ಲಲಿತಕಲೆಗಳಿಗೆ ಪ್ರೋತ್ಸಾಹ ಅವಶ್ಯಕ: ಸಿಎಂ
ಕ.ಪ್ರ.ವಾರ್ತೆ ಮೈಸೂರು ಅ. 6
ನಾಡಿನ ಲಲಿತ ಕಲೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದು ಅವಶ್ಯಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಶ್ವಮಾನವ ವಿದ್ಯಾರ್ಥಿ ವೇದಿಕೆಯು ಮೈಸೂರು ದಸರಾ ಮಹೋತ್ಸವ ಲಲಿತಕಲೆ ಮತ್ತು ಕರಕುಶಲ ಉಪಸಮಿತಿ ಸಹಯೋಗದಲ್ಲಿ ಮೆಟ್ರೋಪೋಲ್ ವೃತ್ತದಲ್ಲಿ ಭಾನುವಾರ ಏರ್ಪಡಿಸಿದ್ದ ರಾಷ್ಟ್ರಮಟ್ಟದ ಕಲಾಕೃತಿಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಚಿತ್ರಸಂತೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಹಾಗೂ ದೇಶದಲ್ಲಿ ಅದ್ಭುತ ಕಲಾವಿದರಿದ್ದು, ಅವರಿಂದ ಈ ಕಲಾರಂಗ ಶ್ರೀಮಂತಗೊಂಡಿದೆ. ಲಲಿತ ಕಲೆಗಳಿಂದ ನಾಡಿನ ಸಂಸ್ಕೃತಿಯು ಬಹಳ ಎತ್ತರಕ್ಕೆ ಬೆಳೆದಿದೆ. ಆದ್ದರಿಂದ ಕಲೆ, ಸಂಸ್ಕೃತಿ ಅಭಿವೃದ್ಧಿಗೆ ಲಲಿತ ಕಲೆಗಳಿಗೆ ಹೆಚ್ಚಿನ ಪ್ರೋತ್ಸಾಹ ಅವಶ್ಯಕ. ಸರ್ಕಾರ ಇದಕ್ಕಾಗಿ ಅಗತ್ಯ ನೆರವು ನೀಡಲಿದೆ ಎಂದರು.
ಸಾಂಸ್ಕೃತಿಕ ಬದುಕು ಉಳಿಸಿ ಬೆಳಸಿಕೊಂಡು ಹೋಗುವುದು ಪ್ರಸ್ತುತ ಅವಶ್ಯಕ. ದೇಶದ ನಾನಾ ಭಾಗಗಳಿಂದ ಕಲಾವಿದರನ್ನು ಕರೆಸಿ, ದಸರಾ ವೀಕ್ಷಣೆಗೆ ಬರುವ ಪ್ರವಾಸಿಗರು ಹಾಗೂ ಮೈಸೂರಿನ ಜನರಿಗೆ ಕಲಾಕೃತಿಗಳನ್ನು ಪರಿಚಯಿಸುವ ಇಂತಹ ಪ್ರದರ್ಶನ ಏರ್ಪಡಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಾಸ್ತಾವಿಕ ಮಾತನಾಡಿದ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಎಂ.ಜೆ. ಸುರೇಶ್ಗೌಡ, ಕಳೆದ ಮೂರು ವರ್ಷಗಳಿಂದ ಚಿತ್ರಸಂತೆ ಏರ್ಪಡಿಸುತ್ತಾ ಬಂದಿದ್ದು, ಇದೇ ಮೊದಲ ಬಾರಿಗೆ ದಸರಾ ಮಹೋತ್ಸವ ಲಲಿತ ಕಲೆ ಮತ್ತು ಕರಕುಶಲ ಕಲೆ ಉಪಸಮಿತಿ ಸಹಯೋಗದಲ್ಲಿ ಈ ಮೇಳ ಆಯೋಜಿಸಲಾಗಿದೆ. ದೇಶದ ವಿವಿಧ ರಾಜ್ಯಗಳ ಕಲಾವಿದರು ತಮ್ಮ ಕಲಾಪ್ರದರ್ಶನ ಮೆರೆದಿದ್ದಾರೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ ಪ್ರಸಾದ್, ಕೃಷ್ಣರಾಜ ಕ್ಷೇತ್ರದ ಶಾಸಕ ಎಂ.ಕೆ. ಸೋಮಶೇಖರ್, ಜಿ.ಪಂ. ಅಧ್ಯಕ್ಷ ಎಂ.ಮಹದೇವು ಮುಖ್ಯ ಅತಿಥಿಗಳಾಗಿದ್ದರು. ಚಾಮರಾಜ ಕ್ಷೇತ್ರದ ಶಾಸಕ ವಾಸು ಅಧ್ಯಕ್ಷತೆ ವಹಿಸಿದ್ದರು. ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕೆ.ಆರ್. ಮೋಹನ್ಕುಮಾರ್, ಲಲಿತಕಲೆ ಹಾಗೂ ಕರಕುಶಲ ಉಪಸಮಿತಿ ಅಧ್ಯಕ್ಷ ಮೆಹಬೂಬ್ ಶರೀಫ್, ಉಪಾಧ್ಯಕ್ಷ ಆರ್. ನಾರಾಯಣಸ್ವಾಮಿ, ಟಿ. ಹೇಮಾವತಿ, ಕಾವಾ ಡೀನ್ ವಿ.ಎ. ದೇಶಪಾಂಡೆ, ರಂಗಾಯಣ ಉಪನಿರ್ದೇಶಕ ಎಸ್.ಐ. ಬಾವಿಕಟ್ಟಿ ಇದ್ದರು.
ಸ್ಪರ್ಧೆ: ಕಲಾಮೇಳದ ಅಂಗವಾಗಿ 1 ರಿಂದ 12 ನೇ ತರಗತಿ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನೂ ಹಾಗೂ 8 ರಿಂದ 12 ನೇ ತರಗತಿ ವಿದ್ಯಾರ್ಥಿಗಳಿಗೆ ಮೆಹಂದಿ ಹಾಗೂ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮಕ್ಕೆ ಕೈಕೊಟ್ಟ ಕರೆಂಟ್
ಚಿತ್ರಸಂತೆ ಕಲಾಮೇಳ ಚಾಲನೆಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟನಾ ಭಾಷಣಕ್ಕಾಗಿ ಮೈಕ್ ಮುಂದೆ ನಿಂತ ಕೂಡಲೇ ವಿದ್ಯುತ್ ಕೈಕೊಟ್ಟಿತು. ವಿದ್ಯುತ್ ಕಡಿತವಾಗಿದೆ ಎಂದು ಭಾವಿಸದ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ ಪ್ರಸಾದ್ ಅವರು ಧ್ವನಿವರ್ಧಕ ನಿರ್ವಾಹಕನನ್ನು ಕೂಗಿ, ಮೈಕ್ ಆನ್ ಮಾಡಪ್ಪ ಎಂದರು. ಸಂಘಟಕರು ಅತ್ತ ಧಾವಿಸಿದರು. ಆಗ ವಿದ್ಯುತ್ ಹೋಗಿರುವ ಸಂಗತಿ ತಿಳಿಯಿತು. ಧ್ವನಿವರ್ಧಕ ಇಲ್ಲದೆ ಸಿಎಂ ಭಾಷಣ ಮಾಡಲು ಶುರುಮಾಡಿದರು. ಮಾತು ಕೇಳದ ಹಿನ್ನೆಲೆಯಲ್ಲಿ ಮೈಕ್ ಮೈಕ್ ಎಂದು ಸಭೆಯಲ್ಲಿ ಕುಳಿತವರೊಬ್ಬರು ಕೂಗಿದರು. ಆಗ ಸಿದ್ದರಾಮಯ್ಯ ಅವರು ಕರೆಂಟ್ ಇಲ್ಲಪ್ಪ ಎಂದರು. ಮುಖ್ಯಮಂತ್ರಿ ಅವರು ಅಧಿಕೃತವಾಗಿ ಭಾಗವಹಿಸುವ ಇಂತಹ ಕಾರ್ಯಕ್ರಮಕ್ಕೆ ಮುಂಚಿತವಾಗಿ ವಿದ್ಯುತ್ ಇಲಾಖೆ ಮುನ್ನೆಚ್ಚರಿಕೆ ವಹಿಸಬೇಕು. ಆದರೆ ಸಿಎಂ ಕಾರ್ಯಕ್ರಮಕ್ಕೆ ಅಡಚಣೆಯಾದರೆ, ಇನ್ನೂ ಜನಸಾಮಾನ್ಯರಿಗೆ ಸೆಸ್ಕ್ ಅಧಿಕಾರಿಗಳು ಯಾವ ರೀತಿ ಸೇವೆ ಒದಗಿಸುವರು ಎಂಬುದನ್ನು ಮುಖ್ಯಮಂತ್ರಿಗಳು ಅರಿಯಬೇಕು ಎಂಬುವ ಮಾತುಗಳು ಸಭೆಯಲ್ಲಿ ಕೇಳಿಬಂತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

