ಮೈಸೂರು

ನಡೆಯದ ಅಧ್ಯಕ್ಷರ ಚುನಾವಣೆ; ಜನರ ಕೆಲಸಕ್ಕೆ ಅಡಚಣೆ

Published On :

ಕ.ಪ್ರ.ವಾರ್ತೆ  ಕೆ.ಆರ್. ನಗರ  ಮೇ 11
ಪುರಸಭಾ ಚುನಾವಣೆ ನಡೆದು ಎರಡು ತಿಂಗಳಾಗಿದ್ದರೂ ಈವರೆಗೆ ಅಧ್ಯಕ್ಷರ ಚುನಾವಣೆ ನಡೆಯದಿರುವುದರಿಂದ ಚುನಾಯಿತರಾಗಿರುವ ಸದಸ್ಯರಿಗೆ ಅಧಿಕಾರ ದೊರಕಿದೆಯೇ ಹೊರತು ಆಡಳಿತದಲ್ಲಿ ಹಿಡಿತ ಸಿಕ್ಕಿಲ್ಲ.
ಈವರೆಗೂ ಚುನಾಯಿತರಾದವರು ಪುರಸಭೆಗೆ ಭೇಟಿ ನೀಡುವ ಕೆಲಸ ಮಾಡುತ್ತಿದ್ದಾರೆಯೇ ಹೊರತು ತಮ್ಮ ವಾರ್ಡ್‌ಗಳಿಗೆ ಸಾರ್ವಜನಿಕವಾಗಿ ಆಗಬೇಕಿರುವ ಕೆಲಸಗಳ ಬಗ್ಗೆ ಮತ್ತು ಹೊಸ ಕಾಮಗಾರಿಗಳ ಬಗ್ಗೆ ಅಧಿಕಾರಯುತವಾಗಿ ಅಧಿಕಾರಿಗಳನ್ನು ಪ್ರಶ್ನಿಸಲು ಅಥವಾ ಜನರ ಸಮಸ್ಯೆಗೆ ಸ್ಪಂದಿಸುವಂತೆ ಸೂಚಿಸಲು ಸಾಧ್ಯವಾಗುತ್ತಿಲ್ಲ.
ಇದರಿಂದ ಪಟ್ಟಣದಲ್ಲಿ ಹತ್ತಾರು ಸಮಸ್ಯೆಗಳು ತಾಂಡವವಾಡುತ್ತಿದ್ದರೂ ಕೇಳುವವರೇ ಇಲ್ಲದಂತಾಗಿದೆ. ಪ್ರಮುಖವಾಗಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದ್ದು, ತಿಂಗಳಾಂತ್ಯದ ವೇಳೆಗೆ ಮಳೆ ಬಂದು ಕಾವೇರಿ ನದಿಯಲ್ಲಿ ನೀರು ಹರಿಯದಿದ್ದರೆ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದ್ದು, ಮುಂಜಾಗೃತವಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಯಾರೂ ಗಮನ ಹರಿಸುತ್ತಿಲ್ಲ.
ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಸ್ವಚ್ಛತೆಯ ಸಮಸ್ಯೆ ಕಾಡುತ್ತಿದ್ದು, ಸಾರ್ವಜನಿಕರು ಪುರಸಭಾ ಅಧಿಕಾರಿಗಳಿಗೆ ದೂರಿದರೂ ಕೂಡಲೇ ಸ್ಪಂದಿಸುವ ಕೆಲಸ ಆಗುತ್ತಿಲ್ಲ. ಇದರಿಂದ ಚುನಾಯಿತ ಸದಸ್ಯರು ಬೇಸತ್ತು ಹೋಗಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸಲಾಗದಿರುವುದಕ್ಕೆ ವ್ಯಥೆಪಡುತ್ತಿದ್ದಾರೆ. ಇರುವ ಅಧಿಕಾರವನ್ನು ಬಳಸಿಕೊಂಡು ಜನಸೇವೆ ಮಾಡಲಾಗದ ಅತಂತ್ರ ಸ್ಥಿತಿಯಲ್ಲಿದ್ದಾರೆ.
ಪುರಸಭೆಗೆ ನೀರಿನ ಕಂದಾಯ ಮತ್ತು ಮನೆಗಂದಾಯ ಪಾವತಿಸಲು ತೆರಳುವ ನಾಗರಿಕರು ದಿನಗಟ್ಟಲೆ ಕಾಯ್ದರೂ ಸಂಬಂಧಿತ ಅಧಿಕಾರಿಗಳು ಲಭ್ಯರಾಗುತ್ತಿಲ್ಲ. ಕಚೇರಿಗೆ ಬಂದು ನಾವೆ ಕಂದಾಯ ಪಡೆದುಕೊಳ್ಳಿ ಎಂದು ಕೇಳಬೇಕಾದ ಸ್ಥಿತಿ ಇದ್ದು, ಹೀಗಾದರೆ ಪಟ್ಟಣದ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪುರಸಭೆಗೆ ಕಂದಾಯ ಪಾವತಿಸಲು ಬಂದು ಕಾಯ್ದು ಕುಳಿತಿದ್ದ ನಾಗರಿಕರೊಬ್ಬರು ಪ್ರಶ್ನಿಸಿದರು.
ಮಳೆಗಾಲ ಬಂದರೆ ಪಟ್ಟಣದ ಪ್ರಮುಖ ಜನನಿಬಿಡ ರಸ್ತೆಯಾಗಿರುವ ಹಾಸನ-ಮೈಸೂರು ಮುಖ್ಯ ರಸ್ತೆಯಲ್ಲಿ ನೀರು ಬಾಕ್ಸ್ ಚರಂಡಿಗೆ ಹೋಗದೆ ರಸ್ತೆಯಲ್ಲೇ ನಿಂತು ಗಂಟೆಗಳ ಕಾಲ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಜತೆಗೆ ಚರಂಡಿಯ ಮೇಲ್ಭಾಗ ಹತ್ತಾರು ಕಡೆಗಳಲ್ಲಿ ಕುಸಿದು ಕೆಲವರು ಸಂಚರಿಸುವಾಗ ಬಿದ್ದು, ಗಾಯ ಮಾಡಿಕೊಂಡ ಉದಾಹರಣೆಗಳಿವೆ.



ಪುರಸಭಾ ಸದಸ್ಯರ ಚುನಾವಣೆ ನಡೆದು ಎರಡು ತಿಂಗಳಾಗಿದ್ದರೂ ವಿಧಾನಸಭಾ ಚುನಾವಣೆ ಬಂದಿದ್ದರಿಂದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆದಿಲ್ಲ. ಇದರಿಂದ ಸದಸ್ಯರಾದ ನಮಗೆ ವಾರ್ಡಿನ ಮೂಲಭೂತ ಸವಲತ್ತುಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳಿಗೆ ಸಮಸ್ಯೆಗಳ ಬಗ್ಗೆ ದೂರಿದರೂ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಸರ್ಕಾರ ಕೂಡಲೇ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ನಡೆಸಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಅನುಕೂಲ ಮಾಡಬೇಕಿದೆ.
 ಪಿ.ವಿನಯ್, ಪುರಸಭಾ ಸದಸ್ಯ, 15ನೇ ವಾರ್ಡ್


ಪುರಸಭಾ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ನಡೆಯದಿರುವುದರಿಂದ ಆಡಳಿತ ವ್ಯವಸ್ಥೆಗೆ ತುಕ್ಕು ಹಿಡಿದಿದ್ದು, ಪಟ್ಟಣದ ಮೂಲ ಸವಲತ್ತು ಮತ್ತು ಸಾರ್ವಜನಿಕ ಸಮಸ್ಯೆಗೆ ಸ್ಪಂದಿಸುವವರು ಇಲ್ಲದಂತಾಗಿದೆ. ಚುನಾವಣೆ ಬಂದು ಎರಡು ತಿಂಗಳಿನಿಂದ ಯಾವ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಸರ್ಕಾರ ಕೂಡಲೇ ತ್ವರಿತ ಕ್ರಮ ಕೈಗೊಂಡು ಮೀಸಲಾತಿ ಪ್ರಕಟಿಸಿ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ನಡೆಸಿ ಅಭಿವೃದ್ಧಿ ಕೆಲಸ ನಡೆಯಲು ಮುಂದಾಗಬೇಕಿದೆ.
 ಜಿ. ಪ್ರಕಾಶ್, ಪಟ್ಟಣದ ಹಿರಿಯ ನಾಗರಿಕರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.