋಟಿ ಬಿಡುಗಡೆ ಮಾಡಲಾಗಿದೆ. ಆದರೆ, ಅಭಿವೃದ್ಧಿ ಮಾತ್ರ ಕಾಣುತ್ತಿಲ್ಲ. ಕೊಳಚೆ ನೀರು ಹರಿಯುತ್ತಿದೆ. ನೀವೆಲ್ಲಾ ಏನು ಕೆಲಸ ಮಾಡಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.
ಇವರ ಮಾತಿಗೆ ತಡವರಿಸಿಕೊಂಡು ಪ್ರತಿಕ್ರಿಯೆ ನೀಡಿದ ಮೈಸೂರು ವಿವಿ ಎಂಜಿನಿಯರ್, ಕೆರೆಯ ಎರಡು ಕಡೆಗಳಲ್ಲಿ ಕಮಾನು ಗೇಟು, ಕುವೆಂಪುವನ, ಪಾದಚಾರಿ ಪಥ, ಏರಿ ನಿರ್ಮಿಸಿದ್ದೇವೆ. 2 ಕೋಟಿಯಲ್ಲಿ ಬಿಡುಗಡೆಯಾಗಿದ್ದ 1.50 ಕೋಟಿನಲ್ಲಿ 1.4 ಕೋಟಿ ಖರ್ಚಾಗಿದೆ. ಉಳಿದ ಅನುದಾನದಲ್ಲಿ ಕೊಳಚೆ ನೀರನ್ನು ತಡೆಗಟ್ಟಲು ಟೆಂಡರ್ ಕರೆಯಲಾಗಿದೆ ಎಂದರು.
ಟೆಂಡರ್ ವಿಳಂಬ: ನಗರಪಾಲಿಕೆಯಿಂದ ಈಗಾಗಲೇ ನಾಲ್ಕು ಬಾರಿ ಟೆಂಡರ್ ಕರೆಯಲಾಗಿದ್ದರೂ ಯಾವೊಬ್ಬ ಗುತ್ತಿಗೆದಾರನೂ ಬಿಡ್ ಮಾಡಿಲ್ಲ. 2007ರಲ್ಲಿನ ದರ ಇರುವುದರಿಂದ ಯಾರೂ ಮುಂದೆ ಬಂದಿಲ್ಲ. ಈ ಬಾರಿ ಇ- ಟೆಂಡರ್ ಕರೆಯಲಾಗಿದೆ. ಆ. 3ಕ್ಕೆ ಟೆಂಡರ್ ಪ್ರಕ್ರಿಯೆ ಮುಗಿಲಿದೆ ಎಂದು ಮಾಹಿತಿ ನೀಡಿದರು. ನಂತರ ಸಚಿವರು ಆದಷ್ಟು ಬೇಗ ಕಾಮಗಾರಿ ಮುಗಿಸಿ ಒಳ್ಳೆಯ ಪ್ರವಾಸಿ ತಾಣವನ್ನಾಗಿ ರೂಪಿಸಿ. ಜತೆಗೆ ಪರಿಸರವಾದಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದೆ ಮಾಡಬಹುದಾದ ಕೆಲಸಗಳ ಬಗ್ಗೆ ಸಲಹೆ ಪಡೆಯುವಂತೆ ಸೂಚಿಸಿದರು.
ಎಂಡಿಎಯಿಂದ ಪ್ರಸ್ತಾವನೆ: ಎಂಡಿಎ ಆಯುಕ್ತ ಡಾ.ಸಿ.ಜಿ. ಬೆಟ್ಸೂರ್ ಮಠ ಮಾತನಾಡಿ, ಎಂಡಿಎಯಿಂದ ಕುಕ್ಕರಹಳ್ಳಿ ಕೆರೆ ಅಭಿವೃದ್ಧಿಗೆ 1 ಕೋಟಿ ಮೀಸಲಿಟ್ಟಿದ್ದೇವೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕೆರೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಮತ್ತೊಂದು ಪ್ರಸ್ತಾವನೆ ಸಲ್ಲಿಸಿ. ಅಲ್ಲಿಂದಲೂ ಹಣ ಬಂದರೆ ಕೆರೆಯ ಅಭಿವೃದ್ಧಿಗೆ ಸಹಾಯವಾಗುತ್ತದೆ ಎಂದರು. ಚಾಮರಾಜ ಕ್ಷೇತ್ರದ ಶಾಸಕ ವಾಸು, ಜಿಲ್ಲಾಧಿಕಾರಿ ಡಾ. ರಾಮೇಗೌಡ, ಪಾಲಿಕೆ ಆಯುಕ್ತ ಪಿ.ಜಿ. ರಮೇಶ್, ಎಂಜಿನಿಯರ್ಗಳಾದ ಕೃಷ್ಣ, ಸುಬ್ರಹ್ಮಣ್ಯ, ಕಾಂಗ್ರೆಸ್ ಮುಖಂಡ ಕೆ.ಆರ್. ಮೋಹನ್ಕುಮಾರ್, ಮೈಸೂರು ಪರೀಕ್ಷಾಂಗ ಕುಲಸಚಿವ ಪ್ರೊ. ಶ್ರೀಜಯದೇವರಾಜ ಅರಸ್, ಪ್ರೊ. ಎಂ. ಚಂದ್ರಕುಮಾರ್, ಕೆರೆ ಸಂರಕ್ಷಣಾ ಸಮಿತಿಯ ಸಂಚಾಲಕ ಕೆ.ಎಂ. ಜಯರಾಮಯ್ಯ ಮೊದಲಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

