ಕ.ಪ್ರ.ವಾರ್ತೆ ಮೈಸೂರು ಮಾ.30
ಸರ್ಕಾರ ಕೈಗೊಂಡ ನಿರ್ಧಾರ ವಿರೋಧಿಸಿ ರಂಗಾಯಣ ಕಲಾವಿದರು ನಡೆಸುತ್ತಿರುವ ಹೋರಾಟ 9ನೇ ದಿನಕ್ಕೆ ಕಾಲಿಟ್ಟಿತು. ಪ್ರೊ. ವಿಮರ್ಶಕ ಜಿ.ಎಚ್. ನಾಯಕ್ ಅವರು ಹೋರಾಟದಲ್ಲಿ ಪಾಲ್ಗೊಂಡು ಬೆಂಬಲ ನೀಡಿದರು.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ರಂಗಾಯಣವು ರಂಗಭೂಮಿಯ ಸಾಧ್ಯತೆ ನಮ್ಮ ಕಣ್ಣ ಮುಂದೆ ಕಟ್ಟಿಕೊಟ್ಟಿತು. ನಾವು ಸಾಹಿತ್ಯ ನೆಚ್ಚಿಕೊಂಡವರಾದರೂ ನಾಟಕದ ಬಗ್ಗೆ ಸಾಮಾನ್ಯ ತಿಳಿವಳಿಕೆ ನೀಡಿತು. ಇಲ್ಲಿನ ಕಲಾವಿದರು ತಜ್ಞರಾಗಿದ್ದು, ಅವರು ರಂಗದ ಮೇಲೆ ಅಭಿನಯಿಸಿದ ಹಲವು ನಾಟಕಗಳನ್ನು ನಮಗೆ ಇಂದಿಗೂ ಕಾಡುತ್ತವೆ. ಹೀಗಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ. ಬಿ.ವಿ. ಕಾರಂತರು ಭಾರತ ರಂಗಭೂಮಿಯ ಚೈತನ್ಯ ಎಂದು ಬಣ್ಣಿಸಿದರು.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ಡಾ. ಪಂಡಿತಾರಾಧ್ಯ, ಕಲಾವಿದರಾದ ಹುಲಿಗಪ್ಪ ಕಟ್ಟಿಮನಿ, ಮೈಮ್ ರಮೇಶ್, ಪ್ರಶಾಂತ್ ಹಿರೇಮಠ್, ಮಹದೇವ, ನಂದಿನಿ ಮೊದಲಾದವರು ಇದ್ದರು.