ಪ್ರಿಯಕರನೊಂದಿಗೆ ಪರಾರಿಯಾದ ಯುವತಿ ಪ್ರತ್ಯಕ್ಷ
ಕ.ಪ್ರ.ವಾರ್ತೆ , ಹುಣಸೂರು , ಮೇ 24
ವಿವಾಹ ನಿಶ್ಚಯವಾಗಿದ್ದ ಯುವತಿಯೊಬ್ಬಳು ಶಾಸ್ತ್ರ ನಡೆಯುತ್ತಿದ್ದ ವೇಳೆ ಮನೆಯಿಂದ ಪ್ರಿಯಕರನೊಂದಿಗೆ ಪರಾರಿಯಾಗಿ, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಮಧ್ಯಾಹ್ನ ಶರಣಾಗಿರುವ ಘಟನೆ ಹನಗೋಡು ಹೋಬಳಿಯ ಅಂಬೇಡ್ಕರ್ ಕಾಲೋನಿಯಲ್ಲಿ ಜರುಗಿದೆ.
ಅಂಬೇಡ್ಕರ್ ಕಾಲೋನಿಯ (ಸೊಪ್ಪಿನಗುತ್ತಿ) ನಿವಾಸಿ ಮಹದೇವ ಉ. ಸ್ವಾಮಿ ಎಂಬವರ ಪುತ್ರಿ ಅಂಜಲಿ ಎಂಬಾಕೆ, ಸ್ವಗ್ರಾಮದ ದಾಸಯ್ಯ ಎಂಬವರ ಪುತ್ರ ರಾಮನ ಜೊತೆಯಲ್ಲಿ ಗುರುವಾರ ರಾತ್ರಿ ಪರಾರಿಯಾಗಿದ್ದರು.
ಅಂಜಲಿಯನ್ನು ತಟ್ಟೆಕೆರೆ ಗ್ರಾಮದ ರಾಮಯ್ಯನ ಪುತ್ರ ಶಿವರಾಜು ಎಂಬವರಿಗೆ ವಿವಾಹ ಮಾಡಲು ನಿಶ್ಚಯಿಸಿ, ಹನಗೋಡು ಸುಮಿತ್ರಮ್ಮ- ನಂಜೇಗೌಡ ಕಲ್ಯಾಣ ಮಂಟಪದಲ್ಲಿ ಮೇ 27ರಂದು ಮದುವೆ ಮಾಡಲು ಎಲ್ಲ ತಯಾರಿ ನಡೆದಿತ್ತು. ಹಿಂದೂ ಸಂಪ್ರದಾಯದಂತೆ ಮದುವೆಗೂ ಮುನ್ನ ಮೇ 23ರ ಗುರುವಾರ ರಾತ್ರಿ ಮನೆಯಲ್ಲಿ ಶಾಸ್ತ್ರವಿತ್ತು. ವಿದ್ಯುತ್ ಹೋದ ಸಮಯ ನೋಡಿ ಶಾಸ್ತ್ರ ನಡೆಯುತ್ತಿದ್ದಾಗ ಅಂಜಲಿ ಪ್ರಿಯಕರ ರಾಮು ಜೊತೆ ಪರಾರಿಯಾಗಿದ್ದರು.
ಈ ಸಂಬಂಧವಾಗಿ ಕುಟುಂಬಸ್ಥರು ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮೇ 24ರ ಶುಕ್ರವಾರ ಮಧ್ಯಾಹ್ನ ಯುವತಿ ಮತ್ತು ಪ್ರಿಯಕರ ಪೊಲೀಸ್ ಠಾಣೆಗೆ ಬಂದು ಶರಣಾದರು. ಯುವತಿ ಅಂಜಲಿ ಮಾತನಾಡಿ, ತಾವಿಬ್ಬರೂ ಬಹಳ ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದೆವು, ಮದುವೆ ಆದರೆ ರಾಮು ಜೊತೆ ಮಾತ್ರ ಎಂದು ಪೊಲೀಸರಿಗೆ ತಿಳಿಸಿದರು.
ಬಳಿಕ ವರ ಶಿವರಾಜು ಕೂಡ ಇಷ್ಟೆಲ್ಲ ಅವಾಂತರವಾದ ಮೇಲೆ ತಮಗೆ ಈ ಮದುವೆ ಇಷ್ಟವಿಲ್ಲ ಎಂದು ಹೇಳಿದರು. ಗ್ರಾಮಸ್ಥರು ನ್ಯಾಯ ಪಂಚಾಯಿತಿ ಮಾಡಿ ಮದುವೆ ಖರ್ಚು- ವೆಚ್ಚದ ಬಗ್ಗೆ ತೀರ್ಮಾನಿಸಿ ಯುವತಿಯನ್ನು ಪ್ರಿಯಕರನೊಂದಿಗೆ ವಿವಾಹವಾಗಲು ಕುಟುಂಬಸ್ಥರು ಮತ್ತು ಗ್ರಾಮಸ್ಥರು ಒಪ್ಪಿಗೆ ಸೂಚಿಸಿದರು.
ಬೈಕ್ನಿಂದ ಬಿದ್ದು ಹಿಂಬದಿ ಸವಾರ ಸಾವು
ಹುಣಸೂರು: ಅಡ್ಡ ಬಂದ ಹಸುವಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬೈಕ್ನಿಂದ ಆಯತಪ್ಪಿ ಬಿದ್ದ ಪರಿಣಾಮ ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಹುಣಸೂರು- ನಾಗರಹೊಳೆ ಮುಖ್ಯ ರಸ್ತೆಯ ಆಜಾದ್ ನಗರದ ಬಳಿ ಶುಕ್ರವಾರ ಸಂಜೆ ನಡೆದಿದೆ. ತಾಲೂಕಿನ ಕೆಬ್ಬೇಕೊಪ್ಪಲು ಗ್ರಾಮದ ನಿವಾಸಿ ಲೇ. ಹೊನ್ನೇಗೌಡ ಎಂಬವರ ಪುತ್ರ ಬಸವರಾಜೇಗೌಡ (40) ಮೃತಪಟ್ಟವರು. ಇವರಿಗೆ ಪತ್ನಿ, ನಾಲ್ವರು ಪುತ್ರಿಯರಿದ್ದಾರೆ. ಬಸವರಾಜೇಗೌಡ ಮತ್ತು ಪುಟ್ಟರಾಜು ಎಂಬವರು ದ್ವಿಚಕ್ರ ವಾಹನದಲ್ಲಿ ಎಚ್.ಡಿ. ಕೋಟೆಯಿಂದ ಹುಣಸೂರು ಕಡೆಗೆ ಶುಕ್ರವಾರ ಸಂಜೆ ಬರುತ್ತಿದ್ದ ವೇಳೆ ಅಜಾದ್ ನಗರ ಬಳಿ ಹಸು ಅಡ್ಡ ಬಂದಿತು. ಹಸುವಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಆಯತಪ್ಪಿ ಬಿದ್ದ ಪರಿಣಾಮ ಹಿಂಬದಿ ಸವಾರ ಬಸವರಾಜೇಗೌಡ ಸ್ಥಳದಲ್ಲೆ ಮೃತಪಟ್ಟರೆ, ವಾಹನ ಸವಾರ ಪುಟ್ಟರಾಜು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್ಐ ಅರುಣ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

