ಸಂವಿಧಾನಬದ್ಧ ಹಕ್ಕು ಚಲಾಯಿಸಿ: ಉಮಾಶ್ರೀ
ಕ.ಪ್ರ.ವಾರ್ತೆ, ಮೈಸೂರು, ಅ. 7-
ಇಂದು ಮಹಿಳೆಯರು ಸಂವಿಧಾನಬದ್ಧ ಹಕ್ಕುಗಳನ್ನು ಚಲಾಯಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಉಮಾಶ್ರೀ ಕರೆ ನೀಡಿದರು.
ಮಹಿಳಾ ದಸರಾ ಉಪಸಮಿತಿಯು ಮೈಸೂರು ವೈದ್ಯಕೀಯ ಕಾಲೇಜಿನ ಅಮೃತ ಮಹೋತ್ಸವ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಮಹಿಳಾ ದಸರಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಮಹಿಳೆಯರು ಸ್ವಾತಂತ್ರ್ಯ ಪೂರ್ವ ಹಾಗೂ ನಂತರದ ದಿನಗಳಲ್ಲಿ ಅನೇಕ ಸಮಾಜಮುಖಿ ಸೇವೆಯಲ್ಲಿ ತೊಡಗಿ ಹೋರಾಟ ಹಾಗೂ ಕೊಡುಗೆಗಳನ್ನು ನೀಡಿದ್ದಾರೆ. ಅಲ್ಲದೆ ಅನೇಕ ಮಹಿಳೆಯರು ಸಾಧನೆ ಮಾಡಿ ರಾಷ್ಟ್ರದ ಹಿರಿಮೆ ಹೆಚ್ಚಿಸಿದ್ದಾರೆ. ಆದರೂ ಸಮಾಜದಲ್ಲಿ ದ್ವಿತೀಯ ಪ್ರಜೆಯಾಗಿ ಕಾಣುತ್ತಿರುವುದು ಆತಂಕದ ಸಂಗತಿ. ತಮ್ಮ ಸಂವಿಧಾನಬದ್ಧ ಹಕ್ಕುಗಳಿಗಾಗಿ ಹೋರಾಟ ಮಾಡುವ ಅಗತ್ಯವಿದೆ ಎಂದರು. ಮಹಿಳೆಯರ ಬೆಳವಣಿಗೆಗೆ ಶಿಕ್ಷಣದ ಪಾತ್ರ ಬಹುಮುಖ್ಯ. ಬಡತನವಿದ್ದರೂ ತಮ್ಮ ಹೆಣ್ಣು ಮಕ್ಕಳನ್ನು ವಿದ್ಯಾವಂತರಾಗಿ ಮಾಡುವಲ್ಲಿ ಪೋಷಕರು ಹೆಚ್ಚು ಆಸಕ್ತಿ ವಹಿಸುವುದು ಅವಶ್ಯಕ. ಇದರಿಂದ ಮಹಿಳಾ ಕುಲ ಗಟ್ಟಿಯಾಗಿ ದೇಶದ ಪ್ರಗತಿ ಸಾಧ್ಯವಾಗಲಿದೆ ಎಂದು ತಿಳಿಸಿದರು.
ಗ್ರಾಮೀಣ ಭಾಗದಲ್ಲಿ ಮಹಿಳೆಯರು ಅನೇಕ ಸಮಸ್ಯೆ ಎದುರಿಸುತ್ತಿದ್ದು, ಇದರ ನಿವಾರಣೆಗೆ ಸುಶಿಕ್ಷಿತರು ಅವರ ನೆರವಿಗೆ ಸ್ಪಂದಿಸುವ ಅಗತ್ಯವಿದೆ. ಸರ್ಕಾರ, ಇಲಾಖೆಗಳು ಹಾಗೂ ಸಂಘಸಂಸ್ಥೆಗಳಿಂದ ಮಾತ್ರ ಮಹಿಳೆಯರ ಸಬಲೀಕರಣ ಸಾಧ್ಯವಿಲ್ಲ. ಸ್ವಯಂಶಕ್ತಿ ಹಾಗೂ ಸ್ವಯಂ ಆಲೋಚನೆ ಬೆಳೆಸಿಕೊಂಡಾಗ ಯಶಸ್ಸು ಪಡೆಯಬಹುದು ಎಂದರು.
ಸೇವೆ ದೊಡ್ಡದು: ಮಕ್ಕಳ ಪೌಷ್ಟಿಕತೆ ಕಾಪಾಡುವಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಬಹುಮುಖ್ಯ. ಬಡಮಕ್ಕಳ ಪಾಲನೆ ಹಾಗೂ ತಾಯಿಯಾಗಿ ವಾತ್ಸಲ್ಯ ನೀಡುತ್ತಿರುವುದು ಶ್ಲಾಘನೀಯ. ಸಂಬಳ ಕಡಿಮೆಯಾದರೂ ಸಲ್ಲಿಸುತ್ತಿರುವ ಸೇವೆ ಬಹಳ ದೊಡ್ಡದು. ಭ್ರಷ್ಟಾಚಾರ ವ್ಯವಸ್ಥೆಯಿಂದ ದೂರವಾಗಿ ಬಾಲ್ಯವಿವಾಹ, ವರದಕ್ಷಿಣೆ ಮುಂತಾದ ಅನಿಷ್ಟ ಪದ್ಧತಿ ನಿರ್ಮೂಲನೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು. ಚಾಮರಾಜ ಶಾಸಕ ವಾಸು ಅಧ್ಯಕ್ಷತೆ ವಹಿಸಿದ್ದರು. ಮೇಯರ್ ಎನ್.ಎಂ. ರಾಜೇಶ್ವರಿ, ಜಿಪಂ ಅಧ್ಯಕ್ಷ ಎಂ. ಮಹದೇವು, ಸದಸ್ಯ ಎಂ.ಬಿ. ಸಿದ್ದೇಗೌಡ, ಸಿಇಒ ಪಿ.ಎ. ಗೋಪಾಲ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕಿ ಗುರುಮಿತ್ ತೇಜ್, ವಿಶ್ವಸಂಸ್ಥೆ ಮಹಿಳಾ ಘಟಕದ ಸದಸ್ಯೆ ಯುಜಿನಿಯಾ ಮುಖ್ಯ ಅತಿಥಿಯಾಗಿದ್ದರು.
ಸಮಿತಿ ಅಧ್ಯಕ್ಷೆ ಸುಶೀಲ ಕೇಶವಮೂರ್ತಿ ಸ್ವಾಗತಿಸಿದರು. ಉಪಾಧ್ಯಕ್ಷರಾದ ಡಾ.ಸುಜಾತ ಶ್ರೀನಿವಾಸರಾವ್, ಎಸ್. ನಾಗರತ್ನ, ಕಾರ್ಯಾಧ್ಯಕ್ಷ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಎನ್.ಆರ್. ವಿಜಯ್, ಕಾರ್ಯದರ್ಶಿ ವಿ.ಆರ್. ಶೈಲಜ ಹಾಗೂ ಸದಸ್ಯರು ಇದ್ದರು.
ನಂತರ ಮಂಡ್ಯ ಜಿಲ್ಲೆ ಕೀಲಾರ ಗ್ರಾಮದ ಮಹಿಳಾ ಕಲಾವಿದರಿಂದ ಪೂಜಾ ಕುಣಿತ ಹಾಗೂ ಮೈಸೂರು ಬಾಲಕಿಯರ ಬಾಲಮಂದಿರ ಮಕ್ಕಳಿಂದ ಬಾಲ್ಯ ವಿವಾಹ ತಡೆ ಕುರಿತ ರೂಪಕ ಹಾಗೂ ವಿವಿಧ ಮಹಿಳಾ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಚಾಲನೆ: ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ಮಹಿಳಾ ದಸರಾ ಉಪಸಮಿತಿಯು, ಜೆ.ಕೆ. ಆವರಣದಲ್ಲಿ ಆಯೋಜಿರುವ 5 ದಿನಗಳ ವಸ್ತುಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಸಚಿವೆ ಉಮಾಶ್ರೀ ಉದ್ಘಾಟಿಸಿದರು. ಈ ಮಾರಾಟ ಮೇಳ ಬೆಳಗ್ಗೆ 10 ರಿಂದ ಸಂಜೆ 7 ರವರೆಗೆ ತೆರೆದಿರುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

