ನೀಡದ ಡ್ಯೂಟಿ ಪಾಸ್; ಆನೆ ಲದ್ದಿ ಎತ್ತಿದ ಪೊಲೀಸರು!
ಕ.ಪ್ರ.ವಾರ್ತೆ ಮೈಸೂರು ಅ. 14
ಅರಮನೆ ಒಳಗೆ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಹಲವರಿಗೆ ಕರ್ತವ್ಯ ಪಾಸ್ ನೀಡಿರಲಿಲ್ಲ. ಇದರಿಂದಾಗಿ ಅರಮನೆ ಆವರಣದ ಜಂಬೂಸವಾರಿ ಮಾರ್ಗದಲ್ಲಿ ಆನೆಗಳು ಹಾಕಿದ ಲದ್ದಿಯನ್ನೂ ಪೊಲೀಸರೆ ತೆಗೆಯಬೇಕಾಯಿತು. ಬಳಿಕ ಆ ಎಲ್ಲಾ ಲದ್ದಿಯನ್ನು ತಂದ ಪತ್ರಕರ್ತರ ಗ್ಯಾಲರಿ ಮುಂದೆಯೆ ಸುರಿದರು. ನಂತರ ಜ್ಞಾನೋದಯವಾದರಂತೆ ಇದಕ್ಕಾಗಿ ಇರುವ ಸ್ವಚ್ಛತಾ ಸಿಬ್ಬಂದಿಯನ್ನು ಕರೆತಂದರು.
ಕ್ಯಾಮೆರಾಮನ್ಗಳ ಹಾವಳಿ...: ದಸರಾ ಮೆರವಣಿಗೆ ಒಂದೆಡೆಯಾದರೆ ಮೆರವಣಿಗೆಯ ವಿವಿಧ ದೃಶ್ಯಗಳನ್ನು ಸೆರೆ ಹಿಡಿಯುವವರ ಮೆರವಣಿಗೆ ಮತ್ತೊಂದು ಕಡೆ. ಈಗಂತೂ ಎಲ್ಲರ ಕೈಯಲ್ಲೂ ಮೊಬೈಲ್ ಇದ್ದೆ ಇರುತ್ತದೆ. ಈ ಪೈಕಿ ಬಹಳ ಮಂದಿಯದ್ದು ಕ್ಯಾಮೆರಾ ಇರುವ ಮೊಬೈಲ್ ಜಂಬೂಸವಾರಿ, ವಿವಿಧ ಸ್ತಬ್ಧಚಿತ್ರಗಳು ಮತ್ತು ಜಾನಪದ ಕಲಾ ತಂಡಗಳ ಛಾಯಾಚಿತ್ರ ಪ್ರದರ್ಶನ ಸೆರೆ ಹಿಡಿಯುವದರಲ್ಲಿ ಎಲ್ಲರೂ ನಿರತರಾಗಿದ್ದರು.
ಛಾಯಾಗ್ರಾಹಕರು ಎಂಬಂತೆ ತಮ್ಮ ತಮ್ಮ ಕುಟುಂಬ ಸದಸ್ಯರನ್ನು ಜಾನಪದ ಕಲಾ ತಂಡಗಳ ಸಮೀಪ ನಿಲ್ಲಿಸಿ ಫೋಟೋ ತೆಗೆಸಿಕೊಳ್ಳುತ್ತಿದ್ದರು. ದಸರಾ ಮೆರವಣಿಗೆಯಲ್ಲಿ ಸಾರ್ವಜನಿಕರು ಸುಳಿದಾಡದಂತೆ ನೋಡಿಕೊಳ್ಳುವುದಾಗಿ ಹೇಳಿದ್ದ ನಗರ ಪೊಲೀಸ್ ಆಯುಕ್ತ ಡಾ. ಎಂ.ಎ. ಸಲೀಂ ಈ ಎಲ್ಲಾ ಘಟನೆ ನಡೆಯುವಾಗ ನಾಪತ್ತೆಯಾಗಿದ್ದರು.
ಮೆರವಣಿಗೆಯುದ್ದಕ್ಕೂ ಬಂದ ಶ್ಯಾಂ: ಜಂಬೂಸವಾರಿ ಮೆರವಣಿಗೆ ಉದ್ದಕ್ಕೂ ಪಾಲಿಕೆ ಸದಸ್ಯ ಸ್ನಾಕ್ ಶ್ಯಾಂ ಬಂದರು. ಪೇಟ ಧರಿಸಿ ಕಚ್ಚೆ ಹಾಕಿಕೊಂಡು ಬಂದ ಶ್ಯಾಂ ಅವರು ಜಾನಪದ ಕಲಾತಂಡಗಳೊಂದಿಗೆ ಐದು ಕಿ.ಮೀ. ದೂರ ನಡೆದು ಬಂದರು.
ಜಂಬೂಸವಾರಿ ಭದ್ರತೆಗೆ 6 ಸಾವಿರ ಪೊಲೀಸರ ನಿಯೋಜನೆ
ಮೈಸೂರು: ದಸರಾ ಜಂಬೂಸವಾರಿ ಭದ್ರತೆಗಾಗಿ 6 ಸಾವಿರಕ್ಕೂ ಹೆಚ್ಚಿನ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸೋಮವಾರ ನಿಯೋಜಿಸಲಾಗಿತ್ತು. ಸಿಎಆರ್, ಡಿಎಆರ್, ಅರಮನೆ ಮತ್ತು ಅಶ್ವರೋಹಿ ದಳ, ಸಂಚಾರ ಪೊಲೀಸರು, ಕೆಎಸ್ಆರ್ಪಿ, ಗೃಹರಕ್ಷಕ ದಳ, ಸಿವಿಲ್ ಪೊಲೀಸರು, 400 ಜನ ಎನ್ಸಿಸಿ ಕೆಡೆಟ್ ಹಾಗೂ 50 ಮಂದಿ ಖಾಸಗಿ ಭದ್ರತಾ ಸಿಬ್ಬಂದಿಯನ್ನು ದಸರಾ ಕರ್ತವ್ಯಕ್ಕಾಗಿ ನಿಯೋಜಿಸಲಾಗಿತ್ತು. ಅರಮನೆ ಹಾಗೂ ಜಂಬೂಸವಾರಿ ಮಾರ್ಗದಲ್ಲಿ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಪೊಲೀಸ್ ಆಯುಕ್ತ ಡಾ. ಎಂ.ಎ. ಸಲೀಂ, ಡಿಸಿಪಿಗಳಾದ ಎ.ಎನ್. ರಾಜಣ್ಣ, ಎಂ.ಎಂ. ಮಹದೇವಯ್ಯ, ಪ್ರಭಾಶಂಕರ ಭದ್ರತೆಯ ನೇತೃತ್ವ ವಹಿಸಿದ್ದರು.
ವೈಮಾನಿಕ ಕಣ್ಗಾವಲು ಕಾಣಲಿಲ್ಲ: ಮಾನವ ರಹಿತ ವೈಮಾನಿಕ ವಾಹನದಿಂದ ಜಂಬೂಸವಾರಿ ಮೇಲೆ ಕಣ್ಗಾವಲು ಇರಿಸಲಾಗುವುದು ಎಂದು ಪೊಲೀಸ್ ಆಯುಕ್ತ ಡಾ. ಸಲೀಂ ಹೇಳಿದ್ದರು. ಆದರೆ, ಅರಮನೆ ಆವರಣದಲ್ಲಿ ಯಾವುದೇ ರೀತಿಯ ವೈಮಾನಿಕ ವಾಹನ ಕಾಣ ಸಿಗಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

