ಮೈಸೂರು

ಗ್ರಾಮೀಣಾಭಿವೃದ್ಧಿಗೆ ಬ್ಯಾಂಕ್ ಸಹಕಾರಿ

Published On :

ಕ.ಪ್ರ.ವಾರ್ತೆ ಮೈಸೂರು ಜೂ. 28
ಗ್ರಾಮೀಣ ಪ್ರದೇಶದಲ್ಲಿ ಬ್ಯಾಂಕ್ ಸ್ಥಾಪನೆ ಅಭಿವೃದ್ಧಿಗೆ ಸಹಕಾರಿ ಎಂದು ಭಾರತೀಯ ರಿಜರ್ವ್ ಬ್ಯಾಂಕಿನ ಉಪರಾಜ್ಯಪಾಲ ಡಾ.ಕೆ.ಸಿ. ಚಕ್ರವರ್ತಿ ಹೇಳಿದರು.
ಹಳ್ಳಿ- ಹಳ್ಳಿಗೂ ಬ್ಯಾಂಕಿಂಗ್ ಸೇವೆ ತಲುಪಿಸುವ ಸಲುವಾಗಿ ಇಲವಾಲ ಹೋಬಳಿಯ ಗುಂಗ್ರಾಲ್ ಛತ್ರದ ಮುಖ್ಯ ರಸ್ತೆಯಲ್ಲಿ ಕೆನರಾ ಬ್ಯಾಂಕ್ ತೆರೆದಿರುವ ನೂತನ ಶಾಖಾ ಕಚೇರಿ ಹಾಗೂ ಎಟಿಎಂ ಸೇವೆಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಹಳ್ಳಿಗಳಲ್ಲಿ ಬ್ಯಾಂಕ್ ಶಾಖೆ ಆರಂಭಿಸಿದರೆ ಅಲ್ಲಿನ ಸುತ್ತಮುತ್ತ ಇರುವ ಗ್ರಾಹಕರಿಗೆ ತುಂಬ ಅನುಕೂಲವಾಗಲಿದೆ. ಸಾಲ ಪಡೆದು ಆರ್ಥಿಕವಾಗಿ ಮೇಲೆ ಬರಲು ಇದರ ಸದುಪಯೋಗ ಪಡೆದುಕೊಳ್ಳಬೇಕು. ಸಾಲ ಪಡೆಯುವುದು ಎಷ್ಟು ಮುಖ್ಯವಾಗಿರುತ್ತದೋ ಅಂತೆಯೇ ಅದನ್ನು ಸಮಯಕ್ಕೆ ಹಿಂತಿರುಗಿಸುವಲ್ಲಿ ಪ್ರಾಮಾಣಿಕವಾಗಿ ಮುಂದಾಗಬೇಕು ಎಂದರು.
ಸಾಮಾಜಿಕ ಹಾಗೂ ಅರ್ಥಿಕ ಸವಲತ್ತುಗಳನ್ನು ಫಲಾನುಭವಿಗಳಿಗೆ ತಲುಪಿಸಲು ಆಧಾರ್ ಸೂಕ್ತ ಯೋಜನೆಯಾಗಿದೆ. ಕರ್ನಾಟಕದವರೇ ಆದ ನಂದನ್ ನೀಲೆಕಣಿ ಅವರು ಇದರ ರೂವಾರಿಯಾಗಿರುವುದು ಕನ್ನಡಿಗರು ಹೆಮ್ಮೆ ಪಡುವ ಸಂಗತಿ. ಆಧಾರ್ ಸರ್ಕಾರ ಮತ್ತು ಫಲಾನುಭವಿಗಳ ನಡುವಿನ ಮಹತ್ವದ ಸೇತು ಸಂಪರ್ಕವಾಗಿದೆ. ಆಧಾರ್ ಸಂಖ್ಯೆ ಅಳವಡಿಸಿಕೊಂಡಿರುವ ತನ್ನ ಗ್ರಾಹಕರಿಗೆ ಕೆನರಾ ಬ್ಯಾಂಕ್ ನೂತನ ಡೆಬಿಟ್ ಕಾರ್ಡ್ ಬಿಡುಗಡೆಗೊಳಿಸಿರುವುದು ತುಂಬ ಉಪಯುಕ್ತವಾಗಿದೆ ಎಂದರು.
ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ಎಚ್.ಡಿ. ಕೋಟೆ ತಾಲೂಕು ಫಾರ್ಮರ್ಸ್ ಕ್ಲಬ್‌ಗೆ ಚಾಲನೆ ನೀಡಲಾಯಿತು.
ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ. ದೇವೇಗೌಡ, ಆರ್‌ಬಿಐನ ಸಹಾಯಕ ಕಾರ್ಯನಿರ್ವಾಹಕ ನಿರ್ದೇಶಕಿ ಡಾ. ದೀಪಾಲಿ ಪಂತ್ ಜೋಶಿ, ಕೆನರಾ ಬ್ಯಾಂಕ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಆರ್.ಕೆ. ದುಬೆ ಮುಖ್ಯ ಅತಿಥಿಯಾಗಿದ್ದರು.
ಮೈಸೂರು ವೃತ್ತ ಉಪ ಮಹಾಪ್ರಬಂಧಕ ಡಾ.ಎಸ್.ಟಿ. ರಾಮಚಂದ್ರ ಹಾಗೂ ಗುಂಗ್ರಾಲ್ ಛತ್ರ ಶಾಖಾ ವ್ಯವಸ್ಥಾಪಕ ಎಂ.ಎಸ್. ಚಿರಂಜೀವಿ ಇದ್ದರು.

ಆರ್ಥಿಕ ಸ್ವಾವಲಂಬನೆಗೆ ಸಹಕಾರಿ
ಮೈಸೂರು:
ಬ್ಯಾಂಕುಗಳು ಆರ್ಥಿಕ ಸ್ವಾವಲಂಬನೆಗೆ ತುಂಬ ಸಹಕಾರಿಯಾಗಿವೆ ಎಂದು ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ. ದೇವೇಗೌಡ ಹೇಳಿದರು. ಗಂಗ್ರಾಲ್ ಛತ್ರದಲ್ಲಿ ಕೆನರಾ ಬ್ಯಾಂಕ್ ಶಾಖೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಕೆನರಾ ಬ್ಯಾಂಕ್ ಆರಂಭಿಸಿರುವ ಈ ನೂತನ ಶಾಖೆಯಿಂದ ಮೊದಲು ಈ ಊರಿಗೆ ಪ್ರಯೋಜನವಾಗಲಿದೆ. ಗ್ರಾಮಸ್ಥರು ಇದು ಪ್ರಯೋಜನ ಪಡೆದು ಸ್ವಂತ ಉದ್ಯೋಗ ಅಭಿವೃದ್ಧಿಗೊಳಿಸಿಕೊಳ್ಳುವ ಮೂಲಕ ತಮ್ಮ ಅಸ್ತಿತ್ವ ಉಳಿಸಿಕೊಳ್ಳಬೇಕು ಎಂದರು. ನಾನು ರಾಜಕೀಯವಾಗಿ ಇಷ್ಟರ ಮಟ್ಟಿಗೆ ಬೆಳೆಯಲು ಬ್ಯಾಂಕಿನ ಸಹಕಾರವೂ ಕಾರಣ. ಬ್ಯಾಂಕಿನಿಂದ ಸಾಲ ಪಡೆದು ಕೃಷಿ ಕಾಯಕ ಆರಂಭಿಸಿ ಹಂತ- ಹಂತವಾಗಿ ಮೇಲೆ ಬಂದಿದ್ದೇನೆ. ನೀವು ಸಹ ಕೃಷಿ ಅವಲಂಬಿಸಿ ಪ್ರಗತಿ ಸಾಧಿಸಿ. ತಪ್ಪದೆ ಪಡೆದ ಸಾಲ ಹಿಂತಿರುಗಿಸಿ. ಇದರಿಂದ ಬೇರೆಯವರು ಸಾಲ ಪಡೆಯುಲು ಅನುಕೂಲವಾಗಲಿದೆ ಎಂದ ಅವರು, ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಕುಟುಂಬ ಹಾಗೂ ಸಮಾಜದ ಒಳಿತಿಗೆ ಮುಂದಾಗಿ ಎಂದು ಆಶಿಸಿದರು.   

ಸಮೃದ್ಧಿ ಕಾರ್ಡ್ ರುಪೇ ಬಿಡುಗಡೆ

ಆಧಾರ್ ಕಾರ್ಡ್ ಸಂಖ್ಯೆ ಅಳವಡಿಸಿಕೊಂಡಿರುವ ಗ್ರಾಹಕರಿಗೆ ಕೆನರಾ ಬ್ಯಾಂಕ್ ಸಮೃದ್ಧಿ ಕಾರ್ಡ್ ರುಪೇ ಎಂಬ ಡೆಬಿಟ್ ಕಾರ್ಡ್ ಬಿಡುಗಡೆಗೊಳಿಸಿದೆ. ಆ ಕಾರ್ಡ್ ಪಡೆದವರು ಪಿಒಎಸ್ ಸೌಲಭ್ಯ ಇರುವ ಮಾರಾಟ ಮಳಿಗೆಗಳಲ್ಲಿ 20 ಸಾವಿರ ಖರೀದಿ ಮಾಡಬಹುದು. ಎಟಿಎಂ ಮೂಲಕ 25 ಸಾವಿರ ಹಣ ಪಡೆಯಬಹುದು. ವ್ಯವಹಾರ ಪ್ರತಿನಿಧಿ ಯಂತ್ರದ ಮೂಲಕ 2 ಸಾವಿರ ಪಡೆಯಬಹುದು. ಈ ಕಾರ್ಡ್ ಸದಸ್ಯತ್ವ ಹಾಗೂ ನವೀಕರಣ ಉಚಿತವಾಗಿದ್ದು, ವಾರ್ಷಿಕ ಶುಲ್ಕ 100 ಆಗಿರುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.