ಗಿರಿಜನರಿಗೆ 'ದರ್ಶನ ಭಾಗ್ಯ' ನೀಡದ ಜನಪ್ರತಿನಿಧಿಗಳು
ಕ.ಪ್ರ.ವಾರ್ತೆ ಮೈಸೂರು ಅ. 6
ದಸರಾ ದರ್ಶನಕ್ಕಾಗಿ ಕಾಡಿನಿಂದ ಆಗಮಿಸಿದ್ದ ಗಿರಿಜನರನ್ನು ನಾಡಿನ ಗಣ್ಯರು ಗಂಟೆಗಟ್ಟಲೆ ಕಾಯಿಸಿದರು. ಸ್ವಾಗತ ಕೋರಲು ಬರಲೇ ಇಲ್ಲ. ಕಾದು ಕಾದು ಸುಸ್ತಾದ ಗಿರಿಜನರು ಮೈಸೂರು ವೀಕ್ಷಣೆಗೆ ತೆರಳಿದರು.
ದಸರಾ ದರ್ಶನ ಉಪಸಮಿತಿಯವರು ಮೊದಲ ದಿನ ದಸರಾ ದರ್ಶನಕ್ಕಾಗಿ 2 ಬಸ್ಸಿನಲ್ಲಿ ಗಿರಿಜನರನ್ನು ಉಚಿತವಾಗಿ ಕರೆದುಕೊಂಡು ಬಂದಿದ್ದರು. ನಿಗದಿತ ಸಮಯಕ್ಕೆ ಕೆಎಸ್ಆರ್ಟಿಸಿ ಚಾಲಕರು ಹಾಡಿಯಿಂದ ಗಿರಿಜನರನ್ನು ಬಸ್ಸಿನಲ್ಲಿ ಮೈಸೂರಿಗೆ ಕರೆತಂದಿದ್ದರು.
ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಬೆಳಗ್ಗೆ 9ಕ್ಕೆ ಈ ಗಿರಿಜನರನ್ನು ಸ್ವಾಗತ ಕೋರುವ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ, ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಅವರು ಮಾತ್ರ ಒಂದೂವರೆ ಗಂಟೆಯಾದರೂ ಸಹ ಸ್ಥಳಕ್ಕೆ ಬರಲಿಲ್ಲ. ಗಿರಿಜನರ ಜೊತೆಗೆ ಅಧಿಕಾರಿಗಳು ಹಾಗೂ ಉಪಸಮಿತಿ ಸದಸ್ಯರು ಸಹ ಸಚಿವರಿಗಾಗಿ ಕಾದು ಸುಸ್ತಾದರು.
ಅಂತಿಮವಾಗಿ ದಸರಾ ಸಾಂಸ್ಕೃತಿಕ ಉಪಸಮಿತಿ ಅಧ್ಯಕ್ಷ ಕೆ.ಆರ್. ಮೋಹನ್ಕುಮಾರ್ ಅವರಿಂದ ದಸರಾ ದರ್ಶನಕ್ಕೆ ಬಂದವರಿಗೆ ಗುಲಾಬಿ ಮತ್ತು ಸಿಹಿ ನೀಡಿ ಸ್ವಾಗತಿಸಿ, ಚಾಲನೆ ನೀಡಲಾಯಿತು.
ಹಾಡಿಯಿಂದ ಬಂದಿದ್ದ ಗಿರಿಜನರು ತಮ್ಮ ಸಾಂಪ್ರದಾಯಿಕ ಹಾಡು, ನೃತ್ಯದೊಂದಿಗೆ ರಂಜಿಸಿದರು. ಹಾಡು, ಕುಣಿತಕ್ಕಾಗಿಯೇ ತಮ್ಮ ಸಂಪ್ರದಾಯಿಕ ಉಡುಗೆಗಳನ್ನು ಸಹ ತೊಟ್ಟಿದ್ದರು. ತಮ್ಮ ಹಾಡಿಯಲ್ಲೇ ಮೈಸೂರಿಗೆ ಬಂದವರಿಗಾಗಿ ತಿಂಡಿ ಮತ್ತು ಊಟವನ್ನು ತಯಾರಿಸಿ ಬಸ್ಸಿನಲ್ಲಿ ತಂದಿದ್ದರು.
ಬಸ್ಸಿನಲ್ಲಿ ದಸರಾ ದರ್ಶನ...: 50 ರಿಯಾಯಿತಿ ದರದ ಪಾಸುಗಳನ್ನು ಖರೀದಿಸುವ ಗ್ರಾಮೀಣ ಜನರಿಗೆ ಕೆಎಸ್ಆರ್ಟಿಸಿ ಬಸ್ನಲ್ಲಿ ಮೈಸೂರು ಮತ್ತು ದಸರಾ ಕಾರ್ಯಕ್ರಮಗಳನ್ನು ತೋರಿಸಲಾಗುತ್ತಿದೆ.
ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಮತ್ತು ಕೊಡಗು ಜಿಲ್ಲೆಗಳ 29 ತಾಲೂಕುಗಳಿಂದ ಜನರನ್ನು ಕರೆತಂದು ದಸರಾ ದರ್ಶನ ಮಾಡಿಸಲಾಗುತ್ತದೆ. ಅ.10 ರವರೆಗೆ ದಸರಾ ದರ್ಶನ ಮಾಡಿಸಲಾಗುತ್ತದೆ. 29 ತಾಲೂಕುಗಳಿಂದ 174 ಬಸ್ಗಳಲ್ಲಿ 9570 ಮಂದಿಗೆ ದಸರಾ ದರ್ಶನಕ್ಕೆ ಆಗಮಿಸುವ ನಿರೀಕ್ಷೆ ಇದೆ ಎಂದು ದಸರಾ ದರ್ಶನ ಉಪಸಮಿತಿಯ ಕಾರ್ಯಾಧ್ಯಕ್ಷ ಕೆಎಸ್ಆರ್ಟಿಸಿ ಮೈಸೂರು ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ವಿ. ಶ್ರೀನಿವಾಸ್ ತಿಳಿಸಿದರು.
ದಸರಾ ದರ್ಶನ ಉಪಸಮಿತಿಯ ಅಧ್ಯಕ್ಷ ಆರ್.ಎಂ. ರಾಜಪ್ಪ, ಉಪಾಧ್ಯಕ್ಷ ಎನ್.ಆರ್. ನಾಗೇಶ್, ಕಾರ್ಯದರ್ಶಿಯಾದ ಜಿಪಂ ಯೋಜನಾಧಿಕಾರಿ ವಸುಂಧರಾದೇವಿ, ಸದಸ್ಯರಾದ ನರಸಿಂಹಮೂರ್ತಿ, ತಾಜ್ ಅಹಮದ್, ರೇವಣ್ಣ, ಎಸ್. ರತ್ನಮ್ಮ, ಜಿ.ಎಸ್. ನಂಜುಂಡಸ್ವಾಮಿ, ಸುರೇಶ್ಕುಮಾರ್ ಜೈನ್, ಎಂ.ಬಿ. ದೊಡ್ಡೇಗೌಡ, ಸ್ವಾಮಿನಾಯಕ, ಬಿ.ಎಸ್. ರಾಮು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

