ಮೈಸೂರು

ಸಿಗದ ಗೌರವಧನ ಅತಿಥಿ ಉಪನ್ಯಾಸಕರ ಧರಣಿ

Published On :

ಕ.ಪ್ರ.ವಾರ್ತೆ ಮೈಸೂರು ಮಾ.19
ತಮಗೆ ಗೌರವಧನವೂ ನೀಡದೆ ಸೇವೆಯಿಂದ ತೆರವುಗೊಳಿಸಲು ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರ ಸೂಚನೆ ಖಂಡಿಸಿ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಂಘದವರು ಮೈಸೂರಿನಲ್ಲಿರುವ ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿ ಎದುರು ಮಂಗಳವಾರ ಧರಣಿ ಹಮ್ಮಿಕೊಂಡಿದ್ದರು.
ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜುಗಳಲ್ಲಿ ಕಾಯಂ ಉಪನ್ಯಾಸಕರ ಕೊರತೆ ನೀಗಿಸಲು ಪರ್ಯಾಯವಾಗಿ ಅತಿಥಿ ಉಪನ್ಯಾಸಕರನ್ನು ನೇಮಿಸಲಾಗಿದೆ. ಕಳೆದ 8 ತಿಂಗಳಿಂದ ಅತಿಥಿ ಉಪನ್ಯಾಸಕರನ್ನು ದುಡಿಸಿಕೊಂಡಿದ್ದು ಗೌರವಧನ ಇನ್ನೂ ನೀಡಿಲ್ಲ. ಶೈಕ್ಷಣಿಕ ವರ್ಷ ಕೊನೆಯಲ್ಲಿ ಕಾಲೇಜು ಶಿಕ್ಷಣ ಆಯುಕ್ತರು ಏಕಾಏಕಿ ಕಾರ್ಯಭಾರ ಕಡಿತಗೊಳಿಸಿ ಅತಿಥಿ ಉಪನ್ಯಾಸಕರನ್ನು ಸೇವೆಯಿಂದ ಬಿಡುಗಡೆ ಮಾಡಲು ಸೂಚಿಸಿದ್ದಾರೆ. ಇದು ಗುಬ್ಬಚ್ಚಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಿದಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಆಯುಕ್ತರ ಈ ಆದೇಶದಿಂದ ಅತಿಥಿ ಉಪನ್ಯಾಸಕರಿಗೆ ಗೌರವ ಧನವೂ ಇಲ್ಲದೇ, ಸೇವೆಯೂ ಇಲ್ಲದೆ ಬದುಕು ದುರಂತ ಆಗಿದೆ. ಕಳೆದ ಆಗಸ್ಟ್‌ನಲ್ಲಿ ಸರ್ಕಾರದ ಆದೇಶದಲ್ಲಿರುವ ಸೂಚನೆಗಳ ಪ್ರಕಾರ ಅತಿಥಿ ಉಪನ್ಯಾಸಕರ ಆಯ್ಕೆ ಮಾಡಿಕೊಳ್ಳಲಾಗಿದೆ. ಆದರೆ, ಈ ಆದೇಶವನ್ನು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಗಾಳಿಗೆ ತೂರಿದ್ದಾರೆ ಎಂದು ಅವರು ಆರೋಪಿಸಿದರು.
ಆಗಸ್ಟ್‌ನಿಂದ ನಮ್ಮ ಸೇವೆ ಮಾನ್ಯ ಮಾಡಿ 8 ತಿಂಗಳ ಗೌರವಧನ ಬಿಡುಗಡೆ ಮಾಡಬೇಕು. ಈ ಮೂಲಕ ಅತಿಥಿ ಉಪನ್ಯಾಸಕರಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡಬೇಕು ಎಂದು ಅವರು ಆಗ್ರಹಿಸಿದರು.
ಶಾಸಕರ ಬೆಂಬಲ: ಅತಿಥಿ ಉಪನ್ಯಾಸಕರ ಈ ಹೋರಾಟಕ್ಕೆ ಶಾಸಕ ಎಚ್.ಎಸ್. ಶಂಕರಲಿಂಗೇಗೌಡ, ಮಾಜಿ ಶಾಸಕ ಕೆ.ಟಿ. ಶ್ರೀಕಂಠೇಗೌಡ ಅವರು ಬೆಂಬಲ ಸೂಚಿಸಿದರು.
ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಂಘದ ಅಧ್ಯಕ್ಷ ಕೆ. ಪ್ರದೀಪಕುಮಾರ್, ಉಪಾಧ್ಯಕ್ಷ ಆರ್. ರಾಮಣ್ಣ, ಪ್ರಧಾನ ಕಾರ್ಯದರ್ಶಿ ಸಿ.ವಿ. ಶ್ರೀನಿವಾಸ, ಪದಾಧಿಕಾರಿಗಳಾದ ವೈ.ಸಿ. ಪ್ರಭುಶಂಕರ, ಹನುಮಂತೇಶ್, ಜಿ.ಆರ್. ದಿವ್ಯಾನಂದ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.