ಮೈಸೂರು

ಹದಿಹರೆಯದವರಿಗೆ ಲೈಂಗಿಕ ಶಿಕ್ಷಣ ಅಗತ್ಯ

Published On :

ಮೈಸೂರು: ಹದಿಹರೆಯದ ಹಂತದಲ್ಲಿ ಲೈಂಗಿಕ ಶಿಕ್ಷಣ ನೀಡುವುದು ಅವಶ್ಯಕ ಎಂದು ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಕಾರ್ಯಪಡೆ ಅಧ್ಯಕ್ಷ ಡಾ. ಅಶೋಕ ಪೈ ಹೇಳಿದರು.
ಮಹಾರಾಣಿ ಕಲಾ ಮತ್ತು ವಾಣಿಜ್ಯ ಮಹಿಳಾ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಮನಶಾಸ್ತ್ರ ಅಧ್ಯಯನ ವಿಭಾಗದ ವತಿಯಿಂದ ಏರ್ಪಡಿಸಿದ್ದ ಶಿಕ್ಷಣ ಮತ್ತು ಮಾನಸಿಕ ಆರೋಗ್ಯ ಎಂಬ ವಿಷಯ ಕುರಿತ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣದಲ್ಲಿ ಹದಿಹರೆಯದವರ ಸಮಸ್ಯೆಗಳು ಎಂಬ ವಿಷಯ ಕುರಿತು ಅವರು ಮಾತನಾಡಿದರು. 2003 ರಲ್ಲಿ ಕೇಂದ್ರ ಸರ್ಕಾರ ಲೈಂಗಿಕ ಶಿಕ್ಷಣ ನೀಡಲು ಮುಂದದಾಗ ಇದು ನೈತಿಕ ಅಧಃಪತನವೆಂದು ಖಂಡಿಸಿ ಮೂರು ಮಂತ್ರಿಗಳು ರಾಜಿನಾಮೆಗೆ ಸಿದ್ಧರಾದರು ಹಾಗೂ ಮಠಾಧೀಶರು ಸಹ ವಿರೋಧ ವ್ಯಕ್ತ ಪಡಿಸಿದರು. ಇದರಿಂದಾಗಿ ಇದರ ಜಾರಿಗೆ ಹಿನ್ನೆಡೆ ಉಂಟಾಗಿದೆ. ಈ ಶಿಕ್ಷಣಕ್ಕೆ ಸಂಬಂಧಿಸಿದ ಪಠ್ಯವನ್ನು ನಿಮ್ಹಾನ್ಸ್ ಸಿದ್ಧಪಡಿಸಿದೆ ಎಂದರು.   
ಓದಿನ ಬಗ್ಗೆ ಆತಂಕ, ಪರೀಕ್ಷೆ ಭಯ, ನಿದ್ರೆಯಲ್ಲಿ ಓಡಾಡುವುದು, ಪ್ರೀತಿ ಹಾಗೂ ಹಸ್ತಮೈಥನ ಈ ಮುಂತಾದ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಸಮಾಲೋಚನೆ ನಡೆಸಲು ಆಯಾ ವಿವಿ ಹಾಗೂ ಕಾಲೇಜುಗಳಲ್ಲಿ ಆಪ್ತ ಸಲಹಾ ಸಮಿತಿ ಆರಂಭಿಸುವುದು. ಸಮಾಲೋಚಕರಾಗಿ ಶಿಕ್ಷಕರಿಗೆ ಅಗತ್ಯ ತರಬೇತಿ ನೀಡುವುದು. ಅವರು ಆ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ಮಾಡವುದು ಇದರ ಉದ್ದೇಶ. ಈ ಕುರಿತು ಕಾರ್ಯಪಡೆ ಕೂಡ ಸರ್ಕಾರಕ್ಕೆ ಶಿಫಾರಸು ಮಾಡಿದೆ ಎಂದು ಅವರು ತಿಳಿಸಿದರು.    ಮನಸ್ಸಿನ ಭಾವನೆಗಳು, ತಂದೆ, ತಾಯಿ ಹಾಗೂ ಕುಟುಂಬದ ಪರಿಸರದಿಂದ ಯುವಜನತೆ ಮೇಲೆ ಉಂಟಾಗುವ ಪರಿಣಾಮದಿಂದ 16 - 21 ವಯಸ್ಸಿನಲ್ಲಿಯೇ ಮಾದಕ ಹಾಗೂ ಮದ್ಯ ಸೇವನೆಗೆ ಒಳಗಾಗಿರುವುದು ಕಂಡುಬಂದಿದೆ. ಸಾಮೂಹಿಕ ಅತ್ಯಾಚಾರ ಹಾಗೂ ಸಮಾಜಘಾತುಕ ಚಟುವಟಿಕೆಗಳಿಗೆ ಇದು ಪ್ರೇರಣೆಯಾಗಿದೆ. ಹಾಗೂ ಹದಿಹರೆಯದವರು ಇಂತಹ ಪ್ರಕರಣಗಳಲ್ಲಿ ಹೆಚ್ಚಾಗಿ ಭಾಗಿಯಾಗಿರುವುದು ಕಂಡುಬಂದಿದೆ. ಉತ್ತಮ ಮನಸ್ಥಿತಿ ರೂಪಿಸುವ ಮೂಲಕ ಅವರಲ್ಲಿ ಜಾಗೃತಿ ಉಂಟು ಮಾಡುವುದು ಪ್ರಸ್ತುತ ಅವಶ್ಯಕ ಎಂದರು. ಮಾನಸಿಕ ಒತ್ತಡದಿಂದ ದೇಶದಲ್ಲಿ 3 ನಿಮಿಷಕ್ಕೊಂದು ಆತ್ಮಹತ್ಯೆ ಪ್ರಯತ್ನ ಪ್ರಕರಣಗಳು ನಡೆದಿವೆ. ಇದರಲ್ಲಿ ಬಹುಪಾಲು ಹದಿಹರೆಯದವರು ಇರುವುದು ಆತಂಕದ ಸಂಗತಿ ಎಂದರು.
ಪ್ರಾಂಶುಪಾಲ ಪ್ರೊ. ಕೆ.ಎಸ್ ಲಕ್ಷ್ಮಣಗೌಡ ಅಧ್ಯಕ್ಷತೆ ವಹಿಸಿದ್ದರು. ವಿಭಾಗದ ಮುಖ್ಯಸ್ಥ ಡಾ. ಎಚ್.ವೈ. ಶ್ರೀಶಕುಮಾರ್ ಸ್ವಾಗತಿಸಿದರು. ಸಂಚಾಲಕಿ ಡಾ. ಬಿ.ಪಿ. ಅಶ್ವಿನಿ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ಡಾ. ಎ.ವಿ. ವೇಣುಗೋಪಾಲ್, ಸಮನ್ವಯಾಧಿಕಾರಿ ಚಂದ್ರಕಾಂತ್ ಜಮದಾರ್ ಹಾಗೂ ರಜನಿ ಐತಾಳ್ ಇದ್ದರು.
ನಂತರ ಶಿವಮೊಗ್ಗದ ಕುವೆಂಪು ವಿವಿಯ ಮನಶಾಸ್ತ್ರ ಚಿಕಿತ್ಸಾ ಅಧ್ಯಯನ ವಿಭಾಗದ ಅಧ್ಯಕ್ಷ ಡಾ. ಎ.ಆರ್. ಕೃಷ್ಣಮೂರ್ತಿ, ಜಿಐಬಿಟಿಯ ವ್ಯವಸ್ಥಾಪಕ ನಿರ್ದೇಶಕ ಡಾ. ವೇದಗಿರಿ ಗಣೇಶನ್ ಉಪನ್ಯಾಸ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.