ಮೈಸೂರು

ಮಹಿಷಾಸುರ ಮರ್ದಿನಿ ರಮ್ಯಸುತೆ...

Published On :

ಕ.ಪ್ರ.ವಾರ್ತೆ ಮೈಸೂರು ಅ. 14
ಚಾಮುಂಡೇಶ್ವರಿಯು ಮಹಿಷಾಸುರನ ಸಂಹರಿಸುವ ನೃತ್ಯರೂಪಕವನ್ನು 'ಆಪ್ತಮಿತ್ರ' ಚಲನಚಿತ್ರ ಖ್ಯಾತಿಯ ಮೈಸೂರಿನ ಶ್ರೀಧರ್ ಜೈನ್ ಅವರು ಅರಮನೆ ಅಂಗಳದಲ್ಲಿ ಭಾನುವಾರ ಪ್ರದರ್ಶಿಸಿದರು.
ದಸರಾ ಮಹೋತ್ಸವದ ಅಂಗವಾಗಿ ಸಾಂಸ್ಕೃತಿಕ ಉಪಸಮಿತಿ ಅರಮನೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅರಮನೆ ಮುಖ್ಯ ವೇದಿಕೆಯಲ್ಲಿ ಏರ್ಪಡಿಸಿದ್ದ ಮಹಿಷಾಸುರ ಮರ್ದಿನಿ ಎಂಬ ನೃತ್ಯರೂಪಕದಲ್ಲಿ ಜಗನ್ಮಾತೆ ಪಾರ್ವತಿಯು ಮಹಿಷಾಸುರನ ವಧೆಗಾಗಿ ಚಾಮುಂಡೇಶ್ವರಿ ಅವತಾರ ಧರಿಸುವುದು, ಜನರಿಗೆ ಸಂಕಷ್ಟ ನೀಡುತ್ತಿದ್ದ ಆತನ ಅಂತ್ಯಕ್ಕೆ ಕಾದಾಟ ನಡೆಸುವುದು, ಕೊನೆಗೆ ಉತ್ತನಹಳ್ಳಿ ಮಾರಮ್ಮನ ಸಹಾಯ ಪಡೆದು ಸಂಹರಿಸುವ ಕಥಾನಕವನ್ನು ತಂಡದವರು ಅದ್ಭುತವಾಗಿ ಪ್ರದರ್ಶಿಸಿದರು.
ಮುಂಬೈನ ಪ್ರಖ್ಯಾತ ಗಾಯಕ ಪದ್ಮವಿಭೂಷಣ ಪಂಡಿತ್ ಜಸರಾಜ್ ಅವರು ಹಿಂದೂಸ್ತಾನಿ ಸಂಗೀತ ನಡೆಸಿಕೊಟ್ಟರು. ಜೈ ಜೈ ಶ್ರೀದುರ್ಗೆ, ಗೋವಿಂದ ದಾಮೋದರ ಹಾಗೂ ನಮೋ ಭಗವತೇ ವಾಸುದೇವಾಯ ನಮಃ ಎಂಬ ಮೂರು ಗೀತೆಗಳನ್ನು ಹಾಡಿದರು.
ಇದಕ್ಕೂ ಮುನ್ನ ಗುಜರಾತ್ ಕಲಾವಿದರು ಸಿದ್ದಿ ಧಮಾಲ್ ಎಂಬ ಜನಪದ ನೃತ್ಯವನ್ನು ಪ್ರದರ್ಶಿಸಿ ತಮ್ಮ ನೆಲದ ಸಾಂಪ್ರದಾಯಿಕ ಕಲೆಯ ಸೊಗಡನ್ನು ಮೆರೆದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್, ಶಾಸಕ ವಾಸು, ಎಂ.ಕೆ. ಸೋಮಶೇಖರ್, ಉಪಸಮಿತಿ ಅಧ್ಯಕ್ಷ ಕೆ.ಆರ್. ಮೋಹನ್ ಕುಮಾರ್, ಉಪ ವಿಶೇಷಾಧಿಕಾರಿ ಡಾ. ಸಿ.ಜಿ. ಬೆಟ್‌ಸೂರ್‌ಮಠ್ ಹಾಗೂ ಸದಸ್ಯ ಕಾರ್ಯದರ್ಶಿ ನಿರ್ಮಲಾ ಮಠಪತಿ ಇದ್ದರು. ಜನರು ಎಂದಿನಂತೆ ಕಿಕ್ಕಿರಿದು ನೆರೆದಿದ್ದರು.
ವಿವಿಧೆಡೆ ಕಾರ್ಯಕ್ರಮ: ಕುವೆಂಪುನಗರದ ಗಾನಭಾರತೀ ವೀಣೆ ಶೇಷಣ್ಣ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಣಿಪುರಿ ತಂಡದವರು ಲಯ್ ಹರಬ್ಬ ನೃತ್ಯವನ್ನೂ, ಹಾಸನದ ಪ್ರಭಾಮಣಿ ಮಂಜುನಾಥ್ ಜೈನ್ ಅವರು ಸುಗಮ ಸಂಗೀತವನ್ನೂ, ಮೈಸೂರಿನ ವೈ. ಅಕ್ಷತಾ ಅವರು ಭರತನಾಟ್ಯವನ್ನೂ ಪ್ರದರ್ಶಿಸಿದರು. ವಿನೋಬಾ ರಸ್ತೆಯಲ್ಲಿರುವ ಕಲಾಮಂದಿರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಸ್ಸಾಂ ಕಲಾವಿದರು ಕುಸಾನು ನೃತ್ಯವನ್ನೂ, ಮೈಸೂರಿನ ವೀರಭದ್ರಯ್ಯ ಹಿರೇಮಠ ಅವರು ಹಿಂದೂಸ್ತಾನಿ ಸಂಗೀತವನ್ನೂ ಹಾಗೂ ಬೆಂಗಳೂರಿನ ಎಚ್.ಎಸ್. ಗುರುರಾಜ್ ಭರತನಾಟ್ಯ ಪ್ರದರ್ಶಿಸಿದರು.
ಶಿವರಾಂಪೇಟೆಯ ಚಿಕ್ಕ ಗಡಿಯಾರ ವೃತ್ತದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಾಗಪುರದ ದಕ್ಷಿಣ ವಲಯದ ಸಾಂಸ್ಕೃತಿಕ ಕೇಂದ್ರದ ಕಲಾವಿದರು ಅರ್ಜುನ ನೃತ್ಯ ಹಾಗೂ ಕೇರಳ ಕಲಾವಿದರು ಪಟಿಯಾನಿ ನೃತ್ಯವನ್ನೂ ಪ್ರದರ್ಶಿಸಿದರು. ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪಂಜಾಬ್ ಕಲಾವಿದರು ಬ್ರಾಂಗಾ ನೃತ್ಯ, ಶಿವಮೊಗ್ಗ ಶ್ರೀಧರ ಸಾಗರ್ ಅವರು ಸ್ಯಾಕ್ಸೋಪೋನ್ ವಾದನವನ್ನೂ ಹಾಗೂ ಬೆಂಗಳೂರಿನ ನಾಂಗೇಂದ್ರ ಶಾಸ್ತ್ರಿ ತಂಡದವರು ಕರ್ನಾಟಕ ಸಂಗೀತವನ್ನೂ ನಡೆಸಿಕೊಟ್ಟರು. ಪುರಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬಳ್ಳಾರಿಯ ಬೆಳಗಲಿ ವೀರಣ್ಣ ತಂಡದವರು ತೊಗಲು ಬೊಂಬೆ, ಸಂತೆಮಾರನ ಹಳ್ಳಿಯ ಮಲೈ ಮಹದೇಶ್ವರ ನಾಟಕ ತಂಡದ ಹಾಗೂ ಮೈಸೂರಿನ ದಯಾನಂದ ತಂಡದವರು ಸಾಮಾಜಿಕ ನಾಟಕ ಪ್ರದರ್ಶಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.