ಅನುದಾನ ಮೂಲ ಸೌಕರ್ಯಕ್ಕೆ ಸದುಪಯೋಗವಾಗಲಿ
ಅನುದಾನ ಮೂಲ ಸೌಕರ್ಯಕ್ಕೆ ಸದುಪಯೋಗವಾಗಲಿ
ಕ.ಪ್ರ.ವಾರ್ತೆ ಪಿರಿಯಾಪಟ್ಟಣ ಅ. 10
13ನೇ ಹಣಕಾಸು ಯೋಜನೆಯನ್ನು ಗ್ರಾಮದ ಸ್ವಚ್ಛತೆ, ಕುಡಿಯುವ ನೀರಿನ ಸೌಕರ್ಯ ಹಾಗೂ ವಿದ್ಯುತ್ ವ್ಯವಸ್ಥೆಯಂತಹ ಮೂಲ ಸೌಕರ್ಯಗಳಿಗಾಗಿ ಬಳಸಿಕೊಳ್ಳಬೇಕು ಎಂದು ಶಾಸಕ ಕೆ. ವೆಂಕಟೇಶ್ ಹೇಳಿದರು.
ತಾಲೂಕಿನ ಮಾಕೋಡು ಗ್ರಾಮದಲ್ಲಿ ನಡೆದ ಜನ ಸಂದರ್ಶನ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಪಂಗಳಿಗೆ ಬರುವ ಅನುದಾನಗಳ ಬಗ್ಗೆ ಗ್ರಾಪಂ ಸದಸ್ಯರು ಸರಿಯಾಗಿ ಅರ್ಥ ಮಾಡಿಕೊಂಡು ಖರ್ಚು ಮಾಡಬೇಕು. ಬರುವ ಅನುದಾನವನ್ನು ಸದಸ್ಯರು ಹಂಚಿಕೊಂಡು ಅಭಿವೃದ್ಧಿ ಕೆಲಸಗಳಿಗೆ ಮಾತ್ರ ಸೀಮಿತವಾಗಿರಿಸುವುದರಿಂದ ಪ್ರಯೋಜನವಿಲ್ಲ. ಗ್ರಾಮದಲ್ಲಿ ಅಗತ್ಯವಾಗಿ ಆಗಬೇಕಿರುವ ಮೂಲ ವ್ಯವಸ್ಥೆಗಳಿಗಾಗಿ 13ನೇ ಹಣಕಾಸು ಯೋಜನೆಯಿಂದ ಬರುವ ಹಣವನ್ನು ಖರ್ಚು ಮಾಡಿ ಎಂದು ತಿಳಿಸಿದರು.
ಬಸವ ವಸತಿ ಯೋಜನೆಯಂತಹ ಮನೆ ಕಟ್ಟಿಸುವ ವಿವಿಧ ಯೋಜನೆಗಳನ್ನು ಸರ್ಕಾರ ಹಾಕಿಕೊಂಡಿರುವುದು ಗುಡಿಸಲು ಮುಕ್ತ ರಾಜ್ಯವನ್ನಾಗಿಸಬೇಕು ಎಂಬ ದೃಷ್ಟಿಯಿಂದ. ಗುಡಿಸಲುಗಳಲ್ಲಿ ವಾಸಿಸುವವರಿಗೆ ಮೊದಲ ಆದ್ಯತೆ ನೀಡಿ ಬಸವ ವಸತಿ ಯೋಜನೆಗೆ ಅವರನ್ನು ಆಯ್ಕೆ ಮಾಡಿ ಪಟ್ಟಿ ಸಿದ್ಧಪಡಿಸಿ. ಚುನಾಯಿತ ಪ್ರತಿನಿಧಿಗಳು ಶಿಫಾರಸ್ಸು ಮಾಡುವವರಿಗೆ ಮಾತ್ರ ಮನೆ ನೀಡುವ ಯೋಜನೆ ಇದಾಗಬಾರದು, ನಿಜವಾದ ಫಲಾನುಭವಿಗಳಿಗೆ ಬಸವ ವಸತಿ ಯೋಜನೆ ದೊರೆಯುವಂತಾಗಬೇಕು, ಈ ಬಗ್ಗೆ ಗಮನ ಹರಿಸುವಂತೆ ತಾಪಂ ಇಒ ಅವರಿಗೆ ಸೂಚಿಸಿದರು.
ಮಾತಿನ ಚಕಮಕಿ: ಗ್ರಾಮದಲ್ಲಿ ಅನೇಕರು ಬಸವ ವಸತಿ ಯೋಜನೆ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಸೂಕ್ತ ಫಲಾನುಭವಿಗಳನ್ನು ಆಯ್ಕೆ ಮಾಡದೆ ಗ್ರಾಪಂ ಸದಸ್ಯರು, ಪಿಡಿಒ ಮತ್ತು ಕಾರ್ಯದರ್ಶಿ ತಮಗೆ ಬೇಕಾದವರಿಗೆ ಮನೆ ಮಂಜೂರು ಮಾಡುತ್ತಾರೆ ಎಂದು ಆರೋಪಗಳು ಕೇಳಿ ಬಂದವು. ಕೋಪಗೊಂಡ ತಾಪಂ ಸದಸ್ಯ ಜವರಪ್ಪ, ಮಾಕೋಡು ಗ್ರಾಮದಲ್ಲಿ ಸೂಕ್ತ ಫಲಾನುಭವಿಗಳನ್ನು ಆಯ್ಕೆ ಮಾಡಿ ಮನೆ ಮಂಜೂರು ಮಾಡಲಾಗಿದೆ. ಸುಮ್ಮನೆ ಜನಪ್ರತಿನಿಧಿಗಳ ಮೇಲೆ ಸುಳ್ಳು ಆರೋಪ ಮಾಡುವುದು ಸರಿ ಅಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದೆ ವೇಳೆ ಗ್ರಾಪಂ ಸದಸ್ಯರ ಹಾಗೂ ತಾಪಂ ಸದಸ್ಯ ಜವರಪ್ಪ ನಡುವೆ ಶಾಸಕರ ಸಮ್ಮುಖದಲ್ಲಿ ಮಾತಿನ ಚಕಮಕಿ ನಡೆಯಿತು. ನಂತರ ಶಾಸಕರು ಇಬ್ಬರನ್ನೂ ಸಮಾಧಾನಪಡಿದರು.
ಗ್ರಾಪಂ ಅಧ್ಯಕ್ಷೆ ಚನ್ನಮ್ಮ ಮಾತನಾಡಿ, ತಮ್ಮ ಸ್ವಗ್ರಾಮವಾದ ಎಂ. ಶೆಟ್ಟಿಹಳ್ಳಿ ಗ್ರಾಮದಲ್ಲಿ ತಿಪ್ಪೆಗುಂಡಿಯದೇ ಸಮಸ್ಯೆ. ಗ್ರಾಮದಲ್ಲಿ ಸ್ವಚ್ಛತೆ ಕೊರತೆ ಇದೆ. ಸ್ವಚ್ಛತಾ ಕಾರ್ಯಕ್ಕೆ ಗ್ರಾಪಂನಲ್ಲಿ ಹಣವಿಲ್ಲ. ಗ್ರಾಮದಲ್ಲಿ ಅನೈರ್ಮಲ್ಯ ತಾಂಡವಾಡುತ್ತಿದ್ದು, ಶಾಸಕರು ಸ್ವಚ್ಛತೆ ಕಾರ್ಯ ಮಾಡಿಸುವ ಬಗ್ಗೆ ಗಮನಹರಿಸುವಂತೆ ಮನವಿ ಮಾಡಿದರು.
ಮಾಕೋಡು ಗ್ರಾಪಂ ವ್ಯಾಪ್ತಿಯ ಹಲವಾರು ಗ್ರಾಮಗಳಲ್ಲಿ ವಿದ್ಯುತ್ ತಂತಿಗಳು ಕೆಳಭಾಗಕ್ಕೆ ಜೋತು ಬಿದ್ದಿವೆ, ರಸ್ತೆ ಅವ್ಯವಸ್ಥೆಯಿಂದ ಗೊಂಡಿದೆ. ಚರಂಡಿ ಅವ್ಯವಸ್ಥೆ, ಅನೈರ್ಮಲ್ಯಗಳ ಬಗ್ಗೆ ದೂರುಗಳ ಕೇಳಿಬಂದವು. ಮಾಕೋಡು ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯುವಂತೆ, ಕುಡಿಯುವ ನೀರಿಗೆ ಪ್ರತ್ಯೇಕ ಟಿಸಿ ವ್ಯವಸ್ಥೆ ಕಲ್ಪಿಸಿಕೊಡುವಂತೆ ಹಾಗೂ ಪ್ರೌಢಶಾಲಾ ಕಟ್ಟಡ ನಿರ್ಮಾಣ ಮಾಡಿಸಿಕೊಡುವಂತೆ ಗ್ರಾಮಸ್ಥರು ಶಾಸಕರಿಗೆ ಮನವಿ ಸಲ್ಲಿಸಿದರು.
ಸಭೆಯಲ್ಲಿ ತಹಸೀಲ್ದಾರ್ ಎಂ.ಕೆ. ಸವಿತಾ, ಇಒ ಮಹದೇವಸ್ವಾಮಿ, ಎಇಇ ಸಿ.ಸಿ. ಮನೋಹರ್, ಟಿಎಚ್ಒ ಶಶಿಕಲಾ, ಎಸ್ಐ ರಫೀಕ್, ಟಿಎಪಿಸಿಎಂಎಸ್ ನಿರ್ದೇಶಕ ಸ್ವಾಮಿ, ಗ್ರಾಪಂ ಸದಸ್ಯರಾದ ಬಲರಾಮೇಗೌಡ, ಬಸವರಾಜು, ಸಣ್ಣತಮ್ಮೇಗೌಡ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

