ಮೈಸೂರು

ಕನ್ನಡ ಮಾಧ್ಯಮ ಜೀವನದ ಪ್ರಶ್ನೆಯಾಗಿದೆ

Published On :

ಮೈಸೂರು: ಕನ್ನಡದ ಉಳಿವಿನ ಪ್ರಶ್ನೆ ಕೇವಲ ಸಾಹಿತ್ಯ ಹಾಗೂ ವೇದಿಕೆಯ ಭಾಷಣದಿಂದ ಮಾತ್ರವೇ ಪರಿಹಾರವಾಗಲಾರದು.
- ಇದು ನಂಜನಗೂಡಿನಲ್ಲಿ ಮಾ.30-31 ರಂದು ನಡೆಯಲಿರುವ ಮೈಸೂರು ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವ ಪ್ರೊ.ಮಲೆಯೂರು ಗುರುಸ್ವಾಮಿ ಅವರೊಂದಿಗೆ ಸೋಮವಾರ ಕನ್ನಡಪ್ರಭ ನಡೆಸಿದ ಸಂದರ್ಶನ ವೇಳೆ ವ್ಯಕ್ತವಾದ ಮನದಾಳದ ಮಾತು. ಸಂದರ್ಶನದ ಆಯ್ದ ಭಾಗ ಇಲ್ಲಿದೆ.
ಸಾಹಿತ್ಯದ ಒಲವು ಹೇಗೆ ಬಂತು?
ದೇವನೂರು ನಮ್ಮ ತಾಯಿಯ ತವರು. ನಾನು ಅಲ್ಲಿನ ಪ್ರಾಥಮಿಕ ಶಾಲೆಯಲ್ಲಿ ಓದುವಾಗ ದೇವನೂರ ಮಹಾದೇವ ನನ್ನ ಸಹಪಾಠಿ. ಪ್ರೌಢಶಾಲೆಗೆ ಬಂದಾಗ ಅಲ್ಲಿನ ಶಿಕ್ಷಕರಾಗಿದ್ದ ಮಹದೇವಮೂರ್ತಿ ಅವರ ಸ್ಫೂರ್ತಿಯಿಂದಾಗಿ ಸಾಹಿತ್ಯದತ್ತ ಒಲವು ಮೂಡಿತು.
ಕಾಲೇಜು ಹಂತದಲ್ಲಿ ಗುರುಗಳ ಪ್ರೇರಣೆ ಹೇಗಿತ್ತು?
ಸಿಪಿಕೆ, ಹಾಮಾನಾ, ಜಿ.ಎಚ್. ನಾಯಕ, ಪ್ರಭುಶಂಕರ, ಎಲ್. ಬಸವರಾಜು ಹಾಗೂ ತಿಪ್ಪೇರುದ್ರಸ್ವಾಮಿ ಅವರು ಗುರುಗಳಾಗಿದ್ದರಿಂದ ಅವರ ಪ್ರೇರಣೆಯಿಂದಾಗಿ ಸಾಹಿತ್ಯ ಸಾಧನೆಗೆ ತಿರುವು ದೊರೆಯಿತು.
ಈವರೆಗೆ ಎಷ್ಟು ಕೃತಿಗಳನ್ನು ರಚಿಸಿರುವಿರಿ?
4 ಕಾದಂಬರಿ, 1 ಕವನ ಸಂಕಲನ, 1 ಜಾನಪದ ಕೃತಿ, 3 ಶರಣ ಸಾಹಿತ್ಯಿಕ ಕೃತಿ, 20 ಸಂಪಾದಿತ ಕೃತಿ. ಮಲೆ ಮಹದೇಶ್ವರ ಕುರಿತಾದ ಮಹಾಯಾತ್ರಿಕ ಕಾದಂಬರಿಯು ಮೈಸೂರು ವಿವಿಯ ಬಿ.ಎ, ಬಿ.ಎಸ್ಸಿ ಹಾಗೂ ಬಿ.ಕಾಂ ತರಗತಿಗೆ ಪಠ್ಯವಾಗಿದೆ.
ಸಾಹಿತ್ಯ ಪರಿಷತ್ ಕಾರ್ಯದಲ್ಲಿ ತಮ್ಮ ಸಕ್ರಿಯತೆ...?
ಚಾಮರಾಜನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಮೂರು ಅವಧಿಯಲ್ಲಿ ಅಧ್ಯಕ್ಷನಾಗಿದ್ದೆ. ಅಲ್ಲದೆ ಒಂದು ಬಾರಿ ಸಮ್ಮೇಳನಾಧ್ಯಕ್ಷರಾಗಿದ್ದು ಉಂಟು.
ನಂಜನಗೂಡು ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ 2005 ರಲ್ಲಿ ನಂಜನಗೂಡಿನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನವನ್ನು ಎಸ್. ತಿಪ್ಪೇರುದ್ರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ ಹೆಮ್ಮೆಯಿದೆ.
ಪ್ರಸ್ತುತ ಸಮ್ಮೇಳನಾಧ್ಯಕ್ಷರಾಗಿ ನಿಮ್ಮ ಮುಂದಿರುವ ಆಶಯಗಳೇನು?
ಕನ್ನಡದ ಉಳಿವಿನ ಪ್ರಶ್ನೆ ಹಾಗೂ ಕನ್ನಡದ ಮಾಧ್ಯಮದ ಪ್ರಶ್ನೆ ಇಂದು ಎದುರಾಗಿದೆ. ಕೇವಲ ಸಾಹಿತ್ಯ ಹಾಗೂ ವೇದಿಕೆ ಭಾಷಣದಿಂದ ಇದಕ್ಕೆ ಪರಿಹಾರ ಸಾಧ್ಯವಿಲ್ಲ. ಕನ್ನಡ ಮಾಧ್ಯಮ ಜೀವನದ ಪ್ರಶ್ನೆಯಾಗಿದೆ. ಕನ್ನಡದಲ್ಲಿ ಕಲಿತರೆ ಭವಿಷ್ಯವಿಲ್ಲ ಎನ್ನುವ ಆತಂಕ ಯುವಜನತೆಯಲ್ಲಿ ಕಾಡಿದೆ. ಇದನ್ನು ಹೋಗಲಾಡಿಸಬೇಕಾದರೆ ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಸರ್ಕಾರ ಸವಲತ್ತುಗಳನ್ನು ಹೆಚ್ಚಾಗಿ ಕಲ್ಪಿಸಬೇಕು.
ಆಂಗ್ಲ ಭಾಷೆಯ ಕಲಿಕೆ ಬಗ್ಗೆ ಅಭಿಮತವೇನು?
ಆಂಗ್ಲ ಭಾಷೆಯನ್ನು ಸಂಪೂರ್ಣವಾಗಿ ತಿರಸ್ಕರಿಸುವ ಮಾತನಾಡುವುದು ಕೇವಲ ಗಾಳಿ ಮಾತಾಗಲಿದೆ. ಇಂದಿನ ಜಾಗತೀಕರಣದ ಯುಗದಲ್ಲಿ ಜನರು ಈ ಭಾಷೆಯನ್ನು ಸ್ವೀಕರಿಸಬೇಕು. ಶಾಲಾ, ಕಾಲೇಜುಗಳಲ್ಲಿ ಇಂಗ್ಲಿಷ್ ಕಲಿಸಬೇಕು. ಐಟಿ ಬಿಟಿಯೆಂಬ ಸಮುದ್ರದ ವಿರುದ್ಧ ದಿಕ್ಕಿನಲ್ಲಿ ಈಜುವುದಕ್ಕಿಂತ ಅದರ ಪ್ರವಾಹಕ್ಕೆ ಒಡ್ಡಿಕೊಳ್ಳುವ ಸಾಮರ್ಥ್ಯ ಹೊಂದುವುದೇ ನಿಜವಾದ ಜಾಣತನ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.