ಬ್ರಿಟೀಷರ ನಾಡಲ್ಲಿ ಬಸವತತ್ವ ಪ್ರಚಾರ ಕೈಂಕರ್ಯ
ಮೈಸೂರು: ಕಳೆದ ನಲವತ್ತೈದು ವರ್ಷಗಳಿಂದಲೂ ಇಂಗ್ಲೆಂಡ್ನಲ್ಲಿರುವ ಡಾ.ಕೆ.ಎಸ್. ಮಹದೇವಯ್ಯ ಅವರು ಅಲ್ಲಿ ಬಸವ ತತ್ವ ಪ್ರಚಾರದಲ್ಲಿ ನಿರತರಾಗಿದ್ದಾರೆ.
ಡಾ. ಮಹದೇವಯ್ಯ ಅವರು ಮೂಲತಃ ಬೆಂಗಳೂರು ಉತ್ತರ ತಾಲೂಕಿನ ಮಾಗಡಿ ರಸ್ತೆಯಲ್ಲಿರುವ ಕನ್ನಳ್ಳಿ ಗ್ರಾಮದವರು. ಇವರ ತಂದೆ ಪಟೇಲ್ ಕೆ. ಸಾವಂದಯ್ಯ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿದ್ದವರು. ಮಹದೇವಯ್ಯ ಅವರು ಮೈಸೂರಿಗೆ ಬಂದಿದ್ದು ಸಂಬಂಧಿಕರಾದ ಡಾ.ಎಚ್.ಎಂ. ಸದಾಶಿವಯ್ಯ ಅವರಿಂದಾಗಿ. ಸದಾಶಿವಯ್ಯ ಅವರು ಮೈಸೂರು ವಿವಿಯ ಸಮಾಜಶಾಸ್ತ್ರ ವಿಭಾಗದ ಪ್ರವಾಚಕರಾಗಿದ್ದರು.
ಮಹದೇವಯ್ಯ ಅವರು ಆರಂಭದಲ್ಲಿ ಮೈಸೂರಿನ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯದಲ್ಲಿ (ಸಿಎಫ್ಟಿಆರ್ಐ) ಪ್ರೋಟಿನ್ ಟೆಕ್ನಾಲಜಿ ವಿಭಾಗದಲ್ಲಿ ವಿಜ್ಞಾನಿಯಾಗಿದ್ದರು. ನಂತರ ಉದ್ಯೋಗ ನಿಮಿತ್ತ ಇಂಗ್ಲೆಂಡ್ಗೆ ತೆರಳಿದರು. ಕಳೆದ 45 ವರ್ಷಗಳಿಂದಲೂ ಲಂಡನ್ ಕಿಂಗ್ಸ್ ಫೀಲ್ಡ್ ಅವಿನ್ಯೂನ ನಾಥ್ ಆರೋದಲ್ಲಿ ವಾಸವಿದ್ದಾರೆ. ರಾಯಲ್ ಫ್ರೀ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಪತ್ನಿ ಕೂಡ ಉದ್ಯೋಗದಲ್ಲಿದ್ದು, ಮಕ್ಕಳೊಂದಿಗೆ ಅಲ್ಲೆ ನೆಲೆ ನಿಂತಿದ್ದಾರೆ.
ಕರ್ನಾಟಕದಿಂದ ಲಂಡನ್ಗೆ ಯಾರೇ ಹೋದರೂ ಡಾ.ಮಹದೇವಯ್ಯ ಅವರ ಆತಿಥ್ಯ ಸ್ವೀಕರಿಸಲೇಬೇಕು. ಕರ್ನಾಟಕದಿಂದ ಅಲ್ಲಿಗೆ ಬರುವ ಎಲ್ಲಾ ಸಾಹಿತಿಗಳು, ಕಲಾವಿದರು, ರಂಗಕರ್ಮಿಗಳ ಸಂಪರ್ಕದಲ್ಲಿರುತ್ತಾರೆ. ಇದಲ್ಲದೇ ಬಸವ ಇಂಟರ್ ನ್ಯಾಷನಲ್ ಫೌಂಡೇಷನ್ (ಬಿಐಎಫ್) ರಚಿಸಿಕೊಂಡಿದ್ದು, ಇದಕ್ಕೆ ಲಂಡನ್ ಹಾಗೂ ಧಾರವಾಡದಲ್ಲಿ ಕಚೇರಿ ಇದೆ. ಈ ಫೌಂಡೇಷನ್ ಮೂಲಕ ಕಳೆದ 22 ವರ್ಷಗಳಲ್ಲಿ 90 ಲಕ್ಷ ನೆರವು ಕೊಡಿಸಿದ್ದಾರೆ. ಕರ್ನಾಟಕ, ತಮಿಳುನಾಡಿನಲ್ಲಿ ಪ್ರಕೃತಿ ವಿಕೋಪ ಉಂಟಾದಾಗ ನೆರವಾಗಿದ್ದಾರೆ. ಟಿಬೆಟಿಯನ್ನರ ಹೋರಾಟ, ದಕ್ಷಿಣ ಆಫ್ರಿಕನ್ನರ ಹೋರಾಟಕ್ಕೆ ನೆರವು ನೀಡಿದ್ದಾರೆ.
ಮೆಂಚೆಸ್ಟರ್ ವಿವಿಯಲ್ಲಿ ಸಂಶೋಧನೆಗೆ ನೆರವಾಗಿ: ಮೆಂಚೆಸ್ಟರ್ ವಿವಿಯಲ್ಲಿ ಬಸವಣ್ಣನವರ ತತ್ವಗಳ ಬಗ್ಗೆ ಸಂಶೋಧನೆಗೆ ಕರ್ನಾಟಕ ಸರ್ಕಾರ 1.25 ಕೋಟಿ ನೆರವು ನೀಡಬೇಕು ಎಂಬುದು ಡಾ. ಮಹದೇವಯ್ಯ ಅವರ ಮನವಿ. ಅಲ್ಲಿನ ಮೇಯರ್ ಆಗಿದ್ದ ಹಾಲಿ ಕೌನ್ಸಿಲರ್ ನೀರಜ್ ಪಾಟೀಲ್ ಅವರಿಂದಾಗಿ ಒಂದು ಕಡೆ ಹೌಸ್ ಆಫ್ ಕಾಮನ್ಸ್, ಮತ್ತೊಂದು ಕಡೆ ಲ್ಯಾಂಬತ್ ಪಾರ್ಕ್ ಇರುವ ಸ್ಥಳದಲ್ಲಿ ಬಸವಣ್ಣನವರ ಪುತ್ಥಳಿ ನಿರ್ಮಾಣವಾಗಿದೆ. ಬಿ.ಎಸ್. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಶೇ.75 ರಷ್ಟು ಹಣವನ್ನು ಸರ್ಕಾರದಿಂದ ನೀಡಿದರು. ಉಳಿಕೆ ಹಣವನ್ನು ಖಾಸಗಿಯವರು ಭರಿಸಿದ್ದಾರೆ
ಕನ್ನಳ್ಳಿಯಲ್ಲಿ ಬಸವ ಪುತ್ಥಳಿ: ಲಂಡನ್ನಿನ ಬಸವ ಅಂತರ್ರಾಷ್ಟ್ರೀಯ ಪ್ರತಿಷ್ಠಾನ ಹಾಗೂ ಪಟೇಲ್ ಕೆ. ಸಾವಂದಯ್ಯ ಟ್ರಸ್ಟ್ ವತಿಯಿಂದ ಮಾ. 10 ರಂದು ಬೆಂಗಳೂರು ಜಿಲ್ಲೆ ಮಾಗಡಿ ರಸ್ತೆಯಲ್ಲಿರುವ ಕನ್ನಳ್ಳಿ ಗ್ರಾಮದಲ್ಲಿ ಜಗಜ್ಯೋತಿ ಬಸವೇಶ್ವರ ಕಂಚಿನ ಪುತ್ಥಳಿ ಅನಾವರಣಗೊಳ್ಳಲಿದೆ. ಇದು ಕೂಡಲ ಸಂಗಮದಲ್ಲಿರುವ ಬಸವಣ್ಣ ಪುತ್ಥಳಿಯ ಮಾದರಿ.
ಅಂದು ಬೆಳಗ್ಗೆ 11ಕ್ಕೆ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಪುತ್ಥಳಿ ಅನಾವರಣಗೊಳಿಸಲಿದ್ದು, ಬೇಲಿಮಠದ ಶಿವರುದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೊ.ರು. ಚನ್ನಬಸಪ್ಪ, ಅಧ್ಯಕ್ಷತೆ ವಹಿಸುವರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಧ್ವನಿಸುರುಳಿ, ಪ್ರೊ. ಜಿ.ಎಸ್. ಸಿದ್ದಲಿಂಗಯ್ಯ ನೆನಪು ಸಂಚಿಕೆ ಬಿಡುಗಡೆಗೊಳಿಸುವರು. ಬಿ.ಎಲ್. ಪಾಟೀಲ್, ಕೆ.ವಿ. ನಾಗರಾಜಮೂರ್ತಿ, ಕೆ.ಎಸ್. ಮೃತ್ಯುಂಜಯ, ಮೈಸೂರಿನ ಮಾಜಿ ಮೇಯರ್ ಆರ್.ಜಿ. ನರಸಿಂಹ ಅಯ್ಯಂಗಾರ್, ಜೆಡಿಎಸ್ ಮುಖಂಡ ಎ.ವಿ. ರಾಮಕೃಷ್ಣ, ಸಾಹಿತಿ ಪ್ರೊ. ಕೆ.ಎಸ್. ಭಗವಾನ್ ಮೊದಲಾದವರು ಭಾಗವಹಿಸುವರು.
ಅಂದೇ ಡಾ.ಮಹದೇವಯ್ಯ ಅವರ 75ನೇ ಹುಟ್ಟುಹಬ್ಬ. ಈ ಸಮಾರಂಭವನ್ನು ಮೋಟಗಿ ಮಠದ ಪ್ರಭುಚನ್ನಬಸವ ಸ್ವಾಮೀಜಿ ಉದ್ಘಾಟಿಸುವರು. ನಂತರ ವಚನ ವಚನಗೋಷ್ಠಿ, ವಚನ ಗಾಯನ, ಚಂದ್ರಶೇಖರ ಕಂಬಾರ ಅವರ ಶಿವರಾತ್ರಿ ನಾಟಕ ಪ್ರದರ್ಶನಗೊಳ್ಳಲಿದೆ.
ಶಾಲೆಗೆ ಕೊಡುಗೆ: ಡಾ. ಮಹದೇವಯ್ಯ ಅವರು ಹುಟ್ಟಿದೂರಿನ ಶಾಲೆಗೆ 15 ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಿಸಿಕೊಟ್ಟಿದ್ದಾರೆ. 10 ಲಕ್ಷ ಠೇವಣಿ ಇಟ್ಟು, ವಾರ್ಷಿಕ ಬರುವ 90 ಸಾವಿರ ಬಡ್ಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರ್ಷಿಕೋತ್ಸವ, ರಾಜ್ಯ ಪ್ರವಾಸ ಹಾಗೂ ಉಪನ್ಯಾಸಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಕಾಯಕವೇ ಕೈಲಾಸ ಎಂಬ ತತ್ವ ನೀಡಿದ ಬಸವಣ್ಣನವರು ವಿದೇಶದಲ್ಲಿ ಹುಟ್ಟಿದ್ದರೆ ಇಷ್ಟೊತ್ತಿಗೆ ವಿಶ್ವಮಾನ್ಯರಾಗುತ್ತಿದ್ದರು. ಆದರೆ, ಅವರು ಕರ್ನಾಟಕದಲ್ಲಿ ಹುಟ್ಟಿದ್ದರಿಂದ ನಮ್ಮ ದೇಶದಲ್ಲಿಯೇ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಈಗಿನ ಸಂಸತ್ಗೆ ಮಾದರಿಯಾದ ಅನುಭವ ಮಂಟಪ, ಮಹಿಳಾ ಪರ ನಿಲುವು, ಕಾಯಕ ತತ್ವ ಪ್ರಸಾರಕ್ಕಾಗಿ ಭಾರತೀಯ ವಿದ್ಯಾಭವನ, ಶ್ರೀರಾಮಕೃಷ್ಣ ಮಠದ ಮಾದರಿಯಲ್ಲಿ ಲಂಡನ್ನಲ್ಲಿ ಕಟ್ಟಡ ನಿರ್ಮಿಸಬೇಕು ಎಂಬುದು ಡಾ. ಮಹದೇವಯ್ಯ ಅವರ ಕನಸು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

