ಸರ್ಕಾರಿ ಕಾಲೇಜುಗಳಿಗೆ ಅನು'ದಾನ'
ಕ.ಪ್ರ. ವಾರ್ತೆ ಮೈಸೂರು ಮಾ. 3
ರಾಜ್ಯದ ವಿವಿಧ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಹೊಸ ಕಟ್ಟಡ, ಹೆಚ್ಚುವರಿ ಕೊಠಡಿ, ಪ್ರಯೋಗಾಲಯ ಮತ್ತು ಶೌಚಾಲಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಾಲೇಜು ಶಿಕ್ಷಣ ಇಲಾಖೆಯು 2012-13ನೇ ಸಾಲಿನ ವಿವಿಧ ಯೋಜನೆಗಳಡಿ ಅನುದಾನ ಬಿಡುಗಡೆಗೊಳಿಸಿದೆ.
ರಾಜ್ಯದ 3 ಕಾಲೇಜುಗಳ ಹೊಸ ಕಟ್ಟಡ, 23 ಕಾಲೇಜುಗಳ ಹೆಚ್ಚುವರಿ ಕೊಠಡಿ, 54 ಕಾಲೇಜುಗಳ ಪ್ರಯೋಗಾಲಯ ಕಟ್ಟಡ ಹಾಗೂ 129 ಕಾಲೇಜುಗಳ ಶೌಚಾಲಯ ನಿರ್ಮಾಣ ಸೇರಿ ಒಟ್ಟು 209 ಕಾಮಗಾರಿಗಳನ್ನು 62.35 ಕೋಟಿ ವೆಚ್ಚದಲ್ಲಿ ನಿರ್ಮಾಣಕ್ಕೆ ದಕ್ಷಿಣ ಲೋಕೋಪಯೋಗಿ ಇಲಾಖೆಗೆ ನೀಡಲಾಗಿತ್ತು.
ಈ ಕಾಮಗಾರಿಗಳ ಪೈಕಿ 1 ಹೊಸ ಕಟ್ಟಡ, 22 ಕಾಲೇಜುಗಳ ಹೆಚ್ಚುವರಿ ಕೊಠಡಿ, 46 ಪ್ರಯೋಗಾಲಯ ಕಟ್ಟಡ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. 129 ಕಾಲೇಜುಗಳ ಶೌಚಾಲಯ ನಿರ್ಮಾಣದ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲು ಸಂಬಂಧಪಟ್ಟ ಪ್ರಾಂಶುಪಾಲರಿಗೆ ವಹಿಸಲಾಗಿದೆ. ಈ ಕಾಮಗಾರಿಗಳಿಗೆ ಗಿರಿಜನ ಉಪಯೋಜನೆ ಅಡಿಯಲ್ಲಿ ಪ್ರಥಮ ಕಂತಿನ ಅನುದಾನ 14.27 ಕೋಟಿ, ನಬಾರ್ಡ್ ಕಾಮಗಾರಿಗಳ ಯೋಜನೆಯಡಿಯಲ್ಲಿ 26.47 ಕೋಟಿ ಸೇರಿ ಒಟ್ಟಾರೆ 40.74 ಕೋಟಿಯನ್ನು ದಕ್ಷಿಣ ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ ಅವರಿಗೆ ಬಿಡುಗಡೆಗೊಳಿಸಲಾಗಿದೆ.
ವಿಶೇಷ ಘಟಕ: ರಾಜ್ಯದ 2 ಕಾಲೇಜುಗಳ ಹೊಸ ಕಟ್ಟಡ, 21 ಕಾಲೇಜುಗಳಿಗೆ ಹೆಚ್ಚುವರಿ ಕೊಠಡಿ, 54 ಕಾಲೇಜುಗಳ ಪ್ರಯೋಗಾಲಯ ಕಟ್ಟಡ ಹಾಗೂ 71 ಕಾಲೇಜುಗಳ ಶೌಚಾಲಯ ನಿರ್ಮಾಣಕ್ಕಾಗಿ 46.35 ಕೋಟಿ ವೆಚ್ಚದ 148 ಕಾಮಗಾರಿಗಳನ್ನು ಉತ್ತರ ಲೋಕೋಪಯೋಗಿ ಇಲಾಖೆಗೆ ಅನುಮೋದನೆ ನೀಡಲಾಗಿದೆ. ಇದರಲ್ಲಿ 2 ಹೊಸ ಕಟ್ಟಡ, 19 ಕಾಲೇಜುಗಳ ಹೆಚ್ಚುವರಿ ಕೊಠಡಿ, 48 ಪ್ರಯೋಗಾಲಯ ಕಟ್ಟಡ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. 71 ಕಾಲೇಜುಗಳ ಶೌಚಾಲಯ ನಿರ್ಮಾಣದ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲು ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರಿಗೆ ಅನುಮತಿ ನೀಡಲಾಗಿದೆ.
ವಿಶೇಷ ಘಟಕ ಯೋಜನೆಯಡಿ ಹೊಸ ಕಟ್ಟಡ ಹಾಗೂ ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ ಪ್ರಥಮ ಕಂತಿನಲ್ಲಿ 24.63 ಕೋಟಿ ಹಾಗೂ 71 ಕಾಲೇಜು ಶೌಚಾಲಯ ನಿರ್ಮಾಣದ ಕಾಮಗಾರಿಗೆ 4.95 ಕೋಟಿ ಸೇರಿ ಒಟ್ಟು 29.58 ಕೋಟಿಯನ್ನು ಉತ್ತರ ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ಗೆ ಬಿಡುಗಡೆ ಮಾಡಲಾಗಿದೆ.
ಪ್ರಧಾನ ಕಾಮಗಾರಿಗಳ ಯೋಜನೆ
ಬೆಂಗಳೂರಿನ ರೈಟ್ಸ್ ಸಂಸ್ಥೆಗೆ 20 ಕಾಲೇಜುಗಳ ಹೊಸ ಕಟ್ಟಡ ಹಾಗೂ 47 ಕಾಲೇಜುಗಳ ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ ಒಟ್ಟು 85.45 ಕೋಟಿ ವೆಚ್ಚದಲ್ಲಿ 67 ಕಾಮಗಾರಿಗಳನ್ನು ಅನುಮೋದಿಸಿತ್ತು. ಇದರಲ್ಲಿ 66 ಕಾಲೇಜುಗಳ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತು. ಪ್ರಧಾನ ಕಾಮಗಾರಿಗಳು ಯೋಜನೆ ಅಡಿಯಲ್ಲಿ ಪ್ರಥಮ ಕಂತಿನಲ್ಲಿ 25.37 ಕೋಟಿ ಬಿಡುಗಡೆಗೊಳಿಸಲಾಗಿದೆ. ಕರ್ನಾಟಕ ಗೃಹ ಮಂಡಳಿಗೆ 17 ಕಾಲೇಜುಗಳ ಹೊಸ ಕಟ್ಟಡ, 74 ಕಾಲೇಜುಗಳ ಹೆಚ್ಚುವರಿ ಕೊಠಡಿ ಸೇರಿ 106.45 ಕೋಟಿ ವೆಚ್ಚದ 91 ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದ್ದು. ಈ ಪೈಕಿ 87 ಕಾಲೇಜುಗಳ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಪ್ರಧಾನ ಕಾಮಗಾರಿಗಳು ಯೋಜನೆ ಅಡಿಯಲ್ಲಿ ಪ್ರಥಮ ಕಂತಿನಲ್ಲಿ 29.88 ಕೋಟಿ ಅನುದಾನವನ್ನು ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರು ಬಿಡುಗಡೆ ಮಾಡಿದ್ದಾರೆ.
- ಬಿ. ಶೇಖರ್ ಗೋಪಿನಾಥಂ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

