ಮೈಸೂರು

ಭ್ರಷ್ಟಾಚಾರ ಸಾಬೀತಾದರೆ ರಾಜಕೀಯ ನಿವೃತ್ತಿ

Published On :

ಕ.ಪ್ರ.ವಾರ್ತೆ   ಪಿರಿಯಾಪಟ್ಟಣ   ಮೇ 25
ತಮ್ಮ ಮೂವತ್ತು ವರ್ಷಗಳ ರಾಜಕೀಯ ಜೀವನದಲ್ಲಿ ಎಂದೂ ಭ್ರಷ್ಟಾಚಾರ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಪಟ್ಟಣದಲ್ಲಿ ಶನಿವಾರ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ತಮ್ಮ ರಾಜಕೀಯ ಜೀವನದಲ್ಲಿ ಭ್ರಷ್ಟಾಚಾರ ನಡೆದಿರುವುದನ್ನು ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಸವಾಲೆಸೆದರು.
ಜನಪರ ಕೆಲಸ ಮಾಡುವವರಿಗೆ ಜನ ಆಶಿರ್ವದಿಸುತ್ತಾರೆ. ಜೆಡಿಎಸ್ ಆಡಳಿತ ನಡೆಸಲು ಅರ್ಹರಲ್ಲ ಎಂದು ಜನ ತೀರ್ಮಾನಿಸಿದ್ದಾರೆ. ಆದರೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಏಕೆ ಅಳುತ್ತಿದ್ದಾರೆ ಎಂದು ಗೊತ್ತಾಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ತಾವು ಎಲ್ಲಿಯೂ ಪ್ಯಾಕೆಟ್ ಸಾರಾಯಿಯನ್ನು ವಾಪಸ್ ತರುವುದಾಗಿ ಹೇಳಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಹಿಂದೆ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಸರ್ಕಾರ ಇದ್ದಾಗ ಪ್ಯಾಕೆಟ್ ಮದ್ಯವನ್ನು ರದ್ದು ಮಾಡಬೇಡಿ ಎಂದಿದ್ದೆ. ಕಾರಣ ಕಡಿಮೆ ಬೆಲೆಗೆ ದೊರೆಯುತ್ತಿರುವ ಮದ್ಯ ದೊರಕದೆ ಹೋದಲ್ಲಿ ಜನರು ಹೆಚ್ಚು ಬೆಲೆಯ ಮದ್ಯ ಕುಡಿಯುವ ಮೂಲಕ ಆರ್ಥಿಕವಾಗಿ ಮತ್ತಷ್ಟು ಹಿಂದುಳಿಯುತ್ತಾರೆ. ಸಭೆಯೊಂದರಲ್ಲಿ ಕಡಿಮೆ ಬೆಲೆಯಲ್ಲಿ ಮದ್ಯ ತಯಾರಿ ಮಾಡಬಹುದೇ ಎಂಬ ಚಿಂತನೆ ಮಾಡಿದ್ದೆ ಅಷ್ಟೆ ಎಂದು ಸ್ಪಷ್ಟಪಡಿಸಿದರು.
ಇನ್ನು ಗೋಹತ್ಯೆ ನಿಷೇಧ ಅಲ್ಪಸಂಖ್ಯಾತರ ವಿರುದ್ಧವಾಗಿ ತಂದದ್ದಾಗಿದ್ದು, ಬಿಜೆಪಿ ಮಾಡಿದ ಗೋಹತ್ಯೆ ತಿದ್ದುಪಡಿಯನ್ನು ರದ್ದುಪಡಿಸುವುದಾಗಿ ತಿಳಿಸಿದರು. ಇನ್ನು ಸರ್ಕಾರದ ಯಾವುದೇ ಇಲಾಖೆಯಿಂದಲೂ ಜನಸಾಮಾನ್ಯರಿಗೆ ತೊಂದರೆ ಆಗದ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಹಾಗೂ ಭ್ರಷ್ಟಾಚಾರರಹಿತ ಆಡಳಿತ ನೀಡುವುದಾಗಿ ಭರವಸೆ ನೀಡಿದರು.
ಕೇಂದ್ರ ಹಾಗೂ ರಾಜ್ಯದಲ್ಲಿ ತಮ್ಮದೇ ಸರ್ಕಾರವಿದ್ದು, ಸಂಸದ ಎಚ್. ವಿಶ್ವನಾಥ್ ಅವರೊಂದಿಗೆ ಕೇಂದ್ರ ಸರ್ಕಾರದ ಜೊತೆ ಚರ್ಚಿಸಿ ತಂಬಾಕಿಗೆ ಉತ್ತಮ ಬೆಲೆ ದೊರಕಿಸಿಕೊಡುವುದಾಗಿ ಹೇಳಿದರು.
ಜೆಡಿಎಸ್ ಪಕ್ಷದ ಅಪ್ಪ- ಮಕ್ಕಳು ಕನಿಷ್ಠ ತಿಳಿವಳಿಕೆ ಇಲ್ಲದವರಾಗಿದ್ದು, ಇಲ್ಲ- ಸಲ್ಲದ ಅಪಪ್ರಚಾರಕ್ಕೆ ಸೀಮಿತವಾಗಿದ್ದಾರೆ. ಜೆಡಿಎಸ್ ಸುಳ್ಳು ಹೇಳುವ ಸಿದ್ಧಾಂತವಾಗಿದ್ದು, ಸುಳ್ಳು ಹೇಳಿಕೊಂಡು ಮತ್ತೆ ಅಧಿಕಾರ ಹಿಡಿಯುವ ಕನಸು ಕಾಣುತ್ತಿರುವ ಅಪ್ಪ ಮಕ್ಕಳದು ಭ್ರಮೆ ಎಂದು  ಅವರು ಟೀಕಿಸಿದರು.
ರಾಜ್ಯದಲ್ಲಿಯೇ ಜೆಡಿಎಸ್ನ ಜನ ತಿರಸ್ಕರಿಸಿದ್ದಾರೆ. ಇನ್ನು ಪಿರಿಯಾಪಟ್ಟಣ ಕ್ಷೇತ್ರದ ಜನತೆಯೂ ಸಹ ಜೆಡಿಎಸ್ಅನ್ನು ತಿರಸ್ಕರಿಸುವುದರಲ್ಲಿ ಅನುಮಾನವಿಲ್ಲ, ಪಕ್ಷದ ಅಭ್ಯರ್ಥಿ ಕೆ. ವೆಂಕಟೇಶ್ ಗೆಲವು ಖಚಿತವಾಗಿದ್ದು, ಮತದಾರರು ಅವರನ್ನು ಹೆಚ್ಚಿನ ಬಹುಮತದಿಂದ ಗೆಲ್ಲಿಸಿಕೊಡುವಂತೆ ಮನವಿ ಮಾಡಿದರು.
ಪಕ್ಷದ ಅಭ್ಯರ್ಥಿ ಕೆ. ವೆಂಕಟೇಶ್ ಮಾತನಾಡಿ, ಜಿಲ್ಲೆಯ ಡಿ. ದೇವರಾಜ್ಅರಸ್ ಅವರ ನಂತರ 33 ವರ್ಷಗಳ ಬಳಿಕ ಜಿಲ್ಲೆಗೆ ಮತ್ತೊಮ್ಮೆ ಮುಖ್ಯಮಂತ್ರಿ ಸ್ಥಾನ ಲಭಿಸಿದ್ದು, ತಮ್ಮನ್ನು ಗೆಲ್ಲಿಸುವ ಮೂಲಕ ಸಿದ್ದರಾಮಯ್ಯ ಅವರಿಗೆ ಶಕ್ತಿ ತುಂಬಬೇಕೆಂದು ಮನವಿ ಮಾಡಿದರು.
ಕೇಂದ್ರ ಸಚಿವರಾದ ಕೆ.ಎಚ್. ಮುನಿಯಪ್ಪ, ಸಂಸದ ಹಾಗೂ ಎಐಸಿಸಿಯ ರಾಜ್ಯ ಉಸ್ತುವಾರಿ ಹನುಮಂತರಾವ್, ಸಂಸದ ಎಚ್.ವಿಶ್ವನಾಥ್, ಸಚಿವರಾದ ಆರ್.ವಿ. ದೇಶಪಾಂಡೆ, ಮಹದೇವ್ಪ್ರಸಾದ್, ಸತೀಶ್ ಜಾರಕಿಹೊಳಿ, ಮಾಜಿ ಸಚಿವೆ ಮೋಟಮ್ಮ, ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ, ಛಲವಾದಿ ಮಹಾ ಸಭಾದ ಸಂಸ್ಥಾಪಕ ಡಾ.ಕೆ. ಶಿವರಾಂ, ಮಾಜಿ ಶಾಸಕ ವಿ. ಎಸ್. ಉಗ್ರಪ್ಪ ಮಾತನಾಡಿದರು.
ಸಚಿವರಾದ ಎಚ್.ಸಿ. ಮಹದೇವಪ್ಪ, ಶಿವರಾಜ್ ತಂಗಡಗಿ, ರಾಮಲಿಂಗರೆಡ್ಡಿ, ಮಾಜಿ ಸಚಿವೆ ರಾಣಿಸತೀಶ್, ಶಾಸಕರಾದ ಮಂಜುನಾಥ್, ಎಸ್.ಟಿ. ಸೋಮಶೇಖರ್, ವಾಸು, ನರೇಂದ್ರಸ್ವಾಮಿ, ಮಾಜಿ ಶಾಸಕರಾದ ಸತ್ಯನಾರಾಯಣ, ಚಿಕ್ಕಣ್ಣ, ಎಚ್.ಸಿ. ಬಸವರಾಜ್, ಪಕ್ಷದ ಜಿಲ್ಲಾಧ್ಯಕ್ಷ ಧರ್ಮಸೇನ, ತಾ. ಅಧ್ಯಕ್ಷ ಮಾನ್ಸೂನ್ಚಂದ್ರು, ಕುಂಜಪ್ಪ ಕಾರ್ನಾಡ್ ಯೂತ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾ.ಬಿ.ಜೆ. ವಿಜಯ್ಕುಮಾರ್, ಮೈಸೂರು ಮಹಾನಗರ ಪಾಲಿಕೆ ಸದಸ್ಯ ಪಿ. ಪ್ರಶಾಂತ್ಗೌಡ , ಮಾಜಿ ಶಾಸಕ ಎಚ್.ಸಿ. ಬಸವರಾಜು, ನಾರಾಯಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.