ಮೈಸೂರು

10 ಮಂದಿಗೆ ಪೌರಬಂಧು ಪ್ರಶಸ್ತಿ ಪ್ರದಾನ

Published On :

ಕ.ಪ್ರ.ವಾರ್ತೆ ಮೈಸೂರು ಅ. 17
ನಾಡಹಬ್ಬ ದಸರಾ ಮಹೋತ್ಸವದ ವೇಳೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಹತ್ತು ಮಂದಿ ಪೌರ ಕಾರ್ಮಿಕರಿಗೆ ದಸರಾ ವ್ಯವಸ್ಥೆ ಮತ್ತು ಸ್ವಚ್ಛತಾ ಉಪ ಸಮಿತಿ ವತಿಯಿಂದ ಪೌರಬಂಧು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಪಾಲಿಕೆಯ ಹಳೆ ಕೌನ್ಸಿಲ್ ಸಭಾಂಗಣದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮೇಯರ್ ಎನ್.ಎಂ. ರಾಜೇಶ್ವರಿ ಅವರು ಪೌರ ಕಾರ್ಮಿಕರಾದ ಕದರಿ, ವೆಂಕಟಮ್ಮ, ಮಹಾದೇವಿ, ಗೋಪಾಲ, ಶಂಕರ, ಪೆರುಮಾಳ್, ಚೆನ್ನಮ್ಮ, ನಂಜಮ್ಮ, ನಾಗೇಶ್ ಮತ್ತು ಮಂಜು ಅವರನ್ನು ಅಭಿನಂದಿಸಿದರು.
ಬಳಿಕ ಮಾತನಾಡಿದ ರಾಜೇಶ್ವರಿ ಅವರು ಮೈಸೂರು ನಗರದ ಸ್ವಚ್ಛತಾ ವ್ಯವಸ್ಥೆ ದೇಶಕ್ಕೆ ಮಾದರಿ ಆಗಬೇಕು ಎಂದರು.
ನಾಡಹಬ್ಬ ದಸರಾ ವೇಳೆ ಸ್ವಚ್ಛತಾ ಕಾರ್ಯವನ್ನು ಅತ್ಯುತ್ತಮವಾಗಿ ನಿರ್ವಹಿಸಿದ್ದಕ್ಕೆ ಅವರು ಕೃತಜ್ಞತೆ ಸಲ್ಲಿಸಿದರು.
ಉಪ ಮೇಯರ್ ವಿ. ಶೈಲೇಂದ್ರ, ಉಪ ಸಮಿತಿ ಅಧ್ಯಕ್ಷ ಡಾ. ಬಿ.ಜೆ. ವಿಜಯಕುಮಾರ್, ಕಾರ್ಯಾಧ್ಯಕ್ಷ ಲೋಕನಾಥ್, ಸದಸ್ಯ ಕಾರ್ಯದರ್ಶಿ ಹಾಗೂ ಪಾಲಿಕೆ ಆರೋಗ್ಯಾಧಿಕಾರಿ ಡಾ. ಡಿ.ಜಿ. ನಾಗರಾಜ್, ಉಪಾಧ್ಯಕ್ಷ ಜೆ.ಎನ್. ಲಕ್ಷ್ಮಣ್ ಇದ್ದರು.
ದಸರಾ ವೇಳೆ ನೂರಾರು ಕಾರ್ಮಿಕರು ಹಗಲು- ರಾತ್ರಿ ಎನ್ನದೇ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿದ್ದರು. ಅವರನ್ನು ಉತ್ತೇಜಿಸಲೆಂದೇ ಉಪ ಸಮಿತಿಯು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ 10 ಮಂದಿಗೆ ಪೌರಬಂಧು ಪ್ರಶಸ್ತಿ ನೀಡುವುದಾಗಿ ಪ್ರಕಟಿಸಿತ್ತು. ಅದರಂತೆ ದಸರೆ ಮುಗಿದ ಎರಡು ದಿನಗಳಲ್ಲಿ ಪ್ರಶಸ್ತಿ ನೀಡಿ ತನ್ನ ಮಾತು ಉಳಿಸಿಕೊಂಡಿದೆ.

ಗಾಂಧಿ ಶಿಲ್ಪ ಬಜಾರ್
ಕ.ಪ್ರ.ವಾರ್ತೆ ಮೈಸೂರು ಅ. 17
ದೀಪಾವಳಿ ಹಬ್ಬದ ಪ್ರಯುಕ್ತ ಆಯೋಜಿರುವ ಗಾಂಧಿ ಶಿಲ್ಪ ಬಜಾರ್ ಬೃಹತ್ ವಸ್ತು ಪ್ರದರ್ಶನವು ಅ.18ರಿಂದ 27ರವರೆಗೆ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಜೆಎಸ್ಎಸ್ ಮೈಸೂರು ಅರ್ಬನ್ ಹಾತ್ನಲ್ಲಿ ನಡೆಯಲಿದೆ.
ಕೇಂದ್ರ ಜವಳಿ ಮಂತ್ರಾಲಯದ ಸಹಯೋಗದಲ್ಲಿ ಏರ್ಪಡಿಸಿರುವ ಈ ಮೇಳವನ್ನು 18ರಂದು ಸಂಜೆ 4ಕ್ಕೆ ಜವಳಿ ಸಚಿವ ಬಾಬುರಾವ್ ಚಿಂಚನಸೂರ್ ಉದ್ಘಾಟಿಸುವರು ಎಂದು ಜೆಎಸ್ಎಸ್ ಮಹಾವಿದ್ಯಾಪೀಠದ ಯೋಜನಾ ವಿಭಾಗದ ಮುಖ್ಯ ಕಾರ್ಯನಿರ್ವಾಹಕ ಬಿ.ಆರ್. ಉಮಾಕಾಂತ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಕಳೆದ 6 ವರ್ಷಗಳಿಂದ ಗಾಂಧಿ ಶಿಲ್ಪ ಬಜಾರ್ ಮೇಳವನ್ನು ಏರ್ಪಡಿಸುತ್ತಾ ಬಂದಿದ್ದು, ಈ ಬಾರಿ ದೇಶದ ನಾನಾ ಭಾಗಗಳಿಂದ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ಪಡೆದ ಕುಶಲಕರ್ಮಿಗಳು 150 ಮಳಿಗೆಯನ್ನು ತೆರೆಯಲಿದ್ದು, ತಮ್ಮ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವರು ಎಂದರು.  
ಮೇಳದಲ್ಲಿ ರೇಷ್ಮೆ ಸೀರೆಗಳು, ಸಿದ್ಧ ಉಡುಪುಗಳು, ಪೀಠೋಪಕರಣಗಳು, ಕೈಮಗ್ಗ ವಸ್ತ್ರಗಳು, ಕರಕುಶಲ ಕಲಾಕೃತಿಗಳು ಸೇರಿದಂತೆ ವಿವಿಧ ವಸ್ತುಗಳನ್ನು ಮಾರಾಟಕ್ಕಿಡಲಾಗುವುದು ಎಂದರು. ಮೈಸೂರಿನ ಕರಕುಶಲ ಆಯುಕ್ತರ ಕಚೇರಿಯ ಸಹಾಯಕ  ನಿರ್ದೇಶಕ ಶಶಿಧರ್, ಜೆಎಸ್ಎಸ್ ಮೈಸೂರು ಅರ್ಬನ್ ಹಾತ್ ಯೋಜನಾಧಿಕಾರಿ ಶಿವನಂಜಸ್ವಾಮಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.