ಮೈಸೂರು

ಸೀಳು ತುಟಿ ಸಮಸ್ಯೆಗೆ ಉಚಿತ ಶಸ್ತ್ರಚಿಕಿತ್ಸೆ

Published On :

ಮೈಸೂರು: ಸೀಳು ತುಟಿ ಮತ್ತು ಸೀಳು ಕಿರುನಾಲಿಗೆ ಸಮಸ್ಯೆಗೆ ಉಚಿತ ಶಸ್ತ್ರಚಿಕಿತ್ಸೆಯು ಮೈಸೂರಿನ ವಿಕ್ರಮ್ ಆಸ್ಪತ್ರೆ ಮತ್ತು ನ್ಯೂಯಾರ್ಕ್‌ನ ಸ್ಮೈಲ್ ಟ್ರೈನ್ ಸಹಭಾಗಿತ್ವದಲ್ಲಿ ವಿಕ್ರಮ್ ಜೀವ್ ಆಸ್ಪತ್ರೆಯಲ್ಲಿ ಲಭ್ಯವಿದೆ. ವಿಕ್ರಮ್ ಜೀವ್ ಆಸ್ಪತ್ರೆಯ ಉತ್ತಮ ಆರೈಕೆ ದೃಷ್ಟಿಯಿಂದ ಸ್ಮೈಲ್ ಟ್ರೈನ್ 2 ವರ್ಷಗಳ ಕಾಲ ಗುತ್ತಿಗೆ (2014ರ ಡಿ. 31 ರವರೆಗೆ) ನವೀಕರಿಸಿದೆ. ಇಲ್ಲಿಯವರೆಗೆ ಸುಮಾರು 500 ಜನರು ಈ ಶಸ್ತ್ರಚಿಕಿತ್ಸೆಯ ಲಾಭ ಪಡೆದಿದ್ದಾರೆ. ಯಾವುದೇ ಶುಲ್ಕವಿಲ್ಲದೆ ವಾರದ ಎಲ್ಲಾ ದಿನಗಳಲ್ಲಿಯೂ ಸಮಾಲೋಚನೆ ಲಭ್ಯ ಇರುತ್ತದೆ. ಪ್ಲಾಸ್ಟಿಕ್ ಶಸ್ತ್ರಚಿಕಿತ್ಸಕ ಡಾ. ಸತೀಶ್ ಹಾಗೂ ಮ್ಯಾಕ್ಸಿಲ್ಲೋಫೇಶಿಯಲ್ ಶಸ್ತ್ರಚಿಕಿತ್ಸಕ ಡಾ.ಎಂ.ಪಿ. ರವಿಕುಮಾರ್ ಅವರು ಲಭ್ಯವಿರುತ್ತಾರೆ. ದೂ. 0821- 4242462, ಮೊ. 9686669519
ಅಂಧ ವಿದ್ಯಾರ್ಥಿಗಳ ಗಾಯನ ಸ್ಪರ್ಧೆ
ಮೈಸೂರು: ಅಂಧ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದಲ್ಲಿ ಏರ್ಪಡಿಸಿದ್ದ ಗಾಯನ ಸ್ಪರ್ಧೆಯು ಇಲ್ಲಿನ ಗೋಕುಲಂ ದಿವ್ಯಾ ಜ್ಯೋತಿ ಚಾರಿಟಬಲ್ ಟ್ರಸ್‌ನಲ್ಲಿ ಶನಿವಾರ ನಡೆಯಿತು.  ಪ್ರಾದೇಶಿಕ ಪ್ರಾಕೃತಿಕ ಇತಿಹಾಸ ಸಂಗ್ರಹಾಲಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಈ ಸ್ಪರ್ಧೆಯನ್ನು ಎಂಡಿಎ ಆಯುಕ್ತ ಡಾ.ಸಿ.ಜಿ. ಬೆಟ್‌ಸೂರ್‌ಮಠ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಅಂಗವಿಕಲರ ಪ್ರತಿಭೆ ಅನಾವರಣಕ್ಕೆ ಅವಕಾಶ ಕಲ್ಪಿಸಲು ಇಂತಹ ಕಾರ್ಯಕ್ರಮ ಏರ್ಪಡಿಸುತ್ತಾ ಬಂದಿರುವುದು ಶ್ಲಾಘನೀಯ. ಸಂಸ್ಥೆಯ ಅಭಿವೃದ್ಧಿಗೆ ಅಗತ್ಯ ನೆರವು ನೀಡುವುದಾಗಿ ಅವರು ತಿಳಿಸಿದರು. ಪ್ರಾದೇಶಿಕ ಪ್ರಾಕೃತಿಕ ಇತಿಹಾಸ ಸಂಗ್ರಹಾಲಯದ ಶೈಕ್ಷಣಿಕ ಸಮನ್ವಯಾಧಿಕಾರಿ ಬಿ.ಎಸ್. ಯೋಗೇಂದ್ರ, ರೋಟರಿ ಮೈಸೂರು ಚುನಾಯಿತ ಅಧ್ಯಕ್ಷ ಮನೋಹರ್ ಮುಖ್ಯ ಅತಿಥಿಗಳಾಗಿದ್ದರು. ಸಂಸ್ಥೆ ವ್ಯವಸ್ಥಾಪಕ ಟ್ರಸ್ಟಿ ಎಂ.ಎ. ಶಿವಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಶಾಲೆ ಹಾಗೂ ಕಾಲೇಜಿನಿಂದ ಸುಮಾರು 50 ಮಂದಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಬಹುಮಾನ: ಸಂಜೆ ನಡೆದ ಸಮಾರೋಪದಲ್ಲಿ ಆಯಿಶ್ ಮಾಜಿ ನಿರ್ದೇಶಕ ಡಾ. ನ. ರತ್ನ ರೋಟರಿ ಪಶ್ಚಿಮದ ಅಧ್ಯಕ್ಷ ವಿ.ಎನ್. ಪ್ರಸಾದ್ ಅವರು ವಿಜೇತರಿಗೆ ಬಹುಮಾನ ವಿತರಿಸಿದರು.
ಕುಕ್ಕರಹಳ್ಳಿ ಕೆರೆ ಬಳಿ ರಾಮದಾಸ್ ಪ್ರಚಾರ
ಮೈಸೂರು: ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರಾಮದಾಸ್ ಭಾನುವಾರ ಬೆಳ್ಳಂಬೆಳಗ್ಗೆ ಕುಕ್ಕರಹಳ್ಳಿ ಕೆರೆಯ ಗಂಗೋತ್ರಿ ದ್ವಾರದ ಬಳಿ ಪ್ರತ್ಯಕ್ಷರಾಗಿ ವಾಯುವಿಹಾರಿಗಳನ್ನು ಮಾತನಾಡಿಸಿ, ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಿದರು. ಈ ಸಂದರ್ಭದಲ್ಲಿ ಮುಖಂಡ ಮೋಹನ್ ಮೊದಲಾದವರು ಇದ್ದರು. ಬಿಜೆಪಿ ಅಭ್ಯರ್ಥಿ ಬಿ.ವಿ. ಮಂಜುನಾಥ್ ಮತ್ತು ಬೆಂಬಲಿಗರು ಸಹ ಅಗ್ರಹಾರ ಸುತ್ತಮುತ್ತಲ ಪ್ರದೇಶದಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಕರಪತ್ರಗಳು, ಪಕ್ಷದ ಬಾವುಟ ಮತ್ತು ಬ್ಯಾನರ್ ಹಿಡಿದು ಮತಯಾಚಿಸಿದರು.
ಬಿಎಸ್‌ಆರ್ ಕಾಂಗ್ರೆಸ್‌ವತಿಯಿಂದ ಬೈಕ್ ರ್ಯಾಲಿ
ಮೈಸೂರು: ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಬೈಕ್ ರ್ಯಾಲಿ ಮೂಲಕ ಪಾಲಿಕೆಯ 55ನೇ ವಾರ್ಡ್‌ನಲ್ಲಿ ಪ್ರಚಾರ ನಡೆಸಿದರು. 55ನೇ ವಾರ್ಡ್‌ನ ಪಕ್ಷದ ಅಭ್ಯರ್ಥಿ ಶೇಖ್ ಹುಸೇನ್ ಪರವಾಗಿ ಹಮ್ಮಿಕೊಂಡಿದ್ದ ಈ ಪ್ರಚಾರ ಬೈಕ್ ರ್ಯಾಲಿಯನ್ನು ಪಕ್ಷದ ಮೈಸೂರು ಜಿಲ್ಲಾ ಉಸ್ತುವಾರಿ ಇಕ್ರಂ ಸಿದ್ಧಿಖಿ ಉದಯಗಿರಿಯಲ್ಲಿ ಉದ್ಘಾಟಿಸಿದರು. ಕಲ್ಯಾಣಗಿರಿ, ಬೀಡಿ ಕಾಲೋನಿ ಸೇರಿದಂತೆ ವಿವಿಧೆಡೆ ಬೈಕ್ ರ್ಯಾಲಿ ಸಂಚರಿಸಿತು. ಪಕ್ಷದ ನಗರಾಧ್ಯಕ್ಷ ಜೆ. ಮಹೇಶ್‌ಗೌಡ, ಮುಖಂಡರಾದ ಎ.ಎಸ್. ಪಾಲ್, ಅಲೀಂ ಪಾಷ ಮೊದಲಾದವರು ಇದ್ದರು.
ಬಿಎಸ್‌ವೈ ಜನ್ಮದಿನ ಪ್ರಯುಕ್ತ ರಕ್ತದಾನ
ಮೈಸೂರು: ಮಾಜಿ ಮುಖ್ಯಮಂತ್ರಿ ಹಾಗೂ ಕೆಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ 71ನೇ ಜನ್ಮ ದಿನಾಚರಣೆ ಅಂಗವಾಗಿ ಕರ್ನಾಟಕ ಬಿ.ಎಸ್. ಯಡಿಯೂರಪ್ಪ ಯುವ ಸೇನೆಯವರು ಇಲ್ಲಿನ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಭಾನುವಾರ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದರು. ಈ ಶಿಬಿರದಲ್ಲಿ 16 ಮಂದಿ ಯಡಿಯೂರಪ್ಪ ಅಭಿಮಾನಿಗಳು ರಕ್ತದಾನ ಮಾಡಿದರು. ಕೆಜೆಪಿ ನಗರಾಧ್ಯಕ್ಷ ಯು.ಎಸ್. ಶೇಖರ್ ಶಿಬಿರಕ್ಕೆ ಚಾಲನೆ ನೀಡಿದರು. ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ. ಮಂಜುನಾಥ್, ವಕೀಲ ಎಚ್.ಎಸ್. ಮಲ್ಲಿಕಾರ್ಜುನಸ್ವಾಮಿ, ಯುವಸೇನೆಯ ಅಧ್ಯಕ್ಷ ಎಲ್. ರುದ್ರಮೂರ್ತಿ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.