ಮೈಸೂರು

ಸೋಲಿಗೆ ಯಾರನ್ನೂ ದೂಷಿಸುವುದಿಲ್ಲ: ಮಹದೇವಯ್ಯ

Published On :

ಕ.ಪ್ರ.ವಾರ್ತೆ   ನಂಜನಗೂಡು   ಮೇ 28
ನನ್ನ ಸೋಲಿಗೆ ನಾನೇ ಹೊಣೆ. ಯಾರನ್ನೂ ದೂಷಿಸುವುದಿಲ್ಲ, ನಾನು ಸೋತಿದ್ದರೂ ಎದೆಗುಂದದೆ ಕ್ಷೇತ್ರದ ಅಭಿವೃದ್ಧಿ ಹಾಗೂ ಕಾರ್ಯಕರ್ತರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದು ಎಸ್. ಮಹದೇವಯ್ಯ ಹೇಳಿದರು.
ಇಲ್ಲಿನ ಶ್ರಾವಣ ಕಲ್ಯಾಣ ಮಂಟಪದಲ್ಲಿ ನಡೆದ ಕೆಜೆಪಿ ಕೃತಜ್ಞತಾ ಸಭೆಯಲ್ಲಿ ಅವರು ಮಾತನಾಡಿದರು.
ನಾನು ಹಿಂದಿನ ಚುನಾವಣೆಯಲ್ಲಿ ಅಲ್ಪಮತದ ಅಂತರದಲ್ಲಿ ಸೋತಿದ್ದರೂ 5 ವರ್ಷಗಳಲ್ಲಿ ಕ್ಷೇತ್ರದ ಜನರ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಅವರ ಕಷ್ಟ- ಸುಖಗಳಿಗೆ ಸ್ಪಂದಿಸಿದ್ದರೂ, ಈ ಚುನಾವಣೆಯಲ್ಲಿ ಸೋತಿರುವುದಕ್ಕೆ ಮನಸ್ಸಿಗೆ ನೋವಾಗಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗುತ್ತಾರೆ ಎಂಬ ಉದ್ದೇಶದಿಂದ ಅಹಿಂದ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಚಲಾವಣೆಯಾಯಿತು. ನನ್ನ ಕ್ಷೇತ್ರದಲ್ಲಿ ಸಜ್ಜನ ರಾಜಕಾರಣಿ ಎಂದೇ ಹೆಸರು ಪಡೆದವರು ವ್ಯಾಪಕವಾಗಿ ಹಣ ಹೆಂಡ ಹಂಚಿದ್ದು, ನನ್ನ ಸೋಲಿಗೆ ಕಾರಣವಾಯಿತು ಎಂದು ಹೇಳಿದರು.
ಛಲವಾದಿ ಮಹಾಸಭಾದ ಸ್ಥಾಪಕ ಅಧ್ಯಕ್ಷ ಕೆ. ಶಿವರಾಂ, ಕಾಂಗ್ರೆಸ್‌ನ್ನು ಬೆಂಬಲಿಸಿರುವುದರ ಬಗ್ಗೆ ಟೀಕಿಸಿದ ಅವರು, ಶಿವರಾಂ ತಮ್ಮ ಆಸ್ತಿ- ಪಾಸ್ತಿ ಕಾಪಾಡಿಕೊಳ್ಳಲು ಸ್ವಾರ್ಥದಿಂದ ಸಂಘದ ತತ್ವ- ಸಿದ್ಧಾಂತ ಗಾಳಿಗೆ ತೂರಿ, ಕಾಂಗ್ರೆಸ್‌ನ್ನು ಬೆಂಬಲಿಸಿದರು ಎಂದು ಟೀಕಿಸಿದರು.
ಕ್ಷೇತ್ರದ ಮಾಜಿ ಸಚಿವರೊಬ್ಬರು ವೈಯಕ್ತಿಕ ದ್ವೇಷ ಇಟ್ಟುಕೊಂಡು ನನ್ನ ಬಗ್ಗೆ ಅಪಪ್ರಚಾರ ಮಾಡಿದ್ದಲ್ಲದೆ, ಜೆಡಿಎಸ್ ಅಭ್ಯರ್ಥಿ ಗೆಲ್ಲುವುದಕ್ಕಿಂತ ನನ್ನನ್ನು ಸೋಲಿಸಲು ತಂತ್ರ ಮಾಡಿದ್ದ ಅವರ ಸಣ್ಣತನದ ಬಗ್ಗೆ ಕಿಡಿಕಾರಿದರು. ಮುಂದಿನ ಲೋಕಸಭಾ ಚುನಾವಣೆಗೆ ತಯಾರಾಗಬೇಕಾಗಿದೆ. ಆದ್ದರಿಂದ ಕಾರ್ಯಕರ್ತರು ಧೃತಿಗೆಡದೆ ಪಕ್ಷದ ಸಂಘಟನೆಗೆ ಮುಂದಾಗಬೇಕೆಂದು ಸಲಹೆ ನೀಡಿದರು.
ತಾಲೂಕಿನ ಕಚೇರಿಗಳು ಕಾಂಗ್ರೆಸ್ ಕಚೇರಿಗಳಾಗಬಾರದು. ಪಾರದರ್ಶಕವಾಗಿ ಕ್ಷೇತ್ರದ ಎಲ್ಲ ವರ್ಗದವರ ಕೆಲಸವಾಗಬೇಕು. ನಮ್ಮ ಪಕ್ಷದ ಕಾರ್ಯಕರ್ತರಿಗೆ ಅನ್ಯಾಯವಾದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಪಂ ಸದಸ್ಯ ಕೆಂಪಣ್ಣ, ಎಪಿಎಂಸಿ ಮಾಜಿ ಉಪಾಧ್ಯಕ್ಷ ದೊರೆಸ್ವಾಮಿ ನಾಯ್ಕ, ಕೆಜೆಪಿ ಜಿಲ್ಲಾ ಅಲ್ಪಸಂಖ್ಯಾತರ ಅಧ್ಯಕ್ಷ ಇಲಿಯಾಸ್ ಅಹಮದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನಯ್‌ಕುಮಾರ್, ಎಸ್ಸಿ ಘಟಕದ ಅಧ್ಯಕ್ಷ ರಂಗರಾಜು, ಜಿಲ್ಲಾ ಕಾರ್ಯದರ್ಶಿ ಗಿರಿಪ್ರಸಾದ್, ಪಟ್ಟಣಾಧ್ಯಕ್ಷ ನಾಜೀರ್‌ಖಾನ್, ಮಹಿಳಾ ಘಟಕದ ಅಧ್ಯಕ್ಷೆ ನಂದಿನಿ ನಿಂಗರಾಜು, ಯುವ ಘಟಕದ ಅಧ್ಯಕ್ಷ ಸುರೇಶ್, ಹಿಂದುಳಿದ ವರ್ಗದ ಅಧ್ಯಕ್ಷ ವರದರಾಜು, ಗ್ರಾಪಂ ಅಧ್ಯಕ್ಷ ರಾಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.