ಮೈಸೂರು

ರಾಮದಾಸ್ ವಿರುದ್ಧ ವೀಕ್ಷಕರಿಗೆ ಕೈ ದೂರು

Published On :

ಮೈಸೂರು: ನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರಾಮದಾಸ್ ತಮ್ಮ ನೇತೃತ್ವದ ಆಸರೆ ಟ್ರಸ್ಟ್ ಮೂಲಕ ಚುನಾವಣಾ ಅಕ್ರಮ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಸಂಸದ ಎಚ್. ವಿಶ್ವನಾಥ್ ಅವರು ಚುನಾವಣಾ ವೀಕ್ಷಕ ನವೀನ್ ರಾಜ್‌ಸಿಂಗ್ ಅವರಿಗೆ ದೂರು ನೀಡಿದರು.
ನಜರ್‌ಬಾದಿನ ಸರ್ಕಾರಿ ಅತಿಥಿ ಗೃಹದಲ್ಲಿ ನವೀನ್ ರಾಜ್‌ಸಿಂಗ್ ಅವರನ್ನು ಭೇಟಿ ಮಾಡಿದ ಸಂಸದ ಎಚ್. ವಿಶ್ವನಾಥ್, ಶಾಸಕ ತನ್ವೀರ್‌ಸೇಠ್, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಮಾಜಿ ಮೇಯರ್ ವಾಸು ನೇತೃತ್ವದ ತಂಡ ಆಸರೆ ಟ್ರಸ್ಟ್‌ನಿಂದ ನೀಡಲಾದ ಕೈಗಡಿಯಾರ, ಶಾಲು, ಟಿ- ಶರ್ಟ್ ಮತ್ತು ನಾಮಫಲಕ ಒಪ್ಪಿಸಿದರು.
ಆಸರೆ ಟ್ರಸ್ಟ್ ಹೆಸರು ಇರುವ ಈ ಎಲ್ಲಾ ವಸ್ತುಗಳನ್ನು ಕೆ.ಆರ್. ಕ್ಷೇತ್ರ ವ್ಯಾಪ್ತಿಯ ಮನೆ ಮನೆಗಳಿಗೆ ಹಂಚಲಾಗುತ್ತಿದೆ. ಉಡುಗೊರೆ ಮತ್ತು ಹಣ ನೀಡುವ ಮೂಲಕ ಮತದಾರರನ್ನು ಓಲೈಸಲಾಗುತ್ತಿದೆ. ಆ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಲಾಗುತ್ತಿದೆ. ಈ ಬಗ್ಗೆ ಜಿಲ್ಲಾ ಚುನಾವಣಾ ಆಯೋಗ ಕಠಿಣ ಕ್ರಮ ಕೈಗೊಳ್ಳಬೇಕು. ನೀತಿ ಸಂಹಿತೆ ಜಾರಿಗೆ ಬಂದ ಬಳಿಕವು ಹಲವು ವಾರ್ಡ್‌ಗಳಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿ ನಡೆಯುತ್ತಿದೆ ಎಂದು ಅವರು ದೂರಿದರು.
ಈ ಕೂಡಲೇ ಪಾಲಿಕೆ ಯಾವುದೇ ಕಾಮಗಾರಿ ಮಾಡದಂತೆ ಸೂಚನೆ ನೀಡಬೇಕು. ಕೆಲ ರಾಜಕೀಯ ಮುಖಂಡರು ಕೆ.ಆರ್. ಕ್ಷೇತ್ರದಲ್ಲಿ ಕೆಲ ಮತದಾರರಿಗೆ ಕೂಪನ್ ನೀಡಿ ನಂತರ ಸೀರೆ ಮತ್ತು ಇತರೆ ಉಡುಗೊರೆ ನೀಡುತ್ತಿದ್ದಾರೆ. ಕೆಲವು ವಾರ್ಡ್‌ಗಳಲ್ಲಿ ಕಾನೂನು ಬಾಹಿರವಾಗಿ ಬ್ಯಾನರ್ ಮತ್ತು ಬಂಟಿಂಗ್ಸ್ ಹಾಕಲಾಗಿದೆ. ತಡರಾತ್ರಿಯವರೆಗೆ ಕೆಲವು ವಾರ್ಡ್‌ಗಳಲ್ಲಿ ಮತಯಾಚನೆ ಮಾಡಲಾಗುತ್ತಿದೆ. ಇತ್ತೀಚೆಗೆ ಕಡ್ಡಾಯವಾಗಿ ಸೆಟ್‌ಟಾಪ್ ಬಾಕ್ಸ್ ಅಳವಡಿಸಬೇಕಿರುವುದರಿಂದ ಕೆಲವು ಕೇಬಲ್ ಆಪರೇಟರ್‌ಗಳ ಮೂಲಕ ಉಚಿತವಾಗಿ ಸೆಟ್‌ಟಾಪ್ ಬಾಕ್ಸ್‌ಗಳನ್ನು ಕೆ.ಆರ್. ಕ್ಷೇತ್ರದ ಮತದಾರರಿಗೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಈ ಸಂಬಂಧ ಕೂಡಲೇ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಡಾ. ರಾಮೇಗೌಡ ಅವರು ಕ್ರಮ ಕೈಗೊಳ್ಳಬೇಕು. ತಪ್ಪಿದರೆ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಅವರು ಎಚ್ಚರಿಕೆ ನೀಡಿದರು.
ಈ ವಿಷಯದಲ್ಲಿ ಪೊಲೀಸರು, ಕೆಲವು ಅಧಿಕಾರಿಗಳು ಶಾಮೀಲಾಗಿರುವ ಶಂಕೆ ಇದೆ. ಮತದಾರರಿಗಾಗಿ ಮಿಕ್ಸಿ, ಸೆಟ್‌ಟಾಪ್ ಬಾಕ್ಸ್ ಮುಂತಾದ ಉಡುಗೊರೆಯನ್ನು ಹೊರಗಿನಿಂದ ತರಿಸಲಾಗುತ್ತಿದೆ. ಆದ್ದರಿಂದ ಕೂಡಲೇ ನಗರದ ನಾಲ್ಕು ಕಡೆಗಳಲ್ಲಿ ನಾಕಾಬಂಧಿ ರಚಿಸಬೇಕು. ಅಲ್ಲದೆ ಕಾಂಗ್ರೆಸ್ ಅಭ್ಯರ್ಥಿಗಳಿಗೆ ರಕ್ಷಣೆ ನೀಡಬೇಕು. ವಾರ್ಡ್ ನಂ. 62ರ ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ಜೆಡಿಎಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ದೌರ್ಜನ್ಯ ನಡೆಸುತ್ತಿದ್ದಾರೆ. ಚಾಮರಾಜ ಕ್ಷೇತ್ರದ ಅನೇಕ ಮತದಾರರ ಹೆಸರನ್ನು ಕೆ.ಆರ್. ಕ್ಷೇತ್ರ ವ್ಯಾಪ್ತಿಗೆ ಸೇರಿಸುತ್ತಿರುವುದು ದುರಾದೃಷ್ಟ. ಈ ಎಲ್ಲಾ ವಿಷಯದ ಬಗ್ಗೆ ಚುನಾವಣಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಚುನಾವಣಾ ಅಕ್ರಮದ ದೂರು ದಾಖಲಿಸಿಕೊಳ್ಳಲು 24್ಢ7 ಚುನಾವಣಾ ಸೆಲ್ ತೆರೆಯಬೇಕು ಎಂದು ಆಗ್ರಹಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಚುನಾವಣಾ ವೀಕ್ಷಕ ನವೀನ್ ರಾಜ್‌ಸಿಂಗ್, ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡುವುದಾಗಿ ಹೇಳಿದರು.
ಶಾಸಕ ತನ್ವೀರ್‌ಸೇಠ್, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಮಾಜಿ ಮೇಯರ್ ವಾಸು, ನಗರ ಕಾಂಗ್ರೆಸ್ ಮುಖಂಡ ಎಚ್.ಎ. ವೆಂಕಟೇಶ್, ಎಂ. ಲಕ್ಷ್ಮಣ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.