'ಸಂಗೀತ ಮಾತ್ರದಿಂದಲೇ ರೋಗ ನಿವಾರಣೆ ಅಸಾಧ್ಯ'
ಕ.ಪ್ರ.ವಾರ್ತೆ ಮೈಸೂರು ಜೂ. 25
ಯಾವುದೇ ಚಿಕಿತ್ಸೆ ಇಲ್ಲದೆ ಕೇವಲ ಸಂಗೀತದಿಂದಲೇ ರೋಗ ಗುಣಪಡಿಸುವುದು ಅಸಾಧ್ಯ ಎಂದು ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಹೆಸರಾಂತ ವಯೋಲಿನ್ ವಾದಕ ಮೈಸೂರು ಎಂ. ನಾಗರಾಜ್ ಹೇಳಿದರು.
ಜಿಲ್ಲಾ ಪತ್ರಕರ್ತರ ಸಂಘ ಮಂಗಳವಾರ ಏರ್ಪಡಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಸಂಗೀತದಿಂದ ರೋಗಿಯ ಕಾಯಿಲೆ ಗುಣಪಡಿಸಬಹುದು ಎಂಬುದು ಸರಿಯಲ್ಲ. ಸಂಗೀತದಿಂದ ರೋಗಿಯ ಮಾನಸಿಕ ಕಾಯಿಲೆಗಳನ್ನು ನಿವಾರಿಸಿ ಸೂಕ್ತ ಚಿಕಿತ್ಸೆಗೆ ಸ್ಪಂದಿಸುವಂತೆ ಮಾಡುವಲ್ಲಿ ಸಂಗೀತ ಸಹಕಾರಿಯಾಗಿದೆ ಎನ್ನಬಹುದು. ಸೂಕ್ತ ಚಿಕಿತ್ಸೆ ಹಾಗೂ ಔಷಧೋಪಚಾರಗಳನ್ನು ನಡೆಸಿ ಅದಕ್ಕೆ ಒತ್ತಾಸೆಯಾಗಿ ಸಂಗೀತ ಬಳಸಬಹುದು ಎಂದರು.
ವಿದೇಶಗಳಲ್ಲಿ ಸಂಗೀತದ ಒಲವು ಹೆಚ್ಚಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಅಂತೆಯೇ ಸಂಗೀತದಿಂದ ಮಕ್ಕಳ ಬುದ್ಧಿಶಕ್ತಿ ಹಾಗೂ ನೆನಪಿನ ಶಕ್ತಿ ಹೆಚ್ಚಿಸಲು ಸಹಕಾರಿಯಾಗಲಿದೆಯೇ ಎಂಬುದರ ಬಗ್ಗೆ ಪರಿಣಿತರು ಸಂಶೋಧನೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಮಾಧ್ಯಮಗಳ ಉತ್ತೇಜನ ಅಗತ್ಯ: ದೂರದರ್ಶನ ಹಾಗೂ ಆಕಾಶವಾಣಿಯು ಶಾಸ್ತ್ರೀಯ ಸಂಗೀತಕ್ಕೆ ಮೊದಲಿನಿಂದಲೂ ಹೆಚ್ಚಿನ ಪ್ರೋತ್ಸಾಹ ನೀಡುತ್ತಾ ಬಂದಿದೆ. ಆದರೆ ಖಾಸಗಿ ರೆಡಿಯೋ ಹಾಗೂ ಟಿವಿ ವಾಹಿನಿಗಳು ತಮ್ಮ ವೈಯಕ್ತಿಕ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಹೆಚ್ಚಿನ ಕಾಳಜಿ ವಹಿಸುತ್ತಿಲ್ಲ. ಖಾಸಗಿ ಮಾಧ್ಯಮಗಳು ಸಹ ಶಾಸ್ತ್ರೀಯ ಸಂಗೀತಕ್ಕೆ ಹೆಚ್ಚಾಗಿ ಉತ್ತೇಜನ ನೀಡಬೇಕು ಎಂದರು.
ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಸಂಗೀತದ ಬಗ್ಗೆ ಆಸಕ್ತಿ ಇದೆ. ಅಂತೆಯೇ ಪ್ರೋತ್ಸಾಹವೂ ಇದೆ. ಈ ಹಿಂದಿನ ದಶಕಗಳಲ್ಲಿ ಮಾಧ್ಯಮಗಳು ಅಷ್ಟಾಗಿ ಬೆಳೆಯದ ಕಾರಣ ಕಲಾವಿದರಿಗೆ ಹೆಚ್ಚಿನ ಪ್ರಚಾರ ದೊರಕುತ್ತಿರಲಿಲ್ಲ. ಈಗ ಮಾಧ್ಯಮಗಳು ಬೆಳೆದಿರುವ ಹಿನ್ನೆಲೆಯಲ್ಲಿ ಕಲಾವಿದರಿಗೆ ಪ್ರೋತ್ಸಾಹ ದೊರಕುತ್ತಿದೆ ಎಂದು ತಿಳಿಸಿದರು.
ಸಂಗೀತ ಕ್ಷೇತ್ರದ ಉನ್ನತಿಗಾಗಿ ಗಂಗೂಬಾಯಿ ಹಾನಗಲ್ ಸಂಗೀತ ವಿವಿ ಸ್ಥಾಪನೆಯಾಗಿರುವುದು ಸಂತಸದ ಸಂಗತಿ. ಆದರೆ ವಿವಿ ಅಷ್ಟಾಗಿ ಪ್ರಚಾರಕ್ಕೆ ಬಂದಿಲ್ಲ. ಸಾಂಸ್ಕೃತಿಕ ಹಾಗೂ ಸಂಗೀತ ಕಲೆಗಳ ಕುರಿತು ಒಳ್ಳೆಯ ಯೋಜನೆಗಳನ್ನು ಹಮ್ಮಿಕೊಳ್ಳಬೇಕಿದೆ ಎಂದರು.
ಮೈಸೂರಿನಲ್ಲಿ ಸಂಗೀತ ಸಂಸ್ಥೆಗಳು ಹಾಗೂ ಸಂಗೀತ ವಿವಿಯೂ ಇರುವುದರಿಂದ ಸಂಗೀತ, ಸಾಹಿತ್ಯ ಹಾಗೂ ವಾದ್ಯಗಳ ಬಗ್ಗೆ ಜನರಲ್ಲಿ ಅಭಿರುಚಿ ಮೂಡಿಸುವ ಕೆಲಸ ಮಾಡಬೇಕು. ಉದಯೋನ್ಮುಖ ಕಲಾವಿದರ ಕಾರ್ಯಕ್ರಮಗಳು ಜನರಿಗೆ ತಲುಪಿಸುವಂತೆ ಹಾಗೂ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುವಲ್ಲಿ ಮುಂದಾಗಬೇಕು ಎಂದು ಆಶಿಸಿದರು. ಮೈಸೂರು ಎಂ. ನಾಗರಾಜ್ ಅವರನ್ನು ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ ಹಾಗೂ ಪ್ರಧಾನ ಕಾರ್ಯದರ್ಶಿ ಕೆ. ದೀಪಕ್ ಸನ್ಮಾನಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

