ಮೈಸೂರು

ಹಣ ಹಂಚಿದ್ದರೆ ಸಾಬೀತುಪಡಿಸಿ

Published On :

ಕ.ಪ್ರ.ವಾರ್ತೆ ್ಣ ಕೆ.ಆರ್.ನಗರ ್ಣ ಮಾ.19
ಪುರಸಭಾ ಚುನಾವಣೆಯಲ್ಲಿ ನಾನು ಮತದಾರರಿಗೆ ಹಣ ಹಂಚಿರುವುದನ್ನು ಸಂಸದ ಎಚ್. ವಿಶ್ವನಾಥ್ ಸಾಬೀತುಪಡಿಸಿದರೆ ರಾಜಕೀಯದಿಂದಲೇ ನಿವೃತ್ತಿಯಾಗುತ್ತೇನೆ. ಅವರು ಇದನ್ನು ಸಾಕ್ಷೀಕರಿಸಲು ಕಪ್ಪಡಿ ಗದ್ದುಗೆಗೆ ಬಂದು ಪ್ರಮಾಣ ಮಾಡಲಿ ಎಂದು ಶಾಸಕ ಸಾ.ರಾ. ಮಹೇಶ್ ಸವಾಲು ಹಾಕಿದರು.
ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ಪುರಸಭೆಯ ಜೆಡಿಎಸ್ ನೂತನ ಸದಸ್ಯರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಜೆಡಿಎಸ್ ಹಣಕ್ಕಾಗಿ ಬಿ.ಫಾರಂ ಮಾರಿಕೊಂಡಿದೆ ಎಂದು ಆರೋಪಿಸಿರುವ ವಿಶ್ವನಾಥ್ ಅವರು, ಕಾಂಗ್ರೆಸ್ ಪಕ್ಷದ ವಿಧಾನಸಭೆಯ ಬಿ.ಫಾರಂ ಅನ್ನು ಎಷ್ಟು ಕೋಟಿಗೆ ಮಾರಿಕೊಂಡಿದ್ದಾರೆ ಎಂದು ಪ್ರಶ್ನಿಸಿದರು.
30 ವರ್ಷಗಳ ನಿಮ್ಮ ರಾಜಕೀಯ ಅವಧಿಯಲ್ಲಿ ಸರ್ಕಾರದಿಂದ ಎಷ್ಟು ಕೋಟಿ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಪಡಿಸಿದ್ದೀರಿ? ಜತೆಗೆ ವೈಯಕ್ತಿಕವಾಗಿ ಎಷ್ಟು ಹಣವನ್ನು ಸಾರ್ವಜನಿಕರಿಗಾಗಿ ಖರ್ಚು ಮಾಡಿದ್ದೀರಿ, ನಾನು ಶಾಸಕನಾದ ನಂತರ ಐದು ವರ್ಷಗಳ ಅವಧಿಯಲ್ಲಿ ಎಷ್ಟು ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡಿದ್ದೇನೆ, ವೈಯಕ್ತಿಕವಾಗಿ ಎಷ್ಟು ಹಣ ಖರ್ಚು ಮಾಡಿದ್ದೇನೆ ಎಂಬ ಬಗ್ಗೆ ಚರ್ಚಿಸಲು ಜನರ ನಡುವೆ ವೇದಿಕೆ ಸಿದ್ದಪಡಿಸೋಣ ಎಂದು ಸಂಸದರಿಗೆ ಪಂಥಾಹ್ವಾನ ನೀಡಿದರು.
ಯಾವ ಸಾಮಾಜಿಕ ನ್ಯಾಯ?: ಹತ್ತಾರು ವರ್ಷ ಕಾಂಗ್ರೆಸ್ ಪಕ್ಷದಲ್ಲಿ ದುಡಿದಿರುವ ತಾ. ವೀರಶೈವ ಮುಖಂಡ ಎ.ಎಸ್. ಚನ್ನಬಸಪ್ಪ, ಮುಸ್ಲಿಂ ಮುಖಂಡ ಡಾ. ಮೆಹಬೂಬ್ಖಾನ್ ಸೇರಿದಂತೆ ಹಲವರು ಇದ್ದರೂ ಕಾಂಗ್ರೆಸ್ ಬಿಟ್ಟು ಬಿಜೆಪಿ ನಂತರ ಕೆಜೆಪಿಯನ್ನು ಸುತ್ತಿಕೊಂಡು ಬಂದವರಿಗೆ ಪಕ್ಷದ ಬಿ.ಫಾರಂನ್ನು ಹಣಕ್ಕಾಗಿ ಸ್ವಜಾತಿ ಪ್ರೇಮದ ಮೇಲೆ ಮಾರಲು ನಿಂತಿದ್ದೀರಾ? ಇದು ಯಾವ ಸಾಮಾಜಿಕ ನ್ಯಾಯ ಎಂದು ಅವರು ಸಂಸದರನ್ನು :್ನೇಡಿಸಿದರು.
ಈ ಹಿಂದೆ ಮಾಜಿ ಸಚಿವ ಎಸ್. ನಂಜಪ್ಪ ಅವರು ತಮ್ಮ ಆರೋಗ್ಯ ಕೆಟ್ಟಾಗ ಪಕ್ಷದಲ್ಲಿ ವೈ.ಆರ್. ಪ್ರಕಾಶ್, ಚಂದ್ರಶೇಖರ್, ಎಂ.ಟಿ. ಕುಮಾರ್, ಎ.ಟಿ. ಸೋಮಶೇಖರ್ ಸೇರಿದಂತೆ ಇತರೆ ಹತ್ತಾರು ಮಂದಿ ಅರ್ಹರಿದ್ದರು. ಕುರುಬ ಸಮುದಾಯಕ್ಕೆ ಸೇರಿದ ಮಂಚನಹಳ್ಳಿ ಮಹದೇವ್ ಅವರಿಗೆ ಅವಕಾಶ ಕಲ್ಪಿಸಿ ಶಾಸಕರನ್ನಾಗಿ ಮಾಡಿದರು. ನೀವು ಪುರಸಭಾ ಚುನಾವಣೆ ಎರಡು ದಿನ ಇರುವಂತೆ ನಂಜಪ್ಪನವರ ಮನೆ ಮುಂದೆ ಕಾರು ನಿಲ್ಲಿಸಿ, ಒಳಗೆ ಕುಳಿತು ಗಂಟೆಗಟ್ಟಲೆ ಮಾತನಾಡುತ್ತೀರಾ? ಇಂತಹ ಸಣ್ಣ ರಾಜಕಾರಣ ಮಾಡಲು ನಾಚಿಕೆಯಾಗುವುದಿಲ್ಲವೆ ಎಂದು ಜರಿದರು.
ಕೆ.ಆರ್. ನಗರಕ್ಕೆ ನಾನು ಶಾಸಕರ ನಿಧಿಯಿಂದ ನಯಾ ಪೈಸೆ ಹಣ ನೀಡಿಲ್ಲ ಎಂದು ಹೇಳುತ್ತೀರಲ್ಲಾ, ಪಟ್ಟಣದಲ್ಲಿ ಮಿನಿ ವಿಧಾನಸೌಧ, ಅಗ್ನಿಶಾಮಕ ಠಾಣೆ, ಆಯುರ್ವೇದ ಆಸ್ಪತ್ರೆ, ಆದರ್ಶ ಶಾಲೆ, ಬಸ್ ನಿಲ್ದಾಣ, ಕೋರ್ಟ್ ಕಟ್ಟಡ ಸೇರಿದಂತೆ ನೂರಾರು ಕೋಟಿ ಅನುದಾನ ತಂದು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿಸಿದ್ದು ಯಾರೆಂದು ಜನರನ್ನೆ ಕೇಳಿ ಎಂದು ತಿರುಗೇಟು ನೀಡಿದರು.
ಚುನಾವಣೆಯಲ್ಲಿ ತಕ್ಕ ಉತ್ತರ: ಇನ್ನೆರಡು ತಿಂಗಳಲ್ಲಿ ಬರುವ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಪ್ರಜ್ಞಾವಂತ ಮತದಾರರು, ಜೆಡಿಎಸ್ ಕಾರ್ಯಕರ್ತರು, ಮುಖಂಡರು ನಿಮಗೆ ಸರಿಯಾದ ಉತ್ತರ ನೀಡಲಿದ್ದಾರೆ. ಅಲ್ಲಿಯವರೆಗೂ ತಾಳ್ಮೆಯಿಂದ ಕಾಯಿರಿ ಎಂದು ಶಾಸಕರು ವಿಶ್ವನಾಥ್ಗೆ ಸಲಹೆ ನೀಡಿದರು.
ಪುರಸಭೆಗೆ ಜೆಡಿಎಸ್ ಚುನಾಯಿತರಾದ ನೂತನ ಸದಸ್ಯರು ಮತ್ತು ಪರಾಭವಗೊಂಡರವನ್ನು ಪಕ್ಷದ ವತಿಯಿಂದ ಸನ್ಮಾನಿಸಿತು.
ತಾ. ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್, ಪುರಸಭಾ ಸದಸ್ಯ ಎನ್. ಶಿವಕುಮಾರ್, ಮಾಜಿ ಸದಸ್ಯ ಮಹಮದ್ ಸಿರಾಜ್ ಮಾತನಾಡಿದರು. ನಗರ ಜೆಡಿಎಸ್ ಅಧ್ಯಕ್ಷ ಡಿ.ಸಿ. ಮಂಜುನಾಥ್, ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯ, ಪಕ್ಷದ ಹಿರಿಯ ಮುಖಂಡರಾದ ವೈ.ಆರ್. ಪ್ರಕಾಶ್, ಅರ್ಜುನಹಳ್ಳಿ ಗಣೇಶ್, ವಿಜಯ್ಕುಮಾರ್, ತಾಪಂ ಮಾಜಿ ಉಪಾಧ್ಯಕ್ಷ ಮಹದೇವಸ್ವಾಮಿ, ಪುರಸಭಾ ಮಾಜಿ ಸದಸ್ಯ ಕೆ.ಎಸ್. ರೇವಣ್ಣ, ಸದಸ್ಯ ಉಮೇಶ್, ಪಕ್ಷದ ವಕ್ತಾರ ಕೆ.ಎಲ್. ರಮೇಶ್, ಮಂಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.