ಕ.ಪ್ರ.ವಾರ್ತೆ ನಂಜನಗೂಡು ಮಾ.30
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕುಂಬ್ರಳ್ಳಿ ಸುಬ್ಬಣ್ಣ ಮತ್ತು ಬಿ.ಎಸ್. ಮಹದೇವಪ್ಪ ಅವರ ಮೇಲಿನ ಭ್ರಷ್ಟಾಚಾರ ಮತ್ತು ಅವ್ಯವಹಾರ ಆರೋಪ ಹಿನ್ನೆಲೆ ತಾಲೂಕು ಕಾಂಗ್ರೆಸ್‌ನಲ್ಲಿ ಕಾಣಿಸಿಕೊಂಡಿರುವ ಭಿನ್ನಮತದ ಬಿಸಿ ಶನಿವಾರ ಇಲ್ಲಿ ನಡೆದ ಪಕ್ಷದ ಚುನಾವಣಾ ಪೂರ್ವಭಾವಿ ಸಭೆಗೂ ಚುರುಕು ಮುಟ್ಟಿಸಿತು.
ಸಭೆಗೂ ಮುನ್ನವೇ ಮಾರ್ಗ ಮಧ್ಯೆ ಸಂಸದರನ್ನು ಭೇಟಿ ಮಾಡಿದ ಜಿಲ್ಲಾ ಕಾಂಗ್ರೆಸ್ ಕಾನೂನು ಮತ್ತು ಮಾನವ ಹಕ್ಕುಗಳ ವಿಭಾಗದ ಅಧ್ಯಕ್ಷ ವಕೀಲ ಎಸ್. ರಾಚಪ್ಪ ಮತ್ತು ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಎನ್. ನಾಗರಾಜು ನೇತೃತ್ವದ ನಿಯೋಗ ಇಬ್ಬರೂ ಮುಖಂಡರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿತು.
ಶಾಸಕ ವಿ. ಶ್ರೀನಿವಾಸಪ್ರಸಾದ್ ಅವರು ಏ. 5 ರಂದು ನಂಜನಗೂಡಿಗೆ ಬಂದ ನಂತರ ಮಾತನಾಡಿ, ಸಮಸ್ಯೆ ಬಗೆಹರಿಸುವುದಾಗಿ ಸಂಸದರು ಸಮಾಧಾನಪಡಿಸಿದರು. ಸಭೆಯಲ್ಲಿ ಚುನಾವಣಾ ತಯಾರಿ ಹೊರತಾಗಿ ಬೇರಾವುದೇ ವಿಷಯ ಚರ್ಚಿಸುವಂತಿಲ್ಲ ಎಂದ ಸಂಸದರು, ನೀಡಿದ ಸೂಚನೆಯನ್ನೂ
ಪಕ್ಕಕ್ಕಿಟ್ಟು ರಾಚಪ್ಪ ತಮ್ಮ ಭಾಷಣದಲ್ಲಿ ವಿವಾದ ಕುರಿತು ಮಾತನಾಡಿದರು. ಕಾರ್ಯಕರ್ತರ ಹಿಡಿತದಿಂದ ಪಕ್ಷ ಅನ್ಯರ ಪಾಲಾಗಬಾರದು. ಮುಖಂಡರು ವಿವಾದಕ್ಕೆ ಶೀಘ್ರವೇ ಇತಿಶ್ರೀ ಹಾಡಬೇಕು. ಮೂಲೆ ಗುಂಪಾಗಿರುವ ಅತೃಪ್ತ ನಿಷ್ಠಾವಂತ ಕಾರ್ಯಕರ್ತರ ಭಾವನೆಗಳನ್ನಷ್ಟೇ ತಾವು ವ್ಯಕ್ತಪಡಿಸುತ್ತಿರುವುದಾಗಿ ಹೇಳಿದರು.
ಅಣ್ಣನಿಗಾಗಿ ತ್ಯಾಗ: ಈ ಮಧ್ಯೆ ಮಾತನಾಡಿದ ಶಾಸಕ ಪ್ರಸಾದ್ ಅವರ ಸಹೋದರ, ಕೆಪಿಸಿಸಿ ಸದಸ್ಯ ವಿ. ರಾಮಸ್ವಾಮಿ, ತಾವೂ ನಂಜನಗೂಡು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ವಿಚಾರ ಬಹಿರಂಗಪಡಿಸಿದರು. ತಮ್ಮ ಎಲ್ಲಾ ಅರ್ಹತೆ ಮತ್ತು ಸಂಘಟನೆಯನ್ನು ಹಿರಿಯಣ್ಣ ಪ್ರಸಾದರ ರಾಜಕೀಯ ಭವಿಷ್ಯಕ್ಕಾಗಿ ಮೀಸಲಿಟ್ಟಿರುವುದಾಗಿ ತಿಳಿಸಿದರು. ತಮಗೆ ಕೊಳ್ಳೇಗಾಲದಲ್ಲಿ ಪಕ್ಷದ ಟಿಕೆಟ್ ಕೊಡಿಸಲು ಪ್ರಯತ್ನಿಸುವಂತೆ ಸಂಸದರಲ್ಲಿ ಮನವಿ ಮಾಡಿದರು. ಶಾಸಕ ಪ್ರಸಾದ್, ಸಂಸದ ಆರ್. ಧ್ರುವನಾರಾಯಣ್ ಮತ್ತು ಮುಖಂಡ ಯು.ಎನ್. ಪದ್ಮನಾಭರಾವ್ ಅವರ ಶ್ರಮದಿಂದಾಗಿ ಪಕ್ಷದಲ್ಲಿನ ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯದವರು ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರ ಪಡೆಯುವಂತಾಗಿದೆ ಎಂದು ಪುರಸಭಾ ಮಾಜಿ ಅಧ್ಯಕ್ಷ ಪಿ. ಶ್ರೀನಿವಾಸ್ ಆಡಿದ ಮಾತು ಭಿನ್ನರ ಗುಂಪಿಗೆ ಚುರುಕು ಮುಟ್ಟಿಸುವಂತಿತ್ತು.