ಕ್ಷೇತ್ರ ಕಾರ್ಯಗಳಿಂದ ಹೊಸ ಶೋಧನೆ ಸಾಧ್ಯ
ಕ.ಪ್ರ.ವಾರ್ತೆ ಮೈಸೂರು ಮಾ.19
ಕ್ಷೇತ್ರ ಕಾರ್ಯಗಳಿಂದ ಕನ್ನಡ ಸಾಹಿತ್ಯದಲ್ಲಿ ಹೊಸಹೊಸ ಶೋಧನೆಗಳು ಸಾಧ್ಯ ಎಂದು ಸಂಶೋಧಕ ಡಾ.ಎಂ. ಚಿದಾನಂದಮೂರ್ತಿ ಹೇಳಿದರು.
ಊಟಿ ರಸ್ತೆಯ ಜೆಎಸ್ಎಸ್ ಕಾಲೇಜಿನ ಕನ್ನಡ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳೊಂದಿಗೆ ಕನ್ನಡ ಸಾಹಿತ್ಯ ಮತ್ತು ಸಂಶೋಧನೆ ಕುರಿತು ವಿಶೇಷ ಉಪನ್ಯಾಸ ಮತ್ತು ಸಂವಾದದಲ್ಲಿ ಮಾತನಾಡಿದ ಅವರು, ಪ್ರಾಚೀನ ಕಾಲದಲ್ಲಿ ಜನರು ಸಮಯ ನೋಡಲು ಬಳಸುತ್ತಿದ್ದ ಘಳಿಗೆ ಬಟ್ಟಲನ್ನು ತಾವು ತಮ್ಮ ಕ್ಷೇತ್ರಕಾರ್ಯದಲ್ಲಿ ಹುಡುಕಿ ಇಂದಿನವರೆಗೆ ಛಾಯಾಚಿತ್ರದ ಮೂಲಕ ಪರಿಚಯ ಮಾಡಿಕೊಟ್ಟಿರುವುದಾಗಿ ತಳಿಸಿ, ಅದನ್ನು ವಿದ್ಯಾರ್ಥಿಗಳಿಗೂ ತೋರಿಸಿದರು.
ಅಲ್ಲದೆ ತಮ್ಮ ಕ್ಷೇತ್ರ ಕಾರ್ಯದಿಂದ ದೊರಕಿದ ಪ್ರಾಚೀನ ಕವಿಗಳಾದ ಪಂಪ, ಕುಮಾರವ್ಯಾಸರ ಇಂದಿನ ವಂಶಜರ ಭಾವಚಿತ್ರಗಳನ್ನು ತೋರಿಸುವುದರ ಮೂಲಕ ಅವರ ಹಿನ್ನೆಲೆಯನ್ನು ಮನದಟ್ಟು ಮಾಡಿಕೊಟ್ಟರು.
ಇದರಿಂದ ಸಾವಿರ ವರ್ಷಗಳ ಹಿಂದಿನ ಕವಿಗಳ ವಂಶಜರನ್ನು ಗುರುತಿಸುವ ಸೌಭಾಗ್ಯ ಕನ್ನಡ ಸಾಹಿತ್ಯದ್ದಾಯಿತು. ಇದು ಅತ್ಯಂತ ವಿಶಿಷ್ಟವಾದುದು. ಅಲ್ಲದೆ ಹರಿಹರನ ವಾಸಸ್ಥಳವನ್ನು ಹಂಪಿಯ ವಿರೂಪಾಕ್ಷನ ಗುಡಿಯ ಎದುರಿನ ಭಾಗದಲ್ಲಿ ಪತ್ತೆ ಹಚ್ಚಿರುವುದು ತಮ್ಮ ಸಂಶೋಧನೆಯ ಹೆಗ್ಗಳಿಕೆ ಎಂದ ಅವರು, ಚಾಮರಸ ಕವಿ ನೆಲೆಸಿದ್ದ ಗುಹೆಯನ್ನು ಹಂಪಿಯಲ್ಲಿ ಗುರುತಿಸುವುದಾಗಿ ತಿಳಿಸಿ ಅದರ ಭಾವಚಿತ್ರವನ್ನು ತೋರಿಸಿ ಅದರ ವಿವರಣೆ ನೀಡಿದರು.
ನೇಪಾಳದಲ್ಲಿಯೂ ಕನ್ನಡ ಕಂಪು: ನೇಪಾಳದಲ್ಲಿಯೂ ಕನ್ನಡದ ಕಂಪು ಹರಡಿದ್ದರ ಬಗ್ಗೆ ಅಲ್ಲಿ ದೊರಕುವ ಶಾಸನಗಳನ್ನು ಉಲ್ಲೇಖಿಸಿ ವಿವರಿಸಿದರು. ಹಂಪಿಯು ಪಂಪಾಪುರದ ಅರಸ ವಿರೂಪಾಕ್ಷದೇವರ ಅಧೀನದಲ್ಲಿತ್ತು. ಹಾಗೆಯೇ ಕಾಶಿಯೂ ವಿಶ್ವನಾಥನ ಅಧೀನದಲ್ಲಿತ್ತು ಎಂಬುದಕ್ಕೆ ಕಾವ್ಯಗಳಿಂದ ಪುರಾವೆಗಳು ದೊರಕುತ್ತವೆ ಎಂಬ ವಿಚಾರವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾ ಸಂಸ್ಕೃತಿಯಲ್ಲಿ ಪ್ರತಿಸಂಸ್ಕೃತಿ ಎಂಬ ವಿಚಾರ ಸೂಕ್ತವಲ್ಲ ಎಂದು ತಿಳಿಸಿದ ಅವರು, ವಚನ ಸಾಹಿತ್ಯದ ಇತ್ತೀಚಿನ ಸಂಶೋಧನೆಗೆ ಪ್ರತಿಕ್ರಿಯೆ ಬಯಸಿದ ಅಧ್ಯಾಪಕರಿಗೆ ವಚನ ಸಾಹಿತ್ಯದಲ್ಲಿಯೇ ಜಾತಿಯನ್ನು ವಿರೋಧಿಸಿದ ವಿಚಾರಗಳು ವಚನಗಳಲ್ಲಿಯೇ ಸ್ಪಷ್ಟವಾಗಿ ಅಭಿವ್ಯಕ್ತಗೊಂಡಿರುವುದನ್ನು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

