ದೊಡ್ಡ ಜಾತ್ರೆ: ರಥ ಬೀದಿ ಸುರಕ್ಷೆ ಖಾತ್ರಿ
ಕ.ಪ್ರ.ವಾರ್ತೆ ್ಣ ನಂಜನಗೂಡು ್ಣ ಮಾ.21
ದಕ್ಷಿಣಕಾಶಿ ನಂಜನಗೂಡಿನಲ್ಲಿ ಮಾ. 24 ರಂದು ನಡೆಯಲಿರುವ ಶ್ರೀಕಂಠೇಶ್ವರ ಸ್ವಾಮಿಯವರ ದೊಡ್ಡ ಜಾತ್ರಾ ಮಹೋತ್ಸವಕ್ಕೆ ಎದುರಾಗಿದ್ದ ವಿಘ್ನ ನಿವಾರಣೆಯಾದಂತಿದೆ. ಪಂಚಮಹಾರತೋತ್ಸದ ಪ್ರಮುಖ ಆಕರ್ಷಣೆಯಾದ ಗೌತಮ ಮಹಾರಥ ಹಾದು ಹೋಗುವ ರಥದ ಬೀದಿ ಸುರಕ್ಷಿತವಾಗಿದೆ ಎಂದು ತಜ್ಞರ ವರದಿ ದೊರೆತಿದೆ.
ಈ ವರದಿ ಗುರುವಾರ ಸಂಜೆ ಜಿಲ್ಲಾಧಿಕಾರಿಗಳ ಕೈ ಸೇರಿದೆ. ಇದರಿಂದಾಗಿ ನಾಡಿನ ಮೂಲೆಮೂಲೆಯಿಂದ ಆಗಮಿಸುವ ಭಕ್ತರು ನಿರಾತಂಕಪಡುವಂತಾಗಿದೆ. ಆದರೆ, ರಥದಬೀದಿಯ ಓಲ್ಡ್ ಪೊಲೀಸ್ ಸ್ಟೇಷನ್ ತಿರುವಿನ ಸುಮಾರು 10 ಮೀ. ವ್ಯಾಪ್ತಿ ಪ್ರದೇಶ ಸುರಕ್ಷಿತವಲ್ಲ ಎಂದು ಎಂಜಿನಿಯರ್‌ಗಳು ವರದಿಯಲ್ಲಿ ಎಚ್ಚರಿಸಿದ್ದಾರೆ. ಈ ಭಾಗದಲ್ಲಿ ಮಣ್ಣಿನ ಸಿಬಿಆರ್ ಕಡಿಮೆ ಇರುವುದರಿಂದ ಅರ್ಧ ಗಂಟೆಗೂ ಹೆಚ್ಚುಕಾಲ ಅದೇ ಸ್ಥಳದಲ್ಲಿ ರಥ ನಿಲ್ಲುವುದು ಕ್ಷೇಮವಲ್ಲ ಎಂದು ಸಲಹೆ ನೀಡಿದ್ದಾರೆ. ಉಳಿದಂತೆ ಯಾವುದೇ ಆತಂಕ ಇಲ್ಲ ಎಂದು ಹೇಳಲಾಗಿದೆ.
ಗುರುವಾರ ರಥಬೀದಿಯ ಸುಮಾರು 6 ಮ್ಯಾನ್‌ಹೋಲ್‌ಗಳ ಹೊರಸುತ್ತ ಟಾರ್ ಹಾಕಿ ಸಮತಟ್ಟು ಮಾಡಿ ರಥದ ಚಕ್ರ ಸರಾಗವಾಗಿ ಹಾದು ಹೋಗಲು ವ್ಯವಸ್ಥೆಗೊಳಿಸಲಾಯಿತು. ಭವಿಷ್ಯದಲ್ಲಿ ರಥದ ಬೀದಿಯ ರಸ್ತೆಯನ್ನು ಐಆರ್‌ಸಿ ಅನುಗುಣವಾಗಿ ಪೂರ್ಣ ಪ್ರಮಾಣದಲ್ಲಿ ಆಭಿವೃದ್ಧಿಪಡಿಸುವುದು ಅವಶ್ಯಕ ಎಂದು ತಂತ್ರಜ್ಞರು ಸೂಚನೆ ನೀಡಿದ್ದು, ಇಲ್ಲವಾದಲ್ಲಿ ಅನಾಹುತಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಶ್ರೀಕಂಠಮುಡಿ ಉತ್ಸವ: ರಥೋತ್ಸವ ಅಂಗವಾಗಿ ಗುರುವಾರ ಪಾರ್ವತಿ ಸಮೇತ ಶ್ರೀಕಂಠೇಶ್ವರ ಸ್ವಾಮಿಯವರಿಗೆ ನವರತ್ನ ಪರಿಷ್ಕೃತವಾದ ಶ್ರೀಕಂಠಮುಡಿ ಕಿರೀಟ ಧಾರಣ ಉತ್ಸವವು ಗುರುವಾರ ನೆರವೇರಿತು. ಉತ್ಸವಮೂರ್ತಿ ಹಾಗೂ ಮೂಲ ಶಿವಲಿಂಗದ ಅಲಂಕಾರಕ್ಕಾಗಿ ಧರಿಸುವ ವಜ್ರ ಖಚಿತ ಶ್ರೀಕಂಠಮುಡಿ, ಚಿನ್ನದ ಕೊಳಗ, ಪಾರ್ವತಿ ದೇವಿಯವರಿಗೆ ಡಾಬು, ಕಿರೀಟ, ಬಂಗಾರದ ಸರಗಳು ಸೇರಿದಂತೆ ವಿವಿಧ ಆಭರಣಗಳನ್ನು ದೇವಾಲಯ ಬೊಕ್ಕಸದಿಂದ ಬೆಳಗ್ಗೆ ಹೊರ ತೆಗೆಯಲಾಯಿತು.
ತಹಸೀಲ್ದಾರ್ ಪ್ರಿಯದರ್ಶಿನಿ, ಇಒ ಚಂದ್ರಶೇಖರ್ ವಿ. ಡಾವಣಗೇರಿ, ಪಾರುಪತ್ತೆಗಾರ ಶಾಮಣ್ಣ, ಆಗಮಿಕ ನಾಗಚಂದ್ರ ದೀಕ್ಷಿತ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ್, ಸದಸ್ಯರ ಸಮ್ಮುಖದಲ್ಲಿ ಶ್ರೀಮನ್ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ ಪ್ರಭುಗಳು ಕೊಡುಗೆಯಾಗಿ ನೀಡಿರುವ ಶ್ರೀಕಂಠಮುಡಿ ಸಮೇತ ಆಭರಣಗಳನ್ನು ಅಧಿಕಾರಿಗಳು ಪರಿಶೀಲಿಸಿ, ನಂತರ ಸನ್ನಿಧಿಯ ಅರ್ಚಕರಿಗೆ ಸುಪರ್ದಿಗೆ ನೀಡಲಾಯಿತು.
ಶ್ರೀಕಂಠಮುಡಿಗೆ ಪೂಜೆ ಸಲ್ಲಿಸಿ ನಂತರ ರಥದ ಬೀದಿ, ಅಗ್ರಹಾರ ಹಾಗೂ ಚಾಮಲಾಪುರದ ಬೀದಿಯ ರಾಮಮಂದಿರ, ಕನ್ನಿಕಾ ಪರಮೇಶ್ವರಿ ದೇವಾಲಯ, ಉಪ್ಪಾರ ಸಮಾಜದ ಛತ್ರಗಳಲ್ಲಿ ಪೂಜೆ ಸಲ್ಲಿಸಿ ನಂತರ ಬಿಗಿ ಬಂದೋಬಸ್ತ್‌ನಲ್ಲಿ ದೇವಾಲಯ ಉತ್ಸವರ ಗುಡಿಯಲ್ಲಿ ಇರಿಸಲಾಗುವುದು. ರಾತ್ರಿ ಉತ್ಸವ ಮೂರ್ತಿಗೆ ಮುಡಿ ಅಲಂಕಾರದೊಂದಿಗೆ ವಿಜೃಂಭಣೆಯ ಉತ್ಸವ ನೆರವೇರಿತು. ದೊಡ್ಡ ಜಾತ್ರೆ, ಚಿಕ್ಕ ಜಾತ್ರೆ, ಗಿರಿಜಾ ಕಲ್ಯಾಣ ಮಹೋತ್ಸವದ ವಿಶೇಷ ದಿನಗಳಲ್ಲಿ ಮಾತ್ರ ಮುಡಿ ಸೇರಿದಂತೆ ವಿಶೇಷ ಆಭರಣಗಳನ್ನು ದೇವರುಗಳಿಗೆ ಅಲಂಕರಿಸಲಾಗುವುದು.
ದೇಗುಲದ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಎಸ್. ಮಲ್ಲಿಕಾರ್ಜುನ್, ಸದಸ್ಯರಾದ ಎನ್.ಎಸ್. ಶಿವನಾಗಪ್ಪ, ಮೋಹನ್, ಶಶಿಕಲಾ, ಎಇಒ ನಾಗರಾಜು ಮತ್ತು ಲೆಕ್ಕಾಧೀಕ್ಷಕ ರಾಜು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

