ಸ್ಥಳೀಯ ಸಂಸ್ಥೆಯಲ್ಲಿ ಜೆಡಿಎಸ್ ದರ್ಬಾರ್
ಮೈಸೂರು: ನಗರಪಾಲಿಕೆ ಹಾಗೂ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಜೆಡಿಎಸ್ಗೆ ಅಧಿಕಾರ ಸಿಗಲಿದೆ ಎಂದು ಪಕ್ಷದ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಮಾಜಿ ಸಚಿವ ಜಿ.ಟಿ. ದೇವೇಗೌಡ, ಶಾಸಕರಾದ ಸಾ.ರಾ. ಮಹೇಶ್, ಸಂದೇಶ್ ನಾಗರಾಜ್, ಜಿಲ್ಲಾಧ್ಯಕ್ಷರಾದ ಮಾಜಿ ಶಾಸಕ ಎಸ್. ಚಿಕ್ಕಮಾದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 65 ಸ್ಥಾನಗಳಿರುವ ಮೈಸೂರು ಪಾಲಿಕೆಯಲ್ಲಿ ಪಕ್ಷ 35ಕ್ಕೂ ಹೆಚ್ಚು ಸ್ಥಾನ ಗಳಿಸಲಿದೆ. ಉಳಿದ ಪುರಸಭೆ, ಪಟ್ಟಣ ಪಂಚಾಯ್ತಿಗಳಲ್ಲಿ ಕಾಂಗ್ರೆಸ್ಗಿಂತ ಹೆಚ್ಚಿನ ಸ್ಥಾನಗಳನ್ನು ಪಡೆಯಲಿದೆ. ಕಳೆದ ಬಾರಿಯ ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲೂ ಪಕ್ಷ ಹೆಚ್ಚಿನ ಸ್ಥಾನ ಗಳಿಸಿತ್ತು ಎಂದರು.
ನಾವು ಕಾಂಗ್ರೆಸ್, ಬಿಜೆಪಿಯಂತೆ ಪ್ರಣಾಳಿಕೆ ಪ್ರಕಟಿಸುವುದಿಲ್ಲ. ಏಕೆಂದರೆ ಪ್ರಣಾಳಿಕೆಯಲ್ಲಿರುವ ಅಂಶಗಳು ಜಾರಿಯಾಗುವುದೆ ಇಲ್ಲ. ಹೀಗಾಗಿ ಜನರಿಗೆ ನಂಬಿಕೆ ಇಲ್ಲ. ನಮ್ಮ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಕುಡಿಯುವ ನೀರು, ರಸ್ತೆ, ನೈರ್ಮಲ್ಯ ಕಾರ್ಯಕ್ರಮಗಳಿಗೆ ಆದ್ಯತೆ ನೀಡುತ್ತದೆ ಎಂದು ಅವರು ಭರವಸೆ ನೀಡಿದರು.
ಸಾಮಾಜಿಕ ನ್ಯಾಯ: ಪಾಲಿಕೆ ಚುನಾವಣೆಯ ಟಿಕೆಟ್ ನೀಡುವಾಗ ಪಕ್ಷ ಸಾಮಾಜಿಕ ನ್ಯಾಯ ಪರಿಪಾಲಿಸಿದೆ. ಒಕ್ಕಲಿಗರು- 21, ಕುರುಬರು- 9, ವೀರಶೈವರು- 6, ಮುಸ್ಲಿಮರು- 11, ಪ.ಜಾತಿ- 11,ಪ.ವರ್ಗ- 2, ದೇವಾಂಗ, ಜೈನ, ಗಾಣಿಗ, ಈಡಿಗ, ಕ್ರಿಶ್ಚಿಯನ್ಗೆ ತಲಾ 1 ಸ್ಥಾನ ನೀಡಿದೆ. ಇದನ್ನು ಗಮನಿಸಿದರೆ ಜೆಡಿಎಸ್ ಕೇವಲ ಒಂದು ಜಾತಿಯ ಪರವಾಗಿದೆ ಎಂಬುದು ಸತ್ಯಕ್ಕೆ ದೂರ ಎಂದು ಚಿಕ್ಕಮಾದು ಸ್ಪಷ್ಟಪಡಿಸಿದರು.
ಕಳೆದ ಬಾರಿ ಕೆಲವೊಂದು ಗೊಂದಲಗಳಿಂದಾಗಿ ಪಕ್ಷ ಪಾಲಿಕೆಯಲ್ಲಿ 18 ಸ್ಥಾನ ಮಾತ್ರ ಗಳಿಸಿತ್ತು. ಈ ಬಾರಿ ಸಾಮೂಹಿಕ ನಾಯಕತ್ವದಲ್ಲಿ ಹೋಗುತ್ತಿರುವುದರಿಂದ ಸ್ಪಷ್ಟ ಬಹುಮತ ಪಡೆಯುತ್ತೇವೆ. ಕಳೆದ ಬಾರಿ ಅನಿವಾರ್ಯವಾಗಿ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದವು. ಜಿಪಂನಲ್ಲಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದರೂ ಮೂಲ ಸಿದ್ಧಾಂತ ಬಿಟ್ಟುಕೊಟ್ಟಿಲ್ಲ ಎಂದು ಅವರು ಪ್ರತಿಪಾದಿಸಿದರು.
ಬಿಜೆಪಿ- ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿವೆ ಎಂದು ಕಾಂಗ್ರೆಸ್ಸಿಗರು ಹೇಳುವುದು ಹಾಸ್ಯಾಸ್ಪದ. ಕೆಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಗಮನಿಸಿದರೆ ಯಾರು, ಯಾರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ ಎಂಗು ಅವರು ತಿರುಗೇಟು ನೀಡಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಲ್ಲಾ ಸ್ಥಾನಗಳಿಗೂ ಅಭ್ಯರ್ಥಿಗಳನ್ನು ಹಾಕಲು ವಿಫಲವಾಗಿರುವ ಕೆಜೆಪಿ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ 224 ಸ್ಥಾನಗಳಿಗೂ ಎಲ್ಲಿಂದ ಅಭ್ಯರ್ಥಿಗಳನ್ನು ಹಾಕುತ್ತದೆ ಎಂದು ಅವರು ಪ್ರಶ್ನಿಸಿದರು.
ಕಾಂಗ್ರೆಸ್ಸಿಗರು ಜನರನ್ನು ಸೇರಿಸಿ, ಪ್ರಚಾರ ಮಾಡಲಾಗದೆ ಪ್ರತಿದಿನ ಸುದ್ದಿಗೋಷ್ಠಿ ನಡೆಸಿ, ಜೆಡಿಎಸ್ ಹಾಗೂ ಬಿಜೆಪಿ ವಿರುದ್ಧ ಇಲ್ಲಸಲ್ಲದ ಹೇಳಿಕೆ ಕೊಡುತ್ತಿದ್ದಾರೆ ಎಂದು ಕಿಡಿಕಾರಿದ ಸಂದೇಶ್ ನಾಗರಾಜ್, ಜಿಲ್ಲಾಧಿಕಾರಿಗಳು ಕಾಂಗ್ರೆಸ್ಸಿಗರ ಸುಳ್ಳು ದೂರುಗಳನ್ನು ಮಾನ್ಯ ಮಾಡದೆ ನ್ಯಾಯಸಮ್ಮತ ಹಾಗೂ ಮುಕ್ತ ಚುನಾವಣೆ ನಡೆಸಲು ಗಮನ ನೀಡಬೇಕು ಎಂದು ಆಗ್ರಹಿಸಿದರು.
ಎಚ್ಡಿಕೆ ಆಡಳಿತವೇ ಶ್ರೀರಕ್ಷೆ: ನಮ್ಮ ಪಕ್ಷ ಅಭ್ಯರ್ಥಿಗಳಿಗೆ ಯಾವುದೇ ಆರ್ಥಿಕ ನೆರವು ನೀಡುವುದಿಲ್ಲ. ಎಚ್.ಡಿ. ಕುಮಾರಸ್ವಾಮಿ ಅವರ 20 ತಿಂಗಳ ಆಡಳಿತವೇ ನಮಗೆ ಶ್ರೀರಕ್ಷೆ. ಅಭ್ಯರ್ಥಿಗಳ ವೈಯಕ್ತಿಕ ಪರಿಚಯ ಹಾಗೂ ಜನಸೇವೆ ಮೇಲೆ ಗೆಲ್ಲುತ್ತಾರೆ ಎಂದು ಸಾ.ರಾ. ಮಹೇಶ್ ಹೇಳಿದರು.
ಪಾಲಿಕೆಗೆ ಕಾಂಗ್ರೆಸ್ ಪಕ್ಷ ಪ್ರಕಟಿಸಿರುವ ಪ್ರಣಾಳಿಕೆ ಕುಮಾರಸ್ವಾಮಿ ಅವರು ಅಧಿಕಾರದಲ್ಲಿದ್ದಾಗ ಪ್ರಕಟಿಸಿದ ಕಾರ್ಯಕ್ರಮಗಳು ನಕಲು. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಏನೂ ಮಾಡುವುದಿಲ್ಲ. ಈಗ ಜ್ಞಾನೋದಯವಾಗಿರಬೇಕು ಎಂದು ಅವರು ಟೀಕಿಸಿದರು.
ಉಕದಲ್ಲೂ ಸಂಚಲನ: ರಾಮಕೃಷ್ಣ ಹೆಗಡೆ ಅವರ ನಂತರ ಉತ್ತರ ಕರ್ನಾಟಕದಲ್ಲೂ ಸಂಚಲನ ಮೂಡಿಸಿರುವ ರಾಜಕಾರಣಿ ಕುಮಾರಸ್ವಾಮಿ. ಕಳೆದ ಬಾರಿ ಅಧಿಕಾರ ಹಸ್ತಾಂತರ ಗೊಂದಲದ ಬಗ್ಗೆ ಕ್ಷಮೆ ಕೇಳಿದ ನಂತರ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಜಿ.ಟಿ. ದೇವೇಗೌಡ ಹೇಳಿದರು.
ನಾವು ಸ್ವಾರ್ಥಕ್ಕಾಗಿ ರಾಜಕೀಯ ಮಾಡುತ್ತಿಲ್ಲ. ರಾಜ್ಯಕ್ಕೆ ಕುಮಾರಸ್ವಾಮಿ ಅವರ ನಾಯಕತ್ವ ಅಗತ್ಯವಿದೆ. ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಲ್ಲದಿದ್ದರೂ ನಾವೇ ಪ್ರಥಮ ಸ್ಥಾನದಲ್ಲಿರುತ್ತೇವೆ. ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ಅವರನ್ನು ಆಯ್ಕೆ ಮಾಡಿದಂತೆ ರಾಜ್ಯದ ಜನತೆ ಕುಮಾರಸ್ವಾಮಿ ನೇತೃತ್ವದ ಪಕ್ಷವನ್ನು ಆಯ್ಕೆ ಮಾಡಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದಲ್ಲಿದ್ದು ಉಂಡು- ತಿಂದು ಹೋದವರು ರ್ಯಾಲಿ ನಡೆಸಿದ್ದಾರೆ ಎಂದು ಮಾಜಿ ಸಿಎಂ ಡಿ.ವಿ. ಸದಾನಂದಗೌಡರು ಹೇಳಿರುವುದು ನನಗೆ ಅನ್ವಯವಾಗುವುದಿಲ್ಲ. ಅದು ಕೆಜೆಪಿ ರಾಜ್ಯಾಧ್ಯಕ್ಷರಾದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಹೇಳಿದ ಮಾತು ಎಂದು ಅವರು ಸಮಜಾಯಿಷಿ ನೀಡಿದರು.
ನಗರಾಧ್ಯಕ್ಷ ರಾಜಣ್ಣ, ಕೆ.ಆರ್. ಬ್ಯಾಂಕ್ ಅಧ್ಯಕ್ಷ ಎಚ್. ವಾಸು, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಎಂ.ಟಿ. ಕುಮಾರ್, ಜಿಪಂ ಮಾಜಿ ಅಧ್ಯಕ್ಷರಾದ ಕಡಕೊಳ ನಾಗರಾಜ್, ಎಂ.ಪಿ. ನಾಗರಾಜ್, ಮೈಮುಲ್ ಮಾಜಿ ಅಧ್ಯಕ್ಷ ಎ.ಟಿ. ಸೋಮಶೇಖರ್, ಮುಖಂಡರಾದ ಎಚ್.ಕೆ. ರಮೇಶ್, ಬೆಳವಾಡಿ ಶಿವಮೂರ್ತಿ, ರಾಜನಹಳ್ಳಿ ಕುಮಾರಸ್ವಾಮಿ, ಎಂ. ಬಸವರಾಜು, ದೂರ ಮಂಜುನಾಥ್, ರುದ್ರಸ್ವಾಮಿ ಮೊದಲಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

