ಬಾಲಕಿ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ್ದ ಅನಿಲ್!

ಪತ್ನಿ ಮತ್ತು ಇಬ್ಬರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ತಾನು ಸಹ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಅನಿಲ್‌ಕುಮಾರ್ ಎಂಬಾತನು ಅತ್ಯಾಚಾರ ಪ್ರಕರಣವೊಂದರ ಆರೋಪಿ.
Updated on: 

ಮೈಸೂರು: ಪತ್ನಿ ಮತ್ತು ಇಬ್ಬರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ತಾನು ಸಹ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಅನಿಲ್‌ಕುಮಾರ್ ಎಂಬಾತನು ಅತ್ಯಾಚಾರ ಪ್ರಕರಣವೊಂದರ ಆರೋಪಿ.
ಹೌದು, ಕೆ.ಆರ್. ನಗರ ತಾಲೂಕು ಮಿರ್ಲೆ ನಿವಾಸಿ ಅನಿಲ್‌ಕುಮಾರ್, 2011ರ ಜೂನ್‌ನಲ್ಲಿ ಅದೇ ಗ್ರಾಮದ ಋಷಿ ಎಂಬ 8 ವರ್ಷದ ಬಾಲಕಿಯನ್ನು ಪುಸಲಾಯಿಸಿ ಕಬ್ಬಿನ ಗದ್ದೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದ. ಬಾಲಕಿ ನಾಪತ್ತೆಯಾಗಿರುವ ಬಗ್ಗೆ ಸಾಲಿಗ್ರಾಮ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು 3 ತಿಂಗಳ ನಂತರ ಅನಿಲ್‌ಕುಮಾರ್ ಆರೋಪಿ ಎಂಬುದನ್ನು ಪತ್ತೆ ಹಚ್ಚಿದರು. ಈ ಪ್ರಕರಣದ ತನಿಖೆಗೆ ಬೆಂಗಳೂರಿನ ಪೊಲೀಸರು ಸಹ ಸಾಥ್ ನೀಡಿದ್ದರು.
ಆರೋಪಿ ಅನಿಲ್‌ಕುಮಾರ್‌ನನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. 6 ತಿಂಗಳು ಜೈಲಿನಲ್ಲಿದ್ದ ಅನಿಲ್‌ಕುಮಾರ್‌ನನ್ನು ಆತನ ಪತ್ನಿ ರಮ್ಯಾ ಅವರ ತಂದೆ ಜಾಮೀನು ಮೇಲೆ ಬಿಡುಗಡೆ ಮಾಡಿಸಿದ್ದರು. ತನ್ನ ಅಳಿಯನ ಮೇಲೆ ಬಾಲಕಿ ಕುಟುಂಬದವರು ದಾಳಿ ನಡೆಸಬಹುದೆಂಬ ಕಾರಣಕ್ಕಾಗಿ 10 ತಿಂಗಳ ಹಿಂದೆ ಹಿನಕಲ್ ಬಳಿಯ ಆದಿತ್ಯ ನಗರದಲ್ಲಿ ಬಾಡಿಗೆ ಮನೆಯಲ್ಲಿ ಇರಿಸಿದ್ದರು.

ಪರಸ್ತ್ರೀ ಸಂಗ: ಮೈಸೂರಿಗೆ ಬಂದ ಮೇಲೆ ಜಯಲಕ್ಷ್ಮಿಪುರಂನಲ್ಲಿರುವ ಈಜಿಡೇಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಸೇರಿದ್ದ. ಅಲ್ಲೇ ಕೆಲಸಕ್ಕಿದ್ದ ಪುಷ್ಪಾ ಎಂಬ ವಿವಾಹಿತೆಯ ಪರಿಚಯವಾಗಿತ್ತು. ಇದೇ ಪರಿಚಯ ನಂತರ ದಿನಗಳಲ್ಲಿ ಅನೈತಿಕ ಸಂಬಂಧವಾಗಿ ಬೆಳೆದಿದೆ. ಅಲ್ಲದೆ, ಈ ಇಬ್ಬರು ಆದಿತ್ಯಾನಗರದಲ್ಲೇ ವಾಸವಾಗಿದ್ದರು. ಪತ್ನಿ ರಮ್ಯಾ ಚಿನ್ನಾಭರಣ ಅಡವಿಟ್ಟ ಅನಿಲ್‌ಕುಮಾರ್, ಆ ಹಣದಲ್ಲಿ ಬೈಕ್ ಖರೀದಿಸಿದ್ದ. ಈಜಿಡೇಗೆ ಕೆಲಸಕ್ಕೆ ಹೋಗುತ್ತಿದ್ದಾಗ ಪುಷ್ಪಾಳನ್ನು ಜೊತೆಗೆ ಕರೆದುಕೊಂಡು ಹೋಗುತ್ತಿದ್ದ. ಈ ಬಗ್ಗೆ ರಮ್ಯಾ ಆಕ್ಷೇಪ ವ್ಯಕ್ತಪಡಿಸಿದಾಗ ಜಗಳ ಆಗುತ್ತಿತ್ತು. ಈ ವಿಚಾರವನ್ನು ಪುಷ್ಪಾ ಮನೆಯವರಿಗೆ ರಮ್ಯಾ ಹೇಳಿದರೂ ಯಾವುದೇ ಪ್ರಯೋಜನವಾಗಿಲ್ಲ.

ಮೊದಲೇ ಬಾಲಕಿ ಮೇಲೆ ಅತ್ಯಾಚಾರ:
ಕೊಲೆ, ಜೈಲುವಾಸದಿಂದ ಮನನೊಂದಿದ್ದ ರಮ್ಯಾ, ಪತಿಯ ಅನೈತಿಕ ಸಂಬಂಧದಿಂದ ದಿಕ್ಕು ಕಾಣದಂತಾಯಿತು. ಈ ಎಲ್ಲ ಕಾರಣಗಳಿಂದ ರಮ್ಯಾ ಮಕ್ಕಳಿಗೆ ನೇಣು ಬಿಗಿದು ಕೊಂದು, ತಾನು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿ ಮತ್ತು ಇಬ್ಬರು ಮಕ್ಕಳ ಸಾವಿನಿಂದ ಕಂಗೆಟ್ಟ ಅನಿಲ್‌ಕುಮಾರ್ ಸಹ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಅನಿಲ್‌ಕುಮಾರ್ ಮತ್ತು ಪುಷ್ಪಾ ನಡುವಿನ ಅಕ್ರಮ ಸಂಬಂಧದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ರಮ್ಯಾ ಪತ್ರ ಬರೆದಿಟ್ಟು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ವಿಜಯನಗರ ಠಾಣೆ ಪೊಲೀಸರು, ಪುಷ್ಪಾಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

- ಬಿ. ಶೇಖರ್ ಗೋಪಿನಾಥಂ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com