ಮೈಸೂರು

ಓದುಗ ವರ್ಗ ಸೃಷ್ಟಿಸುವ ಅಗತ್ಯವಿದೆ

Published On :

ಕ.ಪ್ರ.ವಾರ್ತೆ ಮೈಸೂರು ಮೇ 26
ಕನ್ನಡ ಸಾಹಿತ್ಯ ಲೋಕಕ್ಕೆ ಹೊಸ ಕೃತಿಗಳು ಬರುತ್ತಿವೆ. ಆದರೆ, ಹೊಸ ಓದುಗ ವರ್ಗ ಸೃಷ್ಟಿಯಾಗುತ್ತಿಲ್ಲ.
ಆಧುನಿಕ ಕನ್ನಡ ಸಾಹಿತ್ಯಕ್ಕೆ ಓದುಗ ವರ್ಗವನ್ನು ಸೃಷ್ಟಿಸುವ ಅಗತ್ಯವಿದೆ. ಕನ್ನಡಕ್ಕೆ ಪುಸ್ತಕ ಓದುವ ಸೈನಿಕರು ಬೇಕಾಗಿದ್ದಾರೆ ಎಂದು ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ.ಎಂ.ಜಿ. ಕೃಷ್ಣನ್ ಹೇಳಿದರು.
ಮೈಸೂರಿನ ಯೂನಿವರ್ಸಲ್ ಅಕಾಡೆಮಿ ಹಾಗೂ ರಾಜ್ಯ ಮುಕ್ತ ವಿವಿ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಸಂಯುಕ್ತವಾಗಿ ಭಾನುವಾರ ಮುಕ್ತಗಂಗೋತ್ರಿ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಕಾಶ್ ಜಿ.ಎಸ್. ಹಳ್ಳಿ ಅವರ ರೆಕ್ಕೆ ಬಡಿಯುವ ಹಕ್ಕಿ ಕವನ ಸಂಕಲನದ ವಿಚಾರಸಂಕಿರಣದಲ್ಲಿ ಡಾ.ಯಲ್ಲಪ್ಪ ಕೆ.ಕೆ. ಪುರ ಅವರ ನೂರೊಂದು ಅದ್ಭುತಗಳು- ಮಕ್ಕಳ ಕಥೆ ಪುಸ್ತಕವನ್ನು ಅವರು ಬಿಡುಗಡೆಗೊಳಿಸಿ ಮಾತನಾಡಿದರು.
ಹಿಂದೆ ಸಾಕ್ಷರತೆ ಪ್ರಮಾಣಕ್ಕೆ ಅನುಗುಣವಾಗಿ ಓದುವ ವರ್ಗವಿತ್ತು. ಶಿಕ್ಷಣ ಪಡೆದವರಿಗೆ ಓದುವ ಹವ್ಯಾಸವಿತ್ತು. ಆದರೆ, ಈಗಿನ ಎಂಜಿನಯರಿಂಗ್, ವೈದ್ಯಕೀಯ ಇಂತಹ ವೃತ್ತಿಪರ ಕೋರ್ಸ್‌ಗಳ ಬಗ್ಗೆ ವ್ಯಾಮೋಹ ಹೆಚ್ಚಾಗಿ, ಸಾಹಿತ್ಯ ಓದುಗರು ಕಡಿಮೆ ಆಗಿದ್ದಾರೆ. ಪೋಷಕರು ವಿಚಿತ್ರ ಭ್ರಮೆಯಲ್ಲಿದ್ದು, ತಮ್ಮ ಮಕ್ಕಳಿಗೆ ಸಾಹಿತ್ಯ ಓದುವ ಅಭ್ಯಾಸ ಮಾಡಲು ಪ್ರೋತ್ಸಾಹಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಮಾಜವನ್ನು ಸೂಕ್ಷ್ಮವಾಗಿ ಅವಲೋಕಿಸಿ, ಸದಾ ಚರ್ಚೆಯಲ್ಲಿ ತೊಡಗುತ್ತಿದ್ದ ವಿಶ್ವವಿದ್ಯಾಲಯಗಳ ತತ್ವಶಾಸ್ತ್ರ ವಿಭಾಗ ಈಗ ಕೆಲಸ ಮಾಡುತ್ತಿಲ್ಲ. ಹಲವು ವಿವಿಗಳು ತತ್ವಶಾಸ್ತ್ರ ವಿಭಾಗವನ್ನು ಮುಚ್ಚಿವೆ. ಆಧುನಿಕ ಜಗತ್ತಿನಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿ ಅನುಕರಣೆ ಎಲ್ಲೆ ಮೀರಿದೆ. ಕಲೆ, ಸಾಹಿತ್ಯ, ಸಂಗೀತ, ನೃತ್ಯದ ಸಂತೋಷದ ಕ್ಷಣಗಳು ಕಳೆದುಕೊಳ್ಳುತ್ತಿದ್ದೇವೆ ಎಂದರು.
ಮಕ್ಕಳಿಗೆ ತಿಳಿಸಬೇಕು: ನೂರೊಂದು ಅದ್ಭುತಗಳು ಕೃತಿ ಕುರಿತು ಮಾತನಾಡಿದ ಮೈಸೂರು ವಿವಿ ಪ್ರಸಾರಾಂಗ ನಿರ್ದೇಶಕ ಪ್ರೊ.ಸಿ. ನಾಗಣ್ಣ, ಕನ್ನಡದಲ್ಲಿ ಮಕ್ಕಳ ಸಾಹಿತ್ಯ ಕೃತಿಗಳು ತೀರಾ ವಿರಳವಾಗಿವೆ. ಇತರೆ ಭಾಷೆಗಳಲ್ಲಿ ಸಾಕಷ್ಟು ಮಕ್ಕಳ ಕೃತಿಗಳು ಬರುತ್ತಿವೆ. ವರ್ತಮಾನ ಜಗತ್ತಿನಲ್ಲಿ ಮಾಯವಾಗಿರುವ ಲೋಕನೀತಿಯನ್ನು ಸಾಹಿತ್ಯದ ಮೂಲಕ ಮಕ್ಕಳಿಗೆ ತಿಳಿಸಬೇಕಿದೆ ಎಂದು ಹೇಳಿದರು.
ಜನರನ್ನು ಕೈಹಿಡಿದು ನಡೆಸಬೇಕಾದ ಸ್ಥಾನದಲ್ಲಿರುವ ಜನಪ್ರತಿನಿಧಿಗಳೇ ನೀತಿ, ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಇದರಿಂದ ಸಮಾಜದಲ್ಲಿ ಕೋಲಾಹಲ ಸೃಷ್ಟಿಯಾಗುತ್ತಿದೆ. ಇದನ್ನು ತಡೆಯುವಲ್ಲಿ ಸಾಹಿತಿಗಳಿಗೆ ಜವಾಬ್ದಾರಿ ಹೆಚ್ಚಾಗಿದೆ. ಕವಲು ದಾರಿಯಲ್ಲಿ ನಿಂತಿರುವ ಜನರಿಗೆ ದಾರಿ ತೋರಬೇಕಿದೆ ಎಂದು ಅಭಿಪ್ರಾಯಪಟ್ಟರು.
ಚಲನಚಿತ್ರ ನಿರ್ದೇಶಕ ರತ್ನಜ ಅವರು ರೆಕ್ಕೆ ಬಡಿಯುವ ಹಕ್ಕಿ ಕವನ ಸಂಕಲನ ಕುರಿತು ಮಾತನಾಡಿದರು. ರಾಜ್ಯ ಮುಕ್ತ ವಿವಿ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷ ಪ್ರೊ..ಎಲ್. ರಾಜಶೇಖರಯ್ಯ, ಕವಿ ಪ್ರಕಾಶ್ ಜಿ.ಎಸ್. ಹಳ್ಳಿ ಇದ್ದರು.
ನಂತರ ರೆಕ್ಕೆ ಬಡಿಯುವ ಹಕ್ಕಿ ಕುರಿತು ಸಂವಾದಗೋಷ್ಠಿ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.