ಸಕಲ ಸಿದ್ಧತೆಗೆ ಡಿಸಿ ಸೂಚನೆ
ಕ.ಪ್ರ ವಾರ್ತೆ ್ಣ ಮೈಸೂರು ್ಣ ಮಾ.21
ಭಾರತ ಚುನಾವಣಾ ಆಯೋಗದ ಸೂಚನೆಯಂತೆ ಮೈಸೂರು ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತವಾಗಿ ನಡೆಸಲು ಜಿಲ್ಲೆಯ ಎಲ್ಲ ಉಪ ವಿಭಾಗಾಧಿಕಾರಿಗಳು, ತಹಸೀಲ್ದಾರರು ಮತ್ತು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮರೋಪಾದಿಯಲ್ಲಿ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ. ರಾಮೇಗೌಡ ಸೂಚಿಸಿದರು.
ವಿಧಾನಸಭಾ ಚುನಾವಣಾ ಪೂರ್ವಸಿದ್ಧತೆ ಕುರಿತು ಗುರುವಾರ ಅಧಿಕಾರಿಗಳ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯ ಎಲ್ಲ ಮತದಾನ ಕೇಂದ್ರಗಳನ್ನು ಖುದ್ದಾಗಿ ಪರಿಶೀಲಿಸಿ ನಿಗದಿತ ನಮೂನೆಯಲ್ಲಿ ಕೂಡಲೇ ಮಾಹಿತಿ ಒದಗಿಸಬೇಕು ಎಂದರು.
ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ನಿರಂತರ ಪರಿಷ್ಕರಣೆಯಡಿ ಸ್ವೀಕೃತವಾಗುವ ಸ್ವೀಕೃತವಾಗಿರುವ ಅರ್ಜಿಗಳನ್ನು ಪೂರಕ ಪಟ್ಟಿ 2ರಲ್ಲಿ ಸೇರ್ಪಡೆಗೆ ಕ್ರಮ ಜರುಗಿಸಬೇಕು. ಆಯಾ ದಿನದಂದು ಸ್ವೀಕೃತವಾಗುವ ಅರ್ಜಿಗಳನ್ನು ಅಂದೇ ಡಾಟಾ ಎಂಟ್ರಿ ಮಾಡಿಸಬೇಕು. ಅಲ್ಲದೆ, ಮತದಾರರ ಪಟ್ಟಿಯಲ್ಲಿ ಗಣ್ಯ ವ್ಯಕ್ತಿಗಳ ಹೆಸರಿರುವ ಬಗ್ಗೆ ಪರಿಶೀಲನಾ ವರದಿಯ ದೃಢೀಕರಣದೊಂದಿಗೆ ಕೂಡಲೇ ಸಲ್ಲಿಸಬೇಕು ಎಂದು ಅವರು ಸೂಚಿಸಿದರು.
ಗುರುತಿನ ಚೀಟಿ: ಜಿಲ್ಲೆಯಲ್ಲಿ ಎಲ್ಲಾ ಮತದಾರರು ಭಾವಚಿತ್ರವಿರುವ ಗುರುತಿನ ಚೀಟಿ (ಎಪಿಕ್ ಕಾರ್ಡ್) ವಿತರಿಸಿ ಶೇ. 100 ಪ್ರಗತಿ ಸಾಧಿಸಬೇಕು. ಮತದಾರರ ಪಟ್ಟಿಯಲ್ಲಿ ಹೆಸರಿದ್ದು, ಭಾವಚಿತ್ರವಿಲ್ಲದ ಮತದಾರರಿಂದ ಭಾವಚಿತ್ರ ಸಂಗ್ರಹಿಸಿ ಮತದಾರರ ಪಟ್ಟಿ ಅಪಡೇಟ್ ಮಾಡಬೇಕು. ಪಟ್ಟಿಗಳಲ್ಲಿ ಕಂಡುಬಂದಿರುವ ಪುನರಾವರ್ತನೆ ಪ್ರಕರಣ ಹಾಗೂ ಎರರ್ ಲಿಸ್ಟ್ ಮುಖ್ಯ ಚುನಾವಣಾಧಿಕಾರಿ ಕಚೇರಿಯಿಂದ ಜನರೇಟ್ ಮಾಡಿ ನೀಡಲಾಗಿದ್ದು, ಇವುಗಳನ್ನು ಪರಿಶೀಲಿಸಿ ಮತದಾರರ ಪಟ್ಟಿ ಸರಿಪಡಿಸಲು ಕ್ರಮ ವಹಿಸಬೇಕು ಎಂದರು.
ಪ್ರತಿ ಮತದಾರರಿಗೆ ಪ್ರತ್ಯೇಕ ಮಹಜರ್ ಮಾಡಬೇಕು. ಆನ್ಲೈನ್ ಅರ್ಜಿಗಳನ್ನು ಆಯಾ ದಿನದಂದೇ ಡೌನ್ಲೋಡ್ ಮಾಡಿಕೊಂಡು ಡಾಟಾ ಎಂಟ್ರಿ ಮಾಡಿ ಮತದಾರರ ಪಟ್ಟಿಗೆ ಸೇರಿಸಲು ಕ್ರಮ ವಹಿಸಬೇಕು. ಡುಪ್ಲಿಕೇಟ್ ಎಪಿಕ್ ನಂಬರ್ ಇಲ್ಲದ ಮತದಾರರಿಗೆ ಮುಖ್ಯ ಚುನಾವಣಾಧಿಕಾರಿ ಕಚೇರಿಯಿಂದ ನಿಗದಿಪಡಿಸಿ ಕಳುಹಿಸಿದ ಪಟ್ಟಿಯಲ್ಲಿರುವ ಮತದಾರರಿಗೆ ಮತದಾರರ ಗುರುತಿನ ಚೀಟಿ ತಯಾರಿಸಿ ವಿತರಿಸಬೇಕು ಎಂದು ಅವರು ತಿಳಿಸಿದರು.ಸುಗಮ ಮತದಾನಕ್ಕಾಗಿ ಮತದಾನಾಧಿಕಾರಿಗಳ ನೇಮಕಾತಿ ಬಗ್ಗೆ ಕ್ರಮ ಜರುಗಿಸಬೇಕು. ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸೆಕ್ಟರ್ ಅಧಿಕಾರಿಗಳನ್ನೊಳಗೊಂಡ ತಂಡಗಳ ರಚನೆಗೆ ಪ್ರಸ್ತಾವನೆ ಸಲ್ಲಿಸಬೇಕು. ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ಷ್ಮ, ಅತೀ ಸೂಕ್ಷ್ಮ ಹಾಗೂ ಸಾಮಾನ್ಯ ಮತಗಟ್ಟೆಗಳ ಪಟ್ಟಿ ತಯಾರಿಸಬೇಕು ಎಂದು ಅವರು ಸೂಚಿಸಿದರು.
ನಗರ ಪೊಲೀಸ್ ಆಯುಕ್ತ ಕೆ.ಎಲ್. ಸುಧೀರ್, ಡಿಸಿಪಿ ಬಸವರಾಜ ವೈ. ಮಾಲಗತ್ತಿ, ಎಸ್ಪಿ ಆರ್. ದಿಲೀಪ್, ಹೆಚ್ಚುವರಿ ಜಿಲ್ಲಾಧಿಕಾರಿ ನಾಗಾನಾಯಕ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಸರ್ಕಾರಿ ಅತಿಥಿಗೃಹಗಳ ವಶ:ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಮೇ 11 ರವರೆಗೆ ಜಾರಿಯಲ್ಲಿರುವುದರಿಂದ ಸರ್ಕಾರದ ಅಧೀನದಲ್ಲಿರುವ ಎಲ್ಲಾ ಅತಿಥಿಗೃಹಗಳನ್ನು ತಮ್ಮ ಅಧೀನಕ್ಕೆ ಪಡೆದಿರುವುದಾಗಿ ಜಿಲ್ಲಾಧಿಕಾರಿ ಡಾ. ರಾಮೇಗೌಡ ತಿಳಿಸಿದ್ದಾರೆ. ಸರ್ಕಾರಿ ಅತಿಥಿಗೃಹಗಳನ್ನು ರಾಜಕೀಯ ಉದ್ದೇಶಗಳಿಗೆ ಬಳಸುವುದನ್ನು ನಿಷೇಧಿಸಲಾಗಿದೆ. ಅತಿಥಿಗೃಹ ಆವರಣದಲ್ಲಿ ಯಾವುದೇ ರೀತಿಯ ಸಭೆ, ಸಮಾರಂಭ ನಡೆಸುವುದು, ಅನಧಿಕೃತ ವಾಹನ ನಿಲುಗಡೆ, ತಾತ್ಕಾಲಿಕ ವಿಶ್ರಾಂತಿಗಾಗಿ ಕೊಠಡಿ ನೀಡುವುದನ್ನು ಸಹ ನಿಷೇಧಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

