ಮೈಸೂರು

ಕೃಷ್ಣರಾಜ ಪಟ್ಟಕ್ಕಾಗಿ ಹುಲಿಗಳ ಕಾದಾಟ

Published On :

ಕ.ಪ್ರ ವಾರ್ತೆ ್ಣ ಮೈಸೂರು ್ಣ ಮಾ.21
ಜಿಲ್ಲೆಯಲ್ಲಿ ಅತ್ಯಂತ ಪುಟ್ಟ ಕ್ಷೇತ್ರವೆನಿಸಿಕೊಂಡಿದ್ದ ನಗರದ ಕೃಷ್ಣರಾಜ ಕ್ಷೇತ್ರವು 2008ರ ಕ್ಷೇತ್ರ ಪುನರ್ ವಿಂಗಡಣೆಯ ನಂತರ ವಿಸ್ತಾರಗೊಂಡಿತು. ಒಂದು ಉಪ ಚುನಾವಣೆ ಸೇರಿದಂತೆ ಒಟ್ಟು 3 ಬಾರಿ ಹೊರತುಪಡಿಸಿದರೆ ಉಳಿದ ಏಳು ಬಾರಿ ಕಾಂಗ್ರೆಸ್ಸೇತರ ಪಕ್ಷದ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಿರುವುದು ಈ ಕ್ಷೇತ್ರದ ಹೆಗ್ಗಳಿಕೆ.
ಮೈಸೂರು ನಗರ ಮೊದಲು ಉತ್ತರ ಮತ್ತು ದಕ್ಷಿಣ ಕ್ಷೇತ್ರ ಎಂದಾಗಿತ್ತು. ಈ ಹಿಂದೆ ಈಗಿನ ಕೃಷ್ಣರಾಜ ಕ್ಷೇತ್ರವು ಮೈಸೂರು ದಕ್ಷಿಣ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿತ್ತು. 1972ರಲ್ಲಿ ದಕ್ಷಿಣ ಕ್ಷೇತ್ರದಿಂದ ವಿಭಜಿಸಿ, ಈ ಕ್ಷೇತ್ರ ರಚಿಸಲಾಯಿತು. 1972ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸತ್ಯನಾರಾಯಣ, 1974ರ ಉಪ ಚುನಾವಣೆಯಲ್ಲಿ ಅದೇ ಪಕ್ಷದ ವೆಂಕಟಲಿಂಗಯ್ಯ ಆಯ್ಕೆಯಾದರು. ಈ ಚುನಾವಣೆಯಲ್ಲಿ ಹಾಲಿ ನಂಜನಗೂಡು ಶಾಸಕ, ಕೇಂದ್ರದ ಮಾಜಿ ಸಚಿವ ವಿ. ಶ್ರೀನಿವಾಸಪ್ರಸಾದ್ ಮೊದಲ ಬಾರಿಗೆ ಡಿಎಂಕೆ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. 1978ರಲ್ಲಿ ಜನತಾ ಪಕ್ಷದ ಎಚ್. ಗಂಗಾಧರನ್ ಆಯ್ಕೆಯಾದರು. 1983ರ ವೇಳೆಗೆ ಅವರು ಬಿಜೆಪಿ ಸೇರಿ, ಆ ಪಕ್ಷದ ಅಭ್ಯರ್ಥಿಯಾಗಿ ಎರಡನೇ ಬಾರಿಗೆ ಆಯ್ಕೆಯಾದರು.
1985ರಲ್ಲಿ ಜನತಾ ಪಕ್ಷದ ವೇದಾಂತ ಹೆಮ್ಮಿಗೆ ಗೆದ್ದರು. 1989ರ ವೇಳೆಗೆ ಜನತಾಪಕ್ಷ ವಿಭಜನೆಯಾಗಿ ಹೆಮ್ಮಿಗೆ ಜನತಾದಳದ ಅಭ್ಯರ್ಥಿಯಾಗಿ ಸೋತರು. ಆ ವರ್ಷ ಗೆದ್ದಿದ್ದು ಕಾಂಗ್ರೆಸ್‌ನ ಕೆ.ಎನ್. ಸೋಮಸುಂದರಂ. 1994, 1999ರಲ್ಲಿ ಬಿಜೆಪಿಯ ಎ. ರಾಮದಾಸ್ ಆಯ್ಕೆಯಾದರು. 1994ರಲ್ಲಿ ಹೆಮ್ಮಿಗೆ ಮತ್ತೆ ಜನತಾದಳದ ಅಭ್ಯರ್ಥಿಯಾದರೂ ಗೆಲ್ಲಲಿಲ್ಲ. 1999ರ ಚುನಾವಣೆ ವೇಳೆಗೆ ಜೆಡಿಯು- ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿದ್ದರಿಂದ ಹೆಮ್ಮಿಗೆಗೆ ಮತ್ತೆ ಸ್ಪರ್ಧಿಸುವ ಅವಕಾಶ ಸಿಗಲಿಲ್ಲ. ಕಾಂಗ್ರೆಸ್ 1994ರಲ್ಲಿ ಮತ್ತೆ ಸೋಮಸುಂದರಂ ಅವರಿಗೆ ಟಿಕೆಟ್ ನೀಡಿತ್ತು. ಆದರೆ, ಅವರು ಸೋತರು. 1999ರಲ್ಲಿ ದಿ. ಟಿ.ವಿ. ಶ್ರೀನಿವಾಸರಾವ್ ಅವರ ಪುತ್ರ ಟಿ.ಎಸ್. ರವಿಶಂಕರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋತರು. ಶ್ರೀನಿವಾಸರಾವ್ ಅವರು ಕೂಡ ಈ ಕ್ಷೇತ್ರದಿಂದ ಮೂರು ಬಾರಿ ಸ್ಪರ್ಧಿಸಿ, ಸೋತಿದ್ದರು. 2004ರಲ್ಲಿ ಮಾಜಿ ಸಚಿವ ದಿ. ಎಸ್. ರಮೇಶ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋತಿದ್ದರು.
ಹ್ಯಾಟ್ರಿಕ್ ಗೆಲವಿಗೆ ಬ್ರೇಕ್: ಇಲ್ಲಿ ಎರಡು ಬಾರಿ ವೀರಶೈವ ಜನಾಂಗದ ಎಚ್. ಗಂಗಾಧರನ್ ಅವರು ಆಯ್ಕೆಯಾಗಿದ್ದರೂ ಅಘೋಷಿತವಾಗಿ ಬ್ರಾಹ್ಮಣರ ಕ್ಷೇತ್ರ ಎನಿಸಿಕೊಂಡಿತ್ತು. ಪ್ರಮುಖ ರಾಜಕೀಯ ಪಕ್ಷಗಳು ಕೂಡ ಅದೇ ವರ್ಗದ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತಾ ಬರುತ್ತಿದ್ದವು. ಆದರೆ, 1999 ಹಾಗೂ 2004ರಲ್ಲಿ ಜೆಡಿಎಸ್ ಕುರುಬ ಜನಾಂಗದ ಎಂ.ಕೆ. ಸೋಮಶೇಖರ್ ಅವರಿಗೆ ಟಿಕೆಟ್ ನೀಡಿತ್ತು. ಮೊದಲ ಬಾರಿ ಸೋತ ಅವರು, 2004ರಲ್ಲಿ ಅವರು ಗೆದ್ದು ಕ್ಷೇತ್ರದಲ್ಲಿ ಹೊಸ ಸಮೀಕರಣ ಬರೆದರು. ಅಲ್ಲದೆ, ರಾಮದಾಸ್ ಅವರ ಹ್ಯಾಟ್ರಿಕ್ ಗೆಲವಿಗೆ ಬ್ರೇಕ್ ಹಾಕಿದರು.
ಆದರೆ, 2008ರಲ್ಲಿ ಕುಲದೀಪ್‌ಸಿಂಗ್ ನೇತೃತ್ವದ ಕ್ಷೇತ್ರ ಪುನರ್ ವಿಂಗಡಣಾ ಸಮಿತಿಯ ವರದಿಯ ನಂತರ ಮತ್ತೆ ಬಿಜೆಪಿಯ ಸಾಂಪ್ರದಾಯಿಕ ಮತಗಳು ಹೆಚ್ಚಿರುವ ವಾರ್ಡ್‌ಗಳ ಸೇರ್ಪಡೆಯಿಂದಾಗಿ ಆ ಪಕ್ಷದ ಎಸ್.ಎ. ರಾಮದಾಸ್ ಅವರಿಗೆ ಅನುಕೂಲವಾಯಿತು. ಅವರು 3ನೇ ಬಾರಿ ಗೆದ್ದರು. ದ. ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದರೂ ರಾಮದಾಸ್‌ಗೆ ಮೊದಲೆರಡು ವರ್ಷ ಸಚಿವ ಸ್ಥಾನ ಸಿಗಲಿಲ್ಲ. ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಯಾಗಬೇಕಾಯಿತು. ನಂತರ ಬಂಡಾಯದ ಬಾವುಟ ಹಾರಿಸಿಯೇ ಸಂಪುಟ ಸೇರಬೇಕಾಯಿತು. ಅವರು ಯಡಿಯೂರಪ್ಪ, ಡಿ.ವಿ. ಸದಾನಂದಗೌಡ, ಜಗದೀಶ್ ಶೆಟ್ಟರ್ ಸಂಪುಟದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾಗಿ, ಜಿಲ್ಲಾ ಉಸ್ತುವಾರಿಯ ಹೊಣೆ ನಿರ್ವಹಿಸುತ್ತಿದ್ದಾರೆ.
ಇನಿಷಿಯಲ್ ಸೇರ್ಪಡೆ: ರಾಮದಾಸ್ ಅವರ ಹೆಸರಿನ ಹಿಂದೆ ಮೊದಲು ತಂದೆಯ ಹೆಸರಿನ ಎ. (ಅಶ್ವತ್ಥನಾರಾಯಣ ರಾವ್) ಇನಿಷಿಯಲ್ ಮಾತ್ರ ಇತ್ತು. 2004ರ ಚುನಾವಣೆಯಲ್ಲಿ ಸೋತ ನಂತರ ತಂದೆಯ ಹೆಸರಿನ ಇನಿಷಿಯಲ್ ಮುಂದೆ ತಾಯಿಯ ಹೆಸರಿನ ಇನಿಷಿಯಲ್ ಎಸ್ (ಸರೋಜಮ್ಮ) ಸೇರಿಸಿಕೊಂಡರು ಎಸ್.ಎ. ರಾಮದಾಸ್ ಆದರು.

ಈ ಬಾರಿ ಕದನ ಕಥೆ ಏನು?
ಈ ಸಲ ಮತ್ತೆ ಎಸ್.ಎ. ರಾಮದಾಸ್ ಬಿಜೆಪಿ ಅಭ್ಯರ್ಥಿ. ಕೆಜೆಪಿಯಿಂದ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಚ್.ವಿ. ರಾಜೀವ್, ಜೆಡಿಎಸ್‌ನಿಂದ ಕೆ.ಆರ್. ಬ್ಯಾಂಕ್ ಅಧ್ಯಕ್ಷ ಎಚ್. ವಾಸು ಅಭ್ಯರ್ಥಿಗಳು. ಕಾಂಗ್ರೆಸ್‌ನಿಂದ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಅವರಿಗೆ ಟಿಕೆಟ್ ಬಹುತೇಕ ಖಚಿತ. ಆದರೆ ಟಿ.ಆರ್. ಶಿವಕುಮಾರ್, ಕೆ.ಆರ್. ಮೋಹನಕುಮಾರ್, ರಘು ಆಚಾರ್ ಮತ್ತಿತರರು ಕೂಡ ಕೇಳುತ್ತಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಸೋಮಶೇಖರ್‌ಗೆ ಟಿಕೆಟ್ ನೀಡಿದ್ದಲ್ಲಿ ಕ್ಷೇತ್ರದಲ್ಲಿ ಇಬ್ಬರು ಹಳೆಯ ಹುಲಿಗಳಾದ ರಾಮದಾಸ್ ಮತ್ತು ಸೋಮಶೇಖರ್ ಅವರು ಇಬ್ಬರು ಹೊಸ ಹುಲಿಗಳಾದ ರಾಜೀವ್ ಮತ್ತು ವಾಸು ಅವರೊಂದಿಗೆ ಗೆಲವಿಗಾಗಿ ತೀವ್ರ ಹೋರಾಟ ನಡೆಸಬೇಕಾಗುತ್ತದೆ. ರಾಮದಾಸ್ ಮತ ಬುಟ್ಟಿಗೆ ರಾಜೀವ್, ಸೋಮಶೇಖರ್ ಮತ ಬುಟ್ಟಿಗೆ ವಾಸು ಕೈಹಾಕುವುದರಿಂದ ಫಲಿತಾಂಶ ಕುತೂಹಲ ಕೆರಳಿಸುತ್ತದೆ.

ವ್ಯಾಪ್ತಿ ಪ್ರದೇಶಗಳು
ಈ  ನಗರಪಾಲಿಕೆ ಹಳೆಯ ವಾರ್ಡ್ ನಂ. 1ರಿಂದ 18, 20, 62 ಹಾಗೂ 63. ಅಗ್ರಹಾರ, ಸುಣ್ಣದಕೇರಿ, ಲಕ್ಷ್ಮೀಪುರಂ, ರಾಮಚಂದ್ರ ಅಗ್ರಹಾರ, ಗುಂಡೂರಾವ್ ನಗರ, ಚಾಮುಂಡಿಪುರಂ, ಕೃಷ್ಣಮೂರ್ತಿಪುರಂ, ಜಯನಗರ, ಅಶೋಕಪುರಂ, ವಿದ್ಯಾರಣ್ಯಪುರಂ, ವಿಶ್ವೇಶ್ವರ ನಗರ, ಜೆ.ಪಿ. ನಗರ, ಶ್ರೀರಾಂಪುರ, ಅರವಿಂದನಗರ, ವಿವೇಕಾನಂದ ನಗರ, ರಾಮಕೃಷ್ಣ ನಗರ,   ಕುವೆಂಪುನಗರ, ಇಟ್ಟಿಗೆಗೂಡು, ನಜರ್‌ಬಾದ್, ಕುರುಬಾರಹಳ್ಳಿ, ಕೆ.ಸಿ. ಬಡಾವಣೆ, ಜಾಕಿ ಕ್ವಾರ್ಟರ್ಸ್, ಇತ್ಯಾದಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.