ಪ್ರಶ್ನೆಪತ್ರಿಕೆಯಲ್ಲಿ ಯಡವಟ್ಟು; ಸಿಕ್ಕೀತೆ ಗ್ರೇಸ್?
ಕ.ಪ್ರ. ವಾರ್ತೆ ಬೆಂಗಳೂರು ಮಾ.22
ದ್ವಿತೀಯ ಪಿಯು ಗಣಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆಯು ವಿದ್ಯಾರ್ಥಿಗಳ ನಿದ್ದೆಗೆಡಿಸಿದೆ.
ಮಾ.18ರಂದು ನಡೆದ ಪರೀಕ್ಷೆಯಲ್ಲಿ 3 ಪ್ರಶ್ನೆಗಳು ತಪ್ಪಾಗಿ ಮುದ್ರಿತವಾಗಿದ್ದು, ಪದವಿಪೂರ್ವ ಶಿಕ್ಷಣ ಇಲಾಖೆ 8 ಗ್ರೇಸ್ ಅಂಕ ನೀಡಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸುತ್ತಿದ್ದಾರೆ.
ಪ್ರಾಥಮಿಕ ಹಂತದಲ್ಲಿ ಇದನ್ನು ಇಲಾಖೆಯೂ ತಿರಸ್ಕರಿಸಿದ್ದರೂ ಮೌಲ್ಯಮಾಪನ ಸಮಿತಿಯು ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಇಲಾಖೆ ನಿರ್ದೇಶಕ ಚಕ್ರವರ್ತಿ ಮೋಹನ್ ತಿಳಿಸಿದ್ದಾರೆ.
ಮುಂದಿನ ಶೈಕ್ಷಣಿಕ ವರ್ಷದಿಂದ ದ್ವಿತೀಯ ಪಿಯುಸಿ ಪಠ್ಯಕ್ರಮ ಬದಲಾಗಲಿದೆ. ಈ ಹಿನ್ನೆಲೆಯಲ್ಲಿ ಅಂತಿಮ ಪರೀಕ್ಷೆಯ ಪ್ರಶ್ನೆಪತ್ರಿಕೆ ಸುಲಭವಾಗಿರುವ ನಿರೀಕ್ಷೆಯನ್ನು ವಿದ್ಯಾರ್ಥಿಗಳು ಇರಿಸಿಕೊಂಡಿದ್ದರು. ಆದರೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಮಾ.18ರಂದು ನಡೆದ ಪ್ರಶ್ನೆ ಪತ್ರಿಕೆ ತುಸು ಕಷ್ಟವಾಗಿತ್ತು ಎನ್ನುವುದು ವಿದ್ಯಾರ್ಥಿ ವಲಯದ ಅಭಿಪ್ರಾಯವಾಗಿದೆ.
3 ಪ್ರಶ್ನೆಗಳಲ್ಲಿ ಎಡವಟ್ಟು: ಪ್ರಶ್ನೆ ಸಂಖ್ಯೆ 11, 26 ಮತ್ತು 35(ಬಿ)ಗಳಲ್ಲಿ ಮುದ್ರಾ ರಾಕ್ಷಸನ ಹಾವಳಿ ಕಂಡುಬಂದಿದೆ. ಪ್ರಶ್ನೆಗಳಲ್ಲಿನ ಸಣ್ಣಪುಟ್ಟ ದೋಷದಿಂದ ಸಮಸ್ಯೆ ಎದುರಾಗಿದೆ. ಆದರೆ ಗ್ರೇಸ್ ಅಂಕದ ಬಗ್ಗೆ ಅಂತಿಮ ತೀರ್ಮಾನವಾಗಿಲ್ಲ.
ಮೂರೂ ಪ್ರಶ್ನೆಗಳಲ್ಲಿ 11ನೇ ಪ್ರಶ್ನೆಯಲ್ಲಿ ಮಾತ್ರ ದೊಡ್ಡ ಪ್ರಮಾದವಾಗಿದೆ. ಡಿವೈಡ್ಸ್ ಸಂಕೇತವು ತಪ್ಪಾಗಿ ಮುದ್ರಿತವಾಗಿದೆ. ಈ ರೀತಿಯಿದ್ದರೆ ವಿದ್ಯಾರ್ಥಿಗಳು ಪ್ರಶ್ನೆಗೆ ಉತ್ತರ ಪಡೆಯಲು ಸಾಧ್ಯವಿಲ್ಲ. ಇದನ್ನು ಗಣಿತ ಉಪನ್ಯಾಸಕರು ಕೂಡ ಖಾತರಿ ಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಶ್ನೆ ಸಂಖ್ಯೆಯನ್ನು ನಮೂದಿಸಿದ್ದರೆ 2 ಅಂಕ ದೊರೆಯುವ ಸಾಧ್ಯತೆಯಿದೆ.
ಇನ್ನು ಪ್ರಶ್ನೆ ಸಂಖ್ಯೆ 26ರಲ್ಲಿ ವೆಕ್ಟಾರ್ ಸಂಕೇತವು ಮಾಯವಾಗಿದೆ. ಈ ಹಿನ್ನೆಲೆಯಲ್ಲಿ ಉತ್ತರವು 'ಝೀರೋ ವೆಕ್ಟಾರ್' ಬದಲು 'ಝೀರೋ' ಅಷ್ಟೆ ಬಂದಿದ್ದರೂ ಅಂಕ ದೊರೆಯಬಹುದು ಎಂದು ಬೇಸ್ ಸಂಸ್ಥೆಯ ಗಣಿತ ಉಪನ್ಯಾಸಕ ಎಚ್.ಎಸ್. ಮಹದೇವಯ್ಯ ತಿಳಿಸಿದ್ದಾರೆ.
ಪ್ರಶ್ನೆ ಸಂಖ್ಯೆ 35(ಬಿ)ಯಲ್ಲಿ 'ಫೈಂಡ್ ಏ ಸ್ಕ್ವೇರ್' ಎನ್ನುವ ಬದಲು 'ಫೈಂಡ್ ಏ ಕ್ಯೂಬ್' ಎಂದಾಗಿದೆ. ಪ್ರಶ್ನೆ ಪತ್ರಿಕೆಯಲ್ಲಿನ ಸಮಸ್ಯೆಗೆ 'ಏ ಕ್ಯೂಬ್' ಉತ್ತರ ಬರಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ಬರಿ ಪ್ರಶ್ನೆ ಸಂಖ್ಯೆ ನಮೂದಿಸಿದ್ದರೆ ಗ್ರೇಸ್ ಅಂಕ ದೊರೆಯದಿರಬಹುದು. ಮೌಲ್ಯಮಾಪನ ಸಮಿತಿ ನಿರ್ಧರಿಸಿದರೇ 'ಏ ಸ್ಕ್ವೇರ್' ಉತ್ತರ ಬಂದಿದ್ದರೆ ಅಂಕ ದೊರೆಯಬಹುದು ಎನ್ನುತ್ತಾರೆ ಪಿಯು ಉಪನ್ಯಾಸಕ ಉದಯಶಂಕರ್.
ಪ್ರಶ್ನೆ ಪತ್ರಿಕೆ ವಿಭಿನ್ನವಾಗಿತ್ತು, ಕಷ್ಟವಿರಲಿಲ್ಲ: ಪ್ರಸಕ್ತ ಸಾಲಿನ ಗಣಿತ ಪ್ರಶ್ನೆ ಪತ್ರಿಕೆಯಲ್ಲಿ ಜಟಿಲ ಪ್ರಶ್ನೆಗಳೇ ತುಂಬಿಕೊಂಡಿದ್ದವು. ವಿದ್ಯಾರ್ಥಿಗಳು ಉತ್ತೀರ್ಣರಾಗುವುದು ಕಷ್ಟ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ವಿಷಯ ತಜ್ಞರು ಹೇಳುವ ಪ್ರಕಾರ, ಪ್ರಶ್ನೆ ಪತ್ರಿಕೆಯಲ್ಲಿ ಈ ಹಿಂದಿನ ವರ್ಷಗಳಲ್ಲಿ ಕೇಳಿದ ಪ್ರಶ್ನೆಗಳನ್ನು ಬಿಟ್ಟು ಹೊಸ ಪ್ರಶ್ನೆಗಳನ್ನು ಕೇಳಲಾಗಿತ್ತು. ಇದರಿಂದ ವಿದ್ಯಾರ್ಥಿಗಳು ವಿಚಲಿತರಾಗಿರಬಹುದು. ಆದರೆ ಯಾವುದೇ ಒಂದು ಪ್ರಶ್ನೆಯೂ ಪಠ್ಯಕ್ರಮದಿಂದ ಹೊರತಾಗಿರಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

