ಕುಡಿದ ಮತ್ತಲ್ಲಿ ಕೊಲೆ; ಇಬ್ಬರಿಗೆ ಕೈಕೊಳ
ಕ.ಪ್ರ. ವಾರ್ತೆ ಮೈಸೂರು ಮೇ 29
ಮದ್ಯ ಹಾಗೂ ಸಲ್ಯೂಷನ್ ಸೇವಿಸಿ ಮತ್ತಿನಲ್ಲಿ ಹಣಕ್ಕಾಗಿ ಕೊಲೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಡಿ ಠಾಣೆ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ 5 ಕೊಲೆ ಪ್ರಕರಣಗಳು ಪತ್ತೆಯಾಗಿದೆ.
ಮೈಸೂರಿನ ಉದಯಗಿರಿ ಶಾಂತಿನಗರ ಅಹಮದೀಯ ಮಸೀದಿ ಬಳಿಯ ನಿವಾಸಿ ಕೈಸರ್ (24) ಮತ್ತು ಎನ್.ಆರ್. ಮೊಹಲ್ಲಾ ಕುರಿಮಂಡಿ ಜೋಪಡಿ ನಿವಾಸಿ ಹರೀಶ (26) ಬಂಧಿತ ಆರೋಪಿಗಳು.
ಜೆ.ಕೆ. ಮೈದಾನದಲ್ಲಿರುವ ಅಮೃತ ಮಹೋತ್ಸವ ಹಿಂಭಾಗದಲ್ಲಿದ್ದ ಈ ಇಬ್ಬರನ್ನು ಪೊಲೀಸರು, ಸೋಮವಾರ ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಈ ಇಬ್ಬರು ಆರೋಪಿಗಳು ಮೇ 19 ರಾತ್ರಿ ಆರ್ಎಂಸಿ ಬಳಿಯ ಗಣಪತಿ ದೇವಸ್ಥಾನದ ಪಕ್ಕ ತ್ರಿಮೂರ್ತಿ ಎಂಬವರ ತಲೆಯ ಮೇಲೆ ಕಲ್ಲು ಹಾಕಿ ಕೊಲೆ ಮಾಡಿ, ಹಣ ದೋಚಿರುವುದನ್ನು ಒಪ್ಪಿಕೊಂಡಿದ್ದಾರೆ. ಈ ಒಂದು ಕೊಲೆ ಪ್ರಕರಣದಲ್ಲಿ ಮಾತ್ರ ಹರೀಶ್ ಸಹಕಾರ ನೀಡಿದ್ದ. ಉಳಿದ ನಾಲ್ಕು ಕೊಲೆಗಳನ್ನು ಕೈಸರ್ ಮಾಡಿರುವುದಾಗಿ ನಗರ ಪೊಲೀಸ್ ಆಯುಕ್ತ ಕೆ.ಎಲ್. ಸುಧೀರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತನಿಖಾ ಕಾಲದಲ್ಲಿ ಆರೋಪಿ ಕೈಸರ್ ಈ ಮುಂಚೆ ನಗರದ ಮಂಡಿ ಮತ್ತು ಎನ್.ಆರ್. ಠಾಣೆಯ ಕಳವು ಪ್ರಕರಣಗಳಲ್ಲಿ ಆರೋಪಿಯಾಗಿರುವುದು ತಿಳಿದು ಬಂದಿದೆ. ಆರೋಪಿ ಕೈಸರ್ ಕಳೆದ 2 ವರ್ಷಗಳಿಂದ ಮಂಡಿ ಠಾಣೆ, ಲಷ್ಕರ್ ಠಾಣೆ, ಉದಯಗಿರಿ ಠಾಣೆ ಮತ್ತು ವಿ.ವಿ. ಪುರಂ ಠಾಣಾ ವ್ಯಾಪ್ತಿಯಲ್ಲಿ ಮದ್ಯ, ಸಲ್ಯೂಷನ್ಸ್ ಸೇವಿಸಿ ಮತ್ತಿನಲ್ಲಿ ರಸ್ತೆ ಬದಿ ಮಲಗಿದ್ದವರ ಜೇಬಿನಲ್ಲಿರುವ ಹಣದ ಆಸೆಗಾಗಿ ತಲೆಯ ಮೇಲೆ ಕಲ್ಲು ಹಾಕಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಹೇಳಿದರು.
5 ಕೊಲೆ: ಮೇ 19 ರಾತ್ರಿ ಹಳೆ ಆರ್ಎಂಸಿ ಬಳಿ ನಂಜನಗೂಡು ಕುರುಬಗೇರಿ ನಿವಾಸಿ ತ್ರಿಮೂರ್ತಿ ಅ. ಮೀಸೆ (36) ಎಂಬವರ ತಲೆ ಮೇಲೆ ಕಲ್ಲು ಹಾಕಿ ಕೈಸರ್ ಕೊಲೆ ಮಾಡಿದ್ದಾರೆ.
2012ರ ಮೇ 20ರಂದು ಉದಯಗಿರಿ ಠಾಣೆ ವ್ಯಾಪ್ತಿಯಲ್ಲಿ ಪೊಲೀಸ್ ಪಬ್ಲಿಕ್ ಶಾಲೆ ಪಕ್ಕದ ದೊಡ್ಡ ಮೋರಿಯಲ್ಲಿ ಕೆ.ಆರ್. ನಗರದ ಲತಾ (40) ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿದ್ದ. ಈ ಕೃತ್ಯ ಎಸಗುವ ಮುನ್ನ ಕೈಸರ್ ಆಕೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿ, ಹಣದ ವಿಚಾರದಲ್ಲಿ ಜಗಳವಾಡಿ ಹತ್ಯೆ ಮಾಡಿದ್ದ.
ಲಷ್ಕರ್ ಠಾಣೆ ವ್ಯಾಪ್ತಿಯಲ್ಲಿ 2012ರ ಆ. 3ರಂದು ಫೈವ್ಲೈಟ್ ವೃತ್ತದ ಬಳಿ ಕೆ.ಆರ್. ನಗರದ ಚಾಂದ್ ಷರೀಪ್ (32), 2012ರ ಆ.19 ರಂದು ಹಳ್ಳದಕೇರಿ ಬಳಿ ಗುಂಡ್ಲುಪೇಟೆಯ ಬೂದನೂರು ನಿವಾಸಿ ಬಸವಶೆಟ್ಟಿ (39) ಹಾಗೂ ವಿ.ವಿ.ಪುರಂ ಠಾಣೆ ವ್ಯಾಪ್ತಿಯಲ್ಲಿ ಕೆಆರ್ಎಸ್ ರಸ್ತೆ ಎಲ್ಐಸಿ ಕಚೇರಿ ಹತ್ತಿರ ಹೊಳೆನರಸೀಪುರ ನಿವಾಸಿ ಸೋಮಚಾರಿ (36) ತಲೆ ಮೇಲೆ ಕೈಸರ್ 2012ರ ಆ. 20 ರಂದು ಕಲ್ಲು ಹಾಕಿ ಕೊಲೆ ಮಾಡಿದ್ದ. ಹತ್ಯೆಗೈದ ಬಳಿಕ ಮೃತರ ಬಳಿಯಿದ್ದ ಹಣ ಇನ್ನಿತರ ವಸ್ತುಗಳನ್ನು ಕೈಸರ್ ದೋಚುತ್ತಿದ್ದ ಎಂದು ಪೊಲೀಸ್ ಆಯುಕ್ತರು ವಿವರಿಸಿದರು.
ಡಿಸಿಪಿ ಕೆ.ಪಿ. ಭೀಮಯ್ಯ, ಎನ್.ಆರ್. ಉಪ ವಿಭಾಗದ ಎಸಿಪಿ ಟಿ.ಸಿ. ನಾಗರಾಜು ಮಾರ್ಗದರ್ಶನದಲ್ಲಿ ಮಂಡಿ ಠಾಣೆಯ ಇನ್ಸ್ಪೆಕ್ಟರ್ ಟಿ.ಬಿ. ರಾಜಣ್ಣ, ಎಸ್ಐಗಳಾದ ಶಬ್ಬೀರ್ ಹುಸೇನ್, ಕೇಶವಮೂರ್ತಿ, ತಿಪ್ಪಯ್ಯಸ್ವಾಮಿ ಮತ್ತು ಸಿಬ್ಬಂದಿ ಹರೀಶ್, ಶಂಕರ್, ರಾಜೇಂದ್ರ, ಸತೀಶ್, ವೆಂಕಟೇಶಗೌಡ, ಶಿವಣ್ಣ, ರವಿಕುಮಾರ್, ಮುಸಾವರ್ ಅಹಮದ್, ನಾಗರಾಜು, ನಾಗೇಂದ್ರ, ಗುರುಪ್ರಸಾದ್, ರಾಜೇಗೌಡ, ವಿಜಯಕುಮಾರ್, ಚಂದ್ರು, ರವಿಕುಮಾರ್, ಬಸವೇಶ್, ರುದ್ರೇಶ್ ಈ ಪತ್ತೆ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

