ಮೈಸೂರು

ಭೂ ಒತ್ತುವರಿ ತಡೆಗೆ ಕ್ರಮ ಕೈಗೊಳ್ಳಿ

Published On :

ಕ.ಪ್ರ.ವಾರ್ತೆ ಮೈಸೂರು ಮೇ 26
ರಾಜ್ಯದಲ್ಲಿ ಭೂಗಳ್ಳರ ಕಾಟ ಮಿತಿಮೀರಿದ್ದು, ಲಕ್ಷಾಂತರ ಎಕರೆ ಭೂಮಿ ಒತ್ತುವರಿಯಾಗಿದೆ. ಇದನ್ನು ತಡೆಯಲು ಎ.ಟಿ. ರಾಮಸ್ವಾಮಿ, ಬಾಲಸುಬ್ರಹ್ಮಣ್ಯ, ಜಿ.ಕೆ. ರಾವ್, ತ.ಮ. ವಿಜಯ ಭಾಸ್ಕರ್ ಸಿದ್ಧಪಡಿಸಿರುವ ವರದಿ ಜಾರಿಗೆ ತರುವಂತೆ ಕನ್ನಡ ಚಳವಳಿ ಕೇಂದ್ರ ಸಮಿತಿ ಅಧ್ಯಕ್ಷ ವಾಟಾಳ್ ನಾಗರಾಜ್ ಮನವಿ ಮಾಡಿದರು.
ಕನ್ನಡ ಚಳವಳಿ ಕೇಂದ್ರ ಸಮಿತಿಯು ಭಾನುವಾರ ಕಲಾಮಂದಿರದ ಮನೆಯಂಗಳದಲ್ಲಿ ಏರ್ಪಡಿಸಿದ್ದ ಬಸವ ಜಯಂತಿ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಈ ವರದಿಯನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ಜಾರಿಗೆ ತಂದಲ್ಲಿ ಭೂಗಳ್ಳತನಕ್ಕೆ ತಡೆವೊಡ್ಡಿದಂತಾಗುತ್ತದೆ. ಈ ಕಾರ್ಯಕ್ಕೆ ಕಂದಾಯ ಸಚಿವರಾದ ವಿ. ಶ್ರೀನಿವಾಸಪ್ರಸಾದ್ ಯಾರಿಗೂ ಹೆದರುವ ಅವಶ್ಯಕತೆ ಇಲ್ಲ ಎಂದು ಸಲಹೆ ನೀಡಿದರು.
ಯಾವುದೇ ಸರ್ಕಾರ ಹೊಸದಾಗಿ ಅಸ್ತಿತ್ವಕ್ಕೆ ಬಂದ ಮೇಲೆ ಆರು ತಿಂಗಳ ಕಾಲ ಯಾರೂ ಟೀಕೆ, ಟಿಪ್ಪಣಿ ಮಾಡಬಾರದು. ನಂತರ ಅದರ ಕಾರ್ಯವೈಖರಿ ಗಮನಿಸಿ ತಿದ್ದಬೇಕು. ಈಗಿನ ಕಾಂಗ್ರೆಸ್ ಸರ್ಕಾರ ಹೊಸದಾಗಿ ಬಜೆಟ್ ಮಂಡಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಜತೆಗೆ ಹಿಂದಿನ ಬಿಜೆಪಿ ಸರ್ಕಾರದ ಉತ್ತಮ ಕಾರ್ಯಕ್ರಮಗಳನ್ನು ಸೇರಿಸಿ ಜನಮೆಚ್ಚುಗೆ ಬಜೆಟ್ ಮಂಡಿಸುವುದು ಸಾಧುವಾಗಿದೆ ಎಂದು ಅಭಿಪ್ರಾಯಪಟ್ಟರು.
ಬಸವಣ್ಣನವರ ಪ್ರತಿಮೆ ಸ್ಥಾಪನೆಯಾಗಲಿ: ಕಾಯಕಯೋಗಿ ಬಸವೇಶ್ವರರು ಈ ನಾಡಿಗೆ ನೀಡಿರುವ ವಚನ ಸಾಹಿತ್ಯವನ್ನು ವಿಶ್ವಾದ್ಯಂತ ಪ್ರಚಾರಪಡಿಸಬೇಕು.
ಅವರ ಪ್ರತಿಮೆಯನ್ನು ದೆಹಲಿಯಲ್ಲಿ ಸ್ಥಾಪಿಸಲು ಲೋಕಸಭಾ, ರಾಜ್ಯಸಭಾ ಸದಸ್ಯರು ಪಕ್ಷಾತೀತವಾಗಿ ಪ್ರಯತ್ನಿಸಬೇಕು. ಅವರ ಹೆಸರಿನಲ್ಲಿ ವಿಶ್ವಮಟ್ಟದಲ್ಲಿ ಪ್ರಶಸ್ತಿ ಇಟ್ಟು 5 ಕೋಟಿ ನಗದು ಮೀಸಲಿಡಬೇಕು. ಇದರಿಂದ ಪ್ರಶಸ್ತಿಯ ಘನತೆಯೂ ಹೆಚ್ಚುತ್ತದೆ ಎಂದರು.
ರಾಜ್ಯ ರಾಜಕೀಯದಲ್ಲಿ ತಮ್ಮದೆ ಕೊಡುಗೆ ನೀಡಿದವರಲ್ಲಿ ಅವಿಭಜಿತ ಮೈಸೂರು ಜಿಲ್ಲೆಯ ಯಶೋದರಾ ದಾಸಪ್ಪ, ಅಜೀಜ್ ಸೇಠ್, ಎಚ್.ಎಂ. ಚೆನ್ನಬಸಪ್ಪ, ಬಿ.ರಾಚಯ್ಯ, ಅಬ್ದುಲ್ ನಜೀರ್ ಸಾಬ್, ಎಂ. ರಾಜಶೇಖರಮೂರ್ತಿ, ಎಂ.ಎಸ್. ಗುರುಪಾದಸ್ವಾಮಿ ಅಪರಂಜಿಗಳು. ಅಂತಹವರ ಸಾಲಿಗೆ ಕಂದಾಯ ಸಚಿವ ವಿ. ಶ್ರೀನಿವಾಸಪ್ರಸಾದ್ ಅವರೂ ಸೇರುತ್ತಾರೆ. ಇವರು ಸಜ್ಜನ ರಾಜಕಾರಣಿಯಾಗಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಸಜ್ಜನ ರಾಜಕಾರಣಿಗಳು ಹುಡುಕಿದರೂ ಸಿಗಲಿಲ್ಲ ಎಂದು ತಿಳಿಸಿದರು.
ಇದೇ ವೇಳೆ ಕಂದಾಯ ಸಚಿವ ವಿ. ಶ್ರೀನಿವಾಸ ಪ್ರಸಾದ್ ಹಾಗೂ ಚಾಮರಾಜ ಕ್ಷೇತ್ರದ ಶಾಸಕ ವಾಸು ಅವರನ್ನು ಸನ್ಮಾನಿಸಲಾಯಿತು.
ಸಮಾಜ ಸೇವಕ ಎಂ.ಕೆ. ಪೋತರಾಜ್, ವಿಪ್ರ ಮುಖಂಡ ಕೆ. ರಘುರಾಂ, ಕಾಂಗ್ರೆಸ್ ಮುಖಂಡ ಎಲ್. ರೇವಣ ಸಿದ್ದಯ್ಯ, ಪತ್ರಿಕೋದ್ಯಮಿ ರಾಜಶೇಖರ ಕೋಟಿ, ಕಸಾಪ ಜಿಲ್ಲಾಧ್ಯಕ್ಷ ಎಂ. ಚಂದ್ರಶೇಖರ್, ಕನ್ನಡ ಚಳವಳಿಗಾರ ಮೂಗೂರು ನಂಜುಂಡಸ್ವಾಮಿ, ವೈ.ಡಿ. ರಾಜಣ್ಣ, ಕೆ.ಎಸ್. ಶಿವರಾಂ ಮೊದಲಾದವರು ಇದ್ದರು.

ಬುದ್ಧ, ಬಸವ, ಅಂಬೇಡ್ಕರ್ ಪ್ರಾರ್ಥಿಸಿ ಮೇಲೇಳುತ್ತೇನೆ
ಮೈಸೂರು: ಜಾತಿ ಪದ್ಧತಿ ವಿರುದ್ಧ ಹೋರಾಡಿದ ಬುದ್ಧ, ಬಸವ, ಅಂಬೇಡ್ಕರ್ ಅವರನ್ನು ಪ್ರಾರ್ಥಿಸಿಯೇ ಪ್ರತಿದಿನ ಮೇಲೇಳುತ್ತೇನೆ ಎಂದು ಕಂದಾಯ ಸಚಿವ ವಿ. ಶ್ರೀನಿವಾಸಪ್ರಸಾದ್ ಹೇಳಿದರು.
ಕ್ರಿಸ್ತ ಪೂರ್ವದಲ್ಲಿಯೇ ಬುದ್ಧ ಜಾತಿರಹಿತ ಸಂಘಟನೆ ಮಾಡಿದರು. 12ನೇ ಶತಮಾನದಲ್ಲಿ ಕ್ರಾಂತಿಕಾರಿ ಬಸವಣ್ಣನವರು ಕೆಳಸ್ತರದವರ ಬಗ್ಗೆ ಚಿಂತಿಸಿದರು. ಇವರಿಬ್ಬರ ಆಲೋಚನೆಗಳನ್ನು ಕ್ರೋಡೀಕರಿಸಿದ ಡಾ.ಬಿ.ಆರ್. ಅಂಬೇಡ್ಕರ್ ಅವರು ಭಾರತ ಸಂವಿಧಾನದಲ್ಲಿ ಎರಕ ಹೊಯ್ದರು. ಎಲ್ಲಾ ಕ್ಷೇತ್ರಗಳಲ್ಲಿಯೂ ಕಾಯಕವೇ ಕೈಲಾಸ ಎಂಬುದನ್ನು ತಿಳಿಸಿಕೊಟ್ಟರು. ಇಂತಹ ಹಿನ್ನೆಲೆಯಿಂದ ಬಂದ ವೀರಶೈವರು ಅರ್ಥ ಮಾಡಿಕೊಂಡು ಮುನ್ನಡೆಯಬೇಕು ಎಂದು ಅಭಿಪ್ರಾಯಪಟ್ಟರು.
ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿ ಪದವಿ ಅಲಂಕರಿಸಿದ್ದ ಬಸವಣ್ಣನವರು ರಾಜ್ಯ ಖಜಾನೆಯಲ್ಲಿದ್ದ ಹಣವನ್ನು ಬಡವರ, ಶೋಷಿತರ ಏಳಿಗೆಗಾಗಿ ವಿನಿಯೋಗಿಸುತ್ತಿದ್ದರು. ಈಗಿನ ರಾಜಕಾರಣಿಗಳು ರಾಜ್ಯದ ಬೊಕ್ಕಸವನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.