ಮುಸುಕು ಸರಿಯಿತು; ಜೋಳ ಬೆಳೆಯಿತು
-ಅಂಶಿ ಪ್ರಸನ್ನಕುಮಾರ್
ಕ.ಪ್ರ.ವಾರ್ತೆ ಮೈಸೂರು ಜೂ. 28
ವ್ಯವಸಾಯದಲ್ಲಿ ಪದೇ ಪದೇ ಆದ ನಷ್ಟದಿಂದ ಬೇಸತ್ತು ಕೃಷಿಯಿಂದ ವಿಮುಖನಾಗಲು ಮನಸ್ಸು ಮಾಡಿದ್ದ ರೈತ 'ಆತ್ಮ' ಯೋಜನೆಯ ಪ್ರಕಾರ ಮುಸುಕಿನ ಜೋಳ ಬೆಳೆದು, ಲಾಭ ಮಾಡಿದ್ದಾರೆ.
ಟಿ. ನರಸೀಪುರ ತಾಲೂಕಿನ ಚಿದರವಳ್ಳಿಯ ಸತ್ಯನಾರಾಯಣ ಎಂಬವರ ಪುತ್ರ ಸಿ.ಎಸ್. ಬದರಿನಾಥ್ ಅವರಿಗೆ ಪಿತ್ರಾರ್ಜಿತವಾಗಿ ಬಂದಿರುವ 4.17 ಎಕರೆ ಜಮೀನಿನಿದೆ. 2 ಎಕರೆ ಪ್ರದೇಶಕ್ಕೆ ಪಂಪ್ಸೆಟ್ ಹಾಕಿಸಿಕೊಂಡಿದ್ದು, ಅದರಲ್ಲಿ ಕಬ್ಬು ಬೆಳೆಯುತ್ತಿದ್ದಾರೆ. ಇನ್ನುಳಿದ 2.17 ಎಕರೆ ವಿಸ್ತೀರ್ಣ ಜಮೀನಿನಲ್ಲಿ ಮುಸುಕಿನ ಜೋಳ, ಅವರೆ ಮತ್ತು ಅಲಸಂದೆ ಬೆಳೆಯುತ್ತಿದ್ದರು.
ಹಿಂದಿನಿಂದಲೂ ಅವರು ಹಂಗಾಮಿಗೆ ತಕ್ಕಂತೆ ಬೆಳೆ ಬೆಳೆಯುತ್ತಿದ್ದರು. ಬೆಳೆ ಬೆಳೆಯುವ ಖರ್ಚು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿತ್ತು. ಆದರೆ, ಇಳುವರಿ ಮಾತ್ರ ಕುಂಠಿತವಾಗುತ್ತಿತ್ತು. ಇದಕ್ಕೆ ಸ್ಪಷ್ಟ ಮತ್ತು ನಿಖರವಾದ ಕಾರಣ ಅವರ ಅರಿವಿಗೆ ಬರಲೇ ಇಲ್ಲ. ಇದರಿಂದ ಅವರು ಕೃಷಿಯಿಂದ ವಿಮುಖನಾಗುವ ಚಿಂತನೆ ನಡೆಸಿದ್ದರು.
ಆ ಸಮಯದಲ್ಲಿ ಸೋಸಲೆ ಕೃಷಿ ಅಧಿಕಾರಿ ಮುಖಾಂತರ ಟಿ. ನರಸೀಪುರ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ 'ಆತ್ಮ' ಯೋಜನೆಯ ಕಾರ್ಯ ನಿರ್ವಹಿಸುತ್ತಿರುವ ತಾಲೂಕು ತಾಂತ್ರಿಕ ವ್ಯವಸ್ಥಾಪಕರು ಹಾಗೂ ವಿಷಯ ತಜ್ಞರ ಪರಿಚಯವಾಗಿ ಅವರ ಸಮಸ್ಯೆ ಹೇಳಿಕೊಂಡರು. ನಂತರ ಅವರು ಜಮೀನಿನ ಮಣ್ಣಿನ ಪರೀಕ್ಷೆ ಮಾಡಿಸಲು ತಿಳಿಸಿದರು.
ಇದಾದ ಮೇಲೆ ಜಮೀನಿನಲ್ಲಿ ಮುಸುಕಿನ ಜೋಳದ ರೈತ ಕ್ಷೇತ್ರ ಪಾಠಶಾಲೆ ಆರಂಭಿಸುವ ಬಗ್ಗೆ ತಿಳಿಸಿದರು. ಕೆಲವೇ ದಿನಗಳಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಬದರಿನಾಥ್ ಅವರ ಜಮೀನಿಗೆ ಹೋಗಿ ಬೇಸಾಯ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಮುಸುಕಿನ ಜೋಳ ಬಿತ್ತನೆ ಮಾಡುವಂತೆ ಸಲಹೆ ಮಾಡಿದರು. ಅಕ್ಕಪಕ್ಕದ ಜಮೀನಿನ ರೈತರು ಹಾಗೂ ಗ್ರಾಮದ 27 ರೈತರನ್ನು ಸೇರಿಸಿ ರೈತರ ಪಾಠಶಾಲೆ ಗುಂಪನ್ನು ರಚಿಸಿಕೊಳ್ಳುವಂತೆ ತಿಳಿಸಿದರು. ಬದರಿನಾಥ್ ಅವರು 2.17 ಎಕರೆ ಜಮೀನಿನಲ್ಲಿ ಕೃಷಿ ಇಲಾಖೆಯ 'ಆತ್ಮ' ಯೋಜನೆ ಅಧಿಕಾರಿಗಳು ಹೇಳಿಕೊಟ್ಟ ಬೇಸಾಯದ ಕ್ರಮಗಳ ಅನ್ವಯ ಮುಸುಕಿನ ಜೋಳ ಬಿತ್ತನೆ ಮಾಡಿದರು. ಇದಾದ ನಂತರ ಜಮೀನಿಗೆ 20 ಕೆಜಿ ಜಿಂಕ್, 500 ಕೆಜಿ ಜಿಪ್ಸ್ಂ, 500 ಕೆಜಿ ಸೂಪರ್, 100 ಕೆಜಿ ಎಂಓಪಿ ಮತ್ತು 100 ಕೆಜಿ ಯೂರಿಯಾ ಗೊಬ್ಬರ ನೀಡಿದರು. ಇದರ ಜೊತೆಗೆ 3.5 ಟನ್ ಕೊಟ್ಟಿಗೆ ಗೊಬ್ಬರ ಬಳಸಿದರು. 15 ರಿಂದ 20 ದಿನಗಳಿಗೊಮ್ಮೆ 27 ರೈತರಿಗೆ ಕೃಷಿ ವಿಜ್ಞಾನಿಗಳಿಂದ ಹಾಗೂ ವಿಸ್ತರಣಾ ತಜ್ಞರಿಂದ ನಿವೃತ್ತ ಕೃಷಿ ಅಧಿಕಾರಿಗಳಿಂದ ಉತ್ತಮ ಗುಣಮಟ್ಟದ, ತಾಂತ್ರಿಕ ಮಾಹಿತಿ ಕೊಡಿಸಲಾಯಿತು. ಇದರಲ್ಲಿ 'ಆತ್ಮ' ಯೋಜನೆಯ ಪರಿಚಯ ಮಣ್ಣಿನ ಪರೀಕ್ಷೆ, ಮಣ್ಣು ಸವಕಳಿ ತಡಗಟ್ಟುವುದು, ನೀರು ನಿರ್ವಹಣೆ, ಬೆಳೆಯ ವಿವಿಧ ಹಂತಗಳಲ್ಲಿ ಕಂಡು ಬರುವ ರೋಗ ಬಾಧೆಗಳ ನಿವಾರಣೆ, ಕೀಟಗಳ ನಿರ್ವಹಣೆ, ಮಾರುಕಟ್ಟೆ, ಜಾನುವಾರುಗಳ ಪಾಲನೆ ಮತ್ತು ಪೋಷಣೆ, ಅಜೋಲ ಬಳಕೆ ಮತ್ತು ಸಮಗ್ರ ಕೃಷಿಯ ಬಗ್ಗೆ ಸವಿಸ್ತಾರವಾಗಿ ತಿಳಿಸಿಕೊಟ್ಟರು.
ಸತತ ನಷ್ಟದಿಂದ ಬೇಸತ್ತಿದ್ದ ನಾನು ಕೃಷಿಯಿಂದ ವಿಮುಖನಾಗುವ ಬಗ್ಗೆ ಚಿಂತಿಸುತ್ತಿದ್ದಾಗ ಕೃಷಿ ಇಲಾಖೆಯ 'ಆತ್ಮ' ಯೋಜನೆಯ ಅಧಿಕಾರಿಗಳು ನೀಡಿದ ತಾಂತ್ರಿಕ ಸಲಹೆ, ಮಾರ್ಗದರ್ಶನದಿಂದ ಮುಸುಕಿನ ಜೋಳವನ್ನು ಉತ್ತಮವಾಗಿ ಬೆಳೆದೆ. ನಾನು ನಿರೀಕ್ಷಿಸಿದ ಮಟ್ಟಕ್ಕಿಂತಲೂ ಬೆಳೆ ಇಳುವರಿಯು ಬಂದಿದೆ. ಕ್ಷೇತ್ರ ಕೃಷಿ ಪಾಠಶಾಲೆಯಿಂದ ನನಗೆ ಹಾಗೂ ಗ್ರಾಮದ ರೈತರಿಗೆ ತುಂಬಾ ಅನುಕೂಲವಾಗಿದೆ.
-ಸಿ.ಎಸ್. ಬದರಿನಾಥ್, ಚಿದರವಳ್ಳಿ
ರು. 74,940 ನಿವ್ವಳ ಲಾಭ
2.17 ಎಕರೆ ಪ್ರದೇಶದಲ್ಲಿ ಒಟ್ಟು 79 ಕ್ವಿಂಟಲ್ ಇಳುವರಿ ಬಂದಿದ್ದು, ಪ್ರತಿ ಕ್ವಿಂಟಲ್ಗೆ 1,360 ನಂತೆ 1,07,440 ಗಳಿಗೆ ಮಾರಾಟವಾಗಿದೆ. ಬೆಳೆ ಬೆಳೆಯಲು ಆದ ಖರ್ಚು 32,500. ನಿವ್ವಳ ಲಾಭ 74,940. ಇದರಿಂದ ಬದರಿನಾಥ್ ಕೃಷಿಯ ಬಗ್ಗೆ ಖುಷಿಯಾಗಿದ್ದಾರೆ. ಬೇಸಾಯದ ಬಗ್ಗೆ ಅವರಲ್ಲಿ ಉಂಟಾಗಿದ್ದ ಮುಸುಕು ಸರಿದಿದೆ. ಸರಿಯಾದ ಕ್ರಮದಲ್ಲಿ ಬೇಸಾಯ ಮಾಡಿದರೆ ನಷ್ಟವಾಗುವುದಿಲ್ಲ, ಇಳುವರಿ ಹೆಚ್ಚಿ, ಆದಾಯ ಬರುತ್ತದೆ ಎಂಬುದನ್ನು ಮನಗಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

