ಸಮಗ್ರ ಬೇಸಾಯ ಪದ್ಧತಿ ಅಳವಡಿಸಿಕೊಳ್ಳಿ
ಕ.ಪ್ರ.ವಾರ್ತೆ ಮೈಸೂರು ಮೇ 28
ಸಮಗ್ರ ಬೇಸಾಯ ಪದ್ಧತಿಯನ್ನು ಉನ್ನತೀಕರಿಸಲು ತೋಟಗಾರಿಕೆ ಇಲಾಖೆ ಹಾಗೂ ಕೃಷಿ ವಿವಿ ಶ್ರಮವಹಿಸುತ್ತಿದ್ದು ರೈತರೂ ಬುದ್ಧಿವಂತಿಕೆ ಉಪಯೋಗಿಸಿ ಈ ಬೇಸಾಯ ಪದ್ಧತಿ ಅಳವಡಿಸಿಕೊಂಡು ಉಪಯೋಗ ಪಡೆಯುವಂತೆ ತೋಟಗಾರಿಕೆ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಬಿ.ಜಿ. ಪ್ರಕಾಶ್ ಹೇಳಿದರು.
ಜಿಪಂ, ತೋಟಗಾರಿಕೆ ಇಲಾಖೆ, ಆಕಾಶವಾಣಿ ಹಾಗೂ ವಾರ್ತಾ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಸೋಮವಾರ ವಾರ್ತಾಭವನದಲ್ಲಿ ಏರ್ಪಡಿಸಿದ್ದ ತೋಟ- ನೋಟ ತೋಟಗಾರಿಕೆ ಬೆಳೆಗಳ ಸಮಗ್ರ ಬೇಸಾಯ ವಿಧಾನ ಕುರಿತ ಬಾನುಲಿ ಸರಣಿ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ತೋಟಗಾರಿಕೆ ವಲಯವು ರಾಜ್ಯದ ಜಿಡಿಪಿಗೆ ಶೇ.17 ರಷ್ಟು ಕೊಡುಗೆ ನೀಡುತ್ತಿದೆ. ಶೇ.40 ರಷ್ಟು ಮಾತ್ರ ಅಭಿವೃದ್ಧಿ ಸಾಧಿಸಿದೆ. ರಾಜ್ಯಾದ್ಯಂತ 18 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೇಸಾಯ ಮಾಡುತ್ತಿದ್ದು, 136 ಲಕ್ಷ ಟನ್ ಬೆಳೆ ಬೆಳೆಯಲಾಗುತ್ತಿದೆ. ಈ ಪೈಕಿ ಮೈಸೂರಿನಲ್ಲಿ 41 ಸಾವಿರ ಹೆಕ್ಟರ್ ಪ್ರದೇಶದಲ್ಲಿ 3.75 ಲಕ್ಷ ಟನ್ ಬೆಳೆ ಬೆಳೆದು 32 ಸಾವಿರ ಲಕ್ಷ ಆದಾಯ ಗಳಿಸಿದ್ದೇವೆ. ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಮೈಸೂರು ಹಿಂದೆ ಇದೆ ಎಂದು ಹೇಳಿದರು.
ಅದೇ ಬಿಜಾಪುರದಲ್ಲಿ 35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ 6 ಲಕ್ಷ ಟನ್ ಬೆಳೆ ಬೆಳೆದು 63 ಸಾವಿರ ಲಕ್ಷ ಆದಾಯ ಗಳಿಸಲಾಗಿದೆ. ಹಾಗೆ ರಾಯಚೂರಿನಲ್ಲಿ 18 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ 3.85 ಲಕ್ಷ ಟನ್ ಬೆಳೆ ಬೆಳೆದು 50 ಸಾವಿರ ಲಕ್ಷ ಆದಾಯ ಗಳಿಸಲಾಗಿದೆ. ಮೈಸೂರು ಹಾಗೂ ಬಿಜಾಪುರ, ರಾಯಚೂರು ನಡುವಿನ ವ್ಯತ್ಯಾಸಕ್ಕೆ ಆಯಾ ಭಾಗದ ರೈತರ ಬುದ್ಧಿವಂತಿಕೆಯೇ ಕಾರಣ. ಅಲ್ಲಿನ ರೈತರು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ದಾಳಿಂಬೆ, ದ್ರಾಕ್ಷಿ ಬೆಳೆಯುತ್ತಿದ್ದಾರೆ. ಮೈಸೂರಿನ ರೈತರು ಬಾಳೆ, ತೆಂಗು, ಮಾವು ಬೆಳೆಯುತ್ತಿದ್ದಾರೆ. ಒಂದು ಎಕರೆಯಲ್ಲಿ ದಾಳಿಂಬೆ, ದ್ರಾಕ್ಷಿ, ಸೀಬೆ, ತೆಂಗು, ಟೊಮೆಟೋ ಬೆಳೆಯುವುದನ್ನು ರೂಢಿಸಿಕೊಳ್ಳಬೇಕು. ಒಂದು ಬೆಳೆ ಕೈಕೊಟ್ಟರು ಮತ್ತೊಂದು ನಮ್ಮ ಕೈ ಹಿಡಿಯುತ್ತದೆ ಎಂದರು.
ಅನುಕೂಲಗಳೇ ಹೆಚ್ಚು: ಸಮಗ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡರೆ ಅನುಕೂಲಗಳೇ ಹೆಚ್ಚಿವೆ. ನಿರ್ದಿಷ್ಟ ಪ್ರದೇಶದಲ್ಲಿ ಹೆಚ್ಚು ಇಳುವರಿ, ಆದಾಯ ಪಡೆಯಬಹುದು. ಬಿತ್ತಿದ ಬೆಳೆ ವಿಫಲವಾಗುವುದು ವಿರಳ, ಮಣ್ಣಿನ ಫಲವತ್ತತೆ ಬಹುಕಾಲ ಉಳಿಯುತ್ತದೆ. ಸಾವಯವ ಗೊಬ್ಬರ, ಹಸಿರೆಲೆ ಗೊಬ್ಬರ ತಯಾರಿಸಬಹುದು. ಮನೆಮಂದಿಗೆಲ್ಲ ಕೆಲಸ ದೊರಕುತ್ತದೆ. ಬೇವಿನ ಬೆಳೆ, ಕುರಿ ಸಾಕಣೆ, ಸೀಬೆಕಾಯಿ, ಜಾಮ್ ಬೆಳೆಯಬಹುದು ಎಂದು ಅವರು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಆಕಾಶವಾಣಿ ಸಹಾಯಕ ನಿರ್ದೇಶಕ ಡಾ. ಆನಂದ್ ವಿ. ಪಾಟೀಲ್ ಮಾತನಾಡಿ, ಬಾನುಲಿಯಲ್ಲಿ ಪ್ರತಿ ಶನಿವಾರ ಸಂಜೆ 6.50ಕ್ಕೆ ತೋಟ- ನೋಟ ಪ್ರಸಾರವಾಗಲಿದೆ. ತೋಟಗಾರಿಕೆ ತಜ್ಞರು ಸಲಹೆ ನೀಡಲಿದ್ದು, ರೈತರು ಅನುಭವ ಹಂಚಿಕೊಳ್ಳುವರು. ಈ ಕಾರ್ಯಕ್ರಮ ಒಟ್ಟು 26 ವಾರಗಳ ಕಾಲ ಬಿತ್ತರವಾಗಲಿದೆ ಎಂದರು.
ಮಹದೇಶ್ವರ ನಿಖರ ಬೇಸಾಯ ತರಕಾರಿ ಬೆಳೆಗಾರರ ಸಂಘದ ಅಧ್ಯಕ್ಷ ರಾಜು ಬುದ್ಧಿ ತೋಟ- ನೋಟ ಕರಪತ್ರ ಬಿಡುಗಡೆಗೊಳಿಸಿದರು. ಆಕಾಶವಾಣಿಯ ಕೃಷಿ ಕಾರ್ಯಕ್ರಮದ ಕೇಶವಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೆ.ನಾಗಾಜು ಸ್ವಾಗತಿಸಿದರು. ವಾರ್ತಾ ಇಲಾಖೆ ಉಪನಿರ್ದೇಶಕ ಎ.ಆರ್. ಪ್ರಕಾಶ್ ವಂದಿಸಿದರು. ಚಂದ್ರಕಾಂತ್ ಪಾಟೀಲ್ ಪ್ರಾರ್ಥಿಸಿದರು. ಕೃಷ್ಣಮೂರ್ತಿ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

