ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಗೆ ಗ್ರಹಣ
ಕ.ಪ್ರ.ವಾರ್ತೆ , ಕೆ.ಆರ್. ನಗರ , ಮೇ 15
ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ತಾಲೂಕಿನಾದ್ಯಂತ ಕೈಗೊಂಡಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಗ್ರಹಣ ಹಿಡಿದಿದ್ದು, ಬಹುಪಾಲು ಕಾಮಗಾರಿ ಒಂದು ವರ್ಷದಿಂದ ಸ್ಥಗಿತಗೊಂಡಿದ್ದು, ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದೆ.
ಮೊದಲ ಹಂತದಲ್ಲಿ 12 ಗ್ರಾಮಗಳ ಸಂಪರ್ಕ ರಸ್ತೆಗಳ ಕಾಮಗಾರಿ ಕೈಗೆತ್ತಿಕೊಂಡಿದ್ದು, ಇವುಗಳಲ್ಲಿ ನಾಲ್ಕು ಕಾಮಗಾರಿ ಪೂರ್ಣಗೊಂಡಿದ್ದು, 8 ಕಾಮಗಾರಿಗಳು ಸ್ಥಗಿತಗೊಂಡಿವೆ. ಕೆಲವು ರಸ್ತೆಗಳಿಗೆ ಜಲ್ಲಿ ಹರಡಿ ಹಾಗೆಯೇ ಬಿಟ್ಟಿದ್ದು, ಮೂರು ತಿಂಗಳಿನಿಂದ ಪಾದಚಾರಿಗಳು ಮತ್ತು ವಾಹನ ಚಾಲಕರು ನಿತ್ಯ ಪಡಿಪಾಟಲು ಅನುಭವಿಸಬೇಕಿದೆ.
ರೋಲಿಂಗ್ ಮಾಡಿಲ್ಲ: ಕೆ.ಆರ್. ನಗರ- ಮಳಲಿ ರಸ್ತೆಯಿಂದ ಗೌಡೇನಹಳ್ಳಿ, ಮಾವತ್ತೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಮೂರು ತಿಂಗಳ ಹಿಂದೆ ಜಲ್ಲೆ ಹರಡಿ ಹಾಗೆಯೇ ಬಿಡಲಾಗಿತ್ತು. ನಂತರ ಸಾರ್ವಜನಿಕರ ವಿರೋಧದ ನಂತರ ಜಲ್ಲಿಯ ಮೇಲೆ ಮಣ್ಣು ಹರಡಿ ರೋಲಿಂಗ್ ಮಾಡಿಲ್ಲ. ಇದರಿಂದ ಮತ್ತೆ ಜಲ್ಲಿ ಕಲ್ಲುಗಳು ರಸ್ತೆಯ ತುಂಬಾ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
ಡಾಂಬರ್ ಹಾಕಿಲ್ಲ: ತಾಲೂಕಿನ ಹನಸೋಗೆಯಿಂದ- ಸಣ್ಣೇಗೌಡನಕೊಪ್ಪಲು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ, ರಾಮನಾಥಪುರ- ಕೆ.ಆರ್. ನಗರ ರಾಜ್ಯ ಹೆದ್ದಾರಿಯಿಂದ ತಂದ್ರೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಯನ್ನು ವರ್ಷದ ಹಿಂದೆಯೇ ಆರಂಭಿಸಿದ್ದರೂ, ಈವರೆಗೂ ಪೂರ್ಣಗೊಂಡಿಲ್ಲ. ಜತೆಗೆ ಕೆ.ಆರ್. ನಗರದಿಂದ-ಬೀರನಹಳ್ಳಿ ಗ್ರಾಮದ ಸಂಪರ್ಕ ರಸ್ತೆಗೆ ಎರಡು ತಿಂಗಳ ಹಿಂದೆಯೇ ಮೆಟಲ್ಲಿಂಗ್ ಮಾಡಿ ಡಾಂಬರೀಕರಣ ಮಾಡದೆ ಹಾಗೆಯೇ ಬಿಡಲಾಗಿದೆ.
ಕೇಳೋರು ಇಲ್ಲ: ಎರಡನೇ ಹಂತದಲ್ಲಿ 12 ರಸ್ತೆಗಳನ್ನು ಕೈಗೆತ್ತಿಕೊಂಡಿದ್ದು, 30 ಕಿಮೀ ವ್ಯಾಪ್ತಿಯ ರಸ್ತೆಯಲ್ಲಿ ಎರಡು ಕಾಮಗಾರಿ ಪೂರ್ಣಗೊಂಡಿದ್ದು, ಉಳಿದವು ಆಮೆಗತಿಯಲ್ಲಿ ಸಾಗುತ್ತಿವೆ. ಇದರಿಂದ ಸರ್ಕಾರದ ಅನುದಾನ ಸದ್ಬಳಕೆಯಾಗದೆ ರಸ್ತೆಗಳು ಅಪೂರ್ಣಗೊಂಡು ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಕೇಳುವವರೇ ಇಲ್ಲದಂತಾಗಿದೆ.
ನಿರ್ಲಕ್ಷ್ಯ: ತಾಲೂಕಿನ ಎಲ್ಲಾ ಕಾಮಗಾರಿಗಳನ್ನು ಒಬ್ಬನೇ ಗುತ್ತಿಗೆದಾರ ಪ್ಯಾಕೇಜ್ ಟೆಂಡರ್ ಪಡೆದಿದ್ದು, ತನಗಿಷ್ಟ ಬಂದಂತೆ ನಿರ್ವಹಣೆ ಮಾಡುತ್ತಿದ್ದು, ಟೆಂಡರ್ ನಿಗದಿತ ದಿನಾಂಕ ಮುಗಿದಿದ್ದರೂ ಕಾಮಗಾರಿ ಪೂರ್ಣಗೊಳಿಸಿಲ್ಲ. ಆದರೂ ಈ ಕಾಮಗಾರಿಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯ ಯೋಜನಾ ಉಪ ವಿಭಾಗದವರು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸುತ್ತಿದ್ದು, ಇದರಿಂದ ಅನುದಾನ ಸದ್ಬಳಕೆಯಾಗುತ್ತಿಲ್ಲ.
ನಮ್ಮ ರಸ್ತೆ ನಮ್ಮ ಗ್ರಾಮ ಯೋಜನೆಯಡಿ ತಾಲೂಕಿನಲ್ಲಿ ಕೈಗೊಂಡಿರುವ ಬಹುತೇಕ ರಸ್ತೆ ಕಾಮಗಾರಿಗಳು ವರ್ಷದಿಂದ ಸ್ಥಗಿತಗೊಂಡಿದ್ದರೂ ಚುನಾಯಿತ ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸದೆ ನಿರ್ಲಕ್ಷ್ಯ ವಹಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಕೂಡಲೇ ರಸ್ತೆ ಕಾಮಗಾರಿಗಳ ಬಗ್ಗೆ ಅಸಡ್ಡೆ ತೋರುತ್ತಿರುವ ಅಧಿಕಾರಿಗಳು ಮತ್ತು ಗುತ್ತಿಗೆದಾರನ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಕೂಡಲೇ ಕಾಮಗಾರಿ ಪುನರಾರಂಭಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.
- ಕುಪ್ಪೆ ಮಹದೇವಸ್ವಾಮಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

