ಮನುಷ್ಯರನ್ನಾಗಿಸುವ ಕಲಾ ಪ್ರಕಾರಗಳು
ಕ.ಪ್ರ.ವಾರ್ತೆ, ಮೈಸೂರು, ಅ. 20-
ನಾಟಕ, ಸಂಗೀತ, ನೃತ್ಯ ಕಲಾ ಪ್ರಕಾರಗಳು ನಮ್ಮನ್ನು ಮಡಿಯಿಂದ ಮೈಲಿಗೆ ಮಾಡಿ ನಂತರ ಮನುಷ್ಯರನ್ನಾಗಿ ಮಾಡುತ್ತವೆ ಎಂದು ರಂಗ ಸಮಾಜದ ಸದಸ್ಯ ಹಾಗೂ ಹಿರಿಯ ನಟ ಪ್ರೊ. ಜಿ.ಕೆ. ಗೋವಿಂದರಾವ್ ಅಭಿಪ್ರಾಯಪಟ್ಟರು.
ರಂಗಾಯಣವು ಭೂಮಿಗೀತದಲ್ಲಿ ಆಯೋಜಿಸಿರುವ ಬಿ.ವಿ. ಕಾರಂತ ಕಾಲೇಜು ಯುವ ರಂಗೋತ್ಸವಕ್ಕೆ ಭಾನುವಾರ ಸಂಜೆ ಚಾಲನೆ ನೀಡಿ ಮಾತನಾಡಿದ ಅವರು, ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ ನಾಟಕ ಆಡುವವರು ಯಾರೆಂದರೆ ಕೆಲಸಕ್ಕೆ ಬಾರದವರು ಎಂದು ಬಿಂಬಿಸಲಾಗಿದೆ. ಆದರೆ, ನಾಟಕ, ಸಂಗೀತವಿಲ್ಲದಿದ್ದರೆ ನಾವೆಲ್ಲ ಮಡಿಯಾಗಿಯೇ ಉಳಿಯುತ್ತಿದ್ದೆವು. ಈಗ ನಾಟಕ ಆಡಿ ಮಡಿಯಿಂದ ಮೈಲಿಗೆಯಾಗಿ ಮನುಷ್ಯರಾಗಿದ್ದೇವೆ. ಬೀಸುವ ಗಾಳಿ, ನಗುವ ಮಗುವಿಗೆ ಪ್ರತಿ ಸ್ಪಂದಿಸುವುದೇ ಜೀವನ ಎಂದರು.
ಇತ್ತೀಚಿನ ದಿನಗಳಲ್ಲಿ ವಿಶ್ವವಿದ್ಯಾನಿಲಯಗಳ ನೀತಿ, ನಿಯಮಗಳು ಮಕ್ಕಳನ್ನು ಆರೋಗ್ಯವಾಗಿ ಬಳಸಬೇಕೆಂಬ ಹಠದಿಂದ ನಾಟಕ, ಸಂಗೀತ, ನೃತ್ಯ, ಆಟಗಳಿಂದ ವಿನಾಯಿತಿ ನೀಡಿ ಕೇವಲ ಪಾಠ, ಪ್ರವಚನ, ಪರೀಕ್ಷೆಗಳನ್ನೇ ನಡೆಸುತ್ತಿವೆ. ಶೈಕ್ಷಣಿಕ ಆರೋಗ್ಯವಂತರನ್ನಾಗಿ ಮಾಡಲು ವಿದ್ಯಾರ್ಥಿಗಳನ್ನು ಚಿತ್ತ ಭ್ರಮಣೆಗೆ ತಳ್ಳುತ್ತಿವೆ. ರಂಗಾಯಣ ಕಾಲೇಜು ವಿದ್ಯಾರ್ಥಿಗಳನ್ನು ಸೇರಿಸಿ ನಾಟಕ ಆಡಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹುಚ್ಚು ಇದ್ದಾಗಲೇ ಕಲಿಯಲು ಸಾಧ್ಯ: ಬಿ.ವಿ. ಕಾರಂತರು ಮಹಾ ಹುಚ್ಚರಾಗಿದ್ದರು. ಹುಚ್ಚತನ ಇದ್ದಾಗಲೆ ಕಲೆಯನ್ನು ಕಲಿಯಲು ಸಾಧ್ಯ. ಅವರೊಬ್ಬ ಮಾದರಿ ವ್ಯಕ್ತಿಯಾಗಿದ್ದರು. ಅವರ ಬಳಿಕ ಪ್ರಸನ್ನ, ಸಿ. ಬಸವಲಿಂಗಯ್ಯ, ಚಿದಂಬರರಾವ್ ಜಂಬೆಯವರು ಕಳಶಪ್ರಾಯರಾಗಿದ್ದರು. ನಟರು ಮತ್ತು ಪ್ರೇಕ್ಷಕರು ರಂಗಾಯಣದ ಬೆಳವಣಿಗೆಗೆ ಸ್ಫೂರ್ತಿಯಾಗಿದ್ದಾರೆ. ನಟರಿಗೆ ನೆನಪು, ಅನುಭವ ಇದ್ದಲ್ಲಿ ರಂಗಭೂಮಿಗೆ ನೆಲೆ ಒದಗಿಸಲು ಸಾಧ್ಯ. ಕೇವಲ ಸಂಭಾಷಣೆಯನ್ನು ಜನರ ಮುಂದೆ ಹೇಳಿ ಹೋಗುವುದು ನಟನೆಯಲ್ಲ. ಹೀಗಾಗಿ ಎಲ್ಲವನ್ನು ಕಲಿತು ಮನುಷ್ಯರಾಗೋಣ ಎಂದು ಹೇಳಿದರು.
ಮಾನವೀಯತೆ ಮೆರೆಯೋಣ: ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಚಿಂತಕ ರುದ್ರಪ್ಪ ಅನಗವಾಡಿ ಮಾತನಾಡಿ, ಸಮಾಜದಲ್ಲಿ ಸಮಾನತೆ, ಅಭಿವೃದ್ಧಿ ತರಲು ಸರ್ಕಾರ ಕೋಟ್ಯಂತರ ರು. ಖರ್ಚು ಮಾಡುತ್ತಿದೆ. ಅದರಿಂದ ಆರ್ಥಿಕ ಬಿಕ್ಕಟ್ಟು ಎದುರಾಯಿತು ಎಂಬಿತ್ಯಾದಿ ಮಾತುಗಳೆಲ್ಲ ಕೇಳಿ ಬರುತ್ತವೆ. ಆರ್ಥಿಕ ಬಿಕ್ಕಟ್ಟಿಗೆ ಸಾಮಾಜಿಕ ಸಮಸ್ಯೆಗಳೇ ಕಾರಣ. ಕಲೆಯಲ್ಲಿ ಮಾನವೀಯತೆ ಮೆರೆಯೋಣ ಎಂದು ತಿಳಿಸಿದರು.
ನಟ ಮಂಡ್ಯ ರಮೇಶ್ ಮಾತನಾಡಿ, ರಂಗಭೂಮಿಗೆ ಗಟ್ಟಿತನ ಒದಗಿಸಿದ್ದೆ ಕಾಲೇಜು ರಂಗಭೂಮಿ. ಕಾರಂತರಿಗೆ ಕಾಲೇಜು ರಂಗಭೂಮಿಯೊಂದಿಗೆ ಅತೀವ ಪ್ರೀತಿಯಿತ್ತು. ಕಾಲೇಜು ರಂಗೋತ್ಸವ ನಡೆಯುತ್ತಿರುವುದು ಒಳ್ಳೆಯದು. ಕಾರಂತರ ದೂರದೃಷ್ಟಿತ್ವ, ಪ್ರಸನ್ನ, ಬಸವಲಿಂಗಯ್ಯ, ಜಂಬೆಯವರ ಆಶೀರ್ವಾದದಿಂದ ಜನ್ನಿ ನಿರ್ದೇಶಕರಾಗಿದ್ದಾರೆ. ರಂಗ ಸಮಾಜವು ಸಂತಸದಿಂದ ಅವರನ್ನು ಆಯ್ಕೆ ಮಾಡಿದೆ. ರಂಗಾಯಣದ ಮಹತ್ವ ಮತ್ತೊಮ್ಮೆ ಮರುಕಳಿಸಲಿ ಎಂದು ಆಶಿಸಿದರು. ನಿರ್ದೇಶಕ ಎಚ್. ಜನಾರ್ದನ್ ಅಧ್ಯಕ್ಷತೆ ವಹಿಸಿದ್ದರು. ಉಪ ನಿರ್ದೇಶಕ ಎಸ್.ಐ. ಭಾವಿಕಟ್ಟಿ ಸ್ವಾಗತಿಸಿದರು. ಶಿಬಿರ ಸಂಚಾಲಕ ಸರೋಜಾ ಹೆಗ್ಡೆ ವಂದಿಸಿದರು. ನಂತರ ಪ್ರಾಧ್ಯಾಪಕ ಡಾ. ಶಿರಗಾನಹಳ್ಳಿ ಶಾಂತನಾಯ್ಕ ರಚನೆಯ, ಕಿಟ್ಟಿ ಗಾಂವ್ಕರ್ ನಿರ್ದೇಶನದ ನಮ್ಮೊಳಗಿನ ಪಾತ್ರಗಳು ನಾಟಕವನ್ನು ಎಸ್ಡಿಎಂ ಮಹಿಳಾ ಪದವಿ ಕಾಲೇಜು ವಿದ್ಯಾರ್ಥಿನಿಯರು ಪ್ರಸ್ತುತಪಡಿಸಿದರು.್ಙ
ವೈನ್ ಉತ್ಸವದಾಖಲೆ ವಹಿವಾಟು
ಮೈಸೂರು: ನಗರದ ತಾಳೆ ಬೆಳೆ ಯೋಜನಾ ಕಚೇರಿ ಆವರಣದಲ್ಲಿ ನಡೆದ ಮೈಸೂರು ದ್ರಾಕ್ಷರಸ ಉತ್ಸವವು ಭಾನುವಾರ ಮುಕ್ತಾಯಗೊಂಡಿದ್ದು, ಒಟ್ಟು ಮೂರು ದಿನಗಳಿಂದ ಸುಮಾರು 50 ಲಕ್ಷ ವಹಿವಾಟು ನಡೆದಿದೆ. ಆರಂಭದ ದಿನಗಳಿಂದ ಇಲ್ಲಿಯವರೆಗೂ 70 ಸಾವಿರಕ್ಕೂ ಅಧಿಕ ಮಂದಿ ಭೇಟಿ ನೀಡಿ ವೈನ್ ಬಾಟಲಿಗಳನ್ನು ಖರೀದಿಸಿದ್ದಾರೆ. ನಿರೀಕ್ಷೆಗಿಂತ ಹೆಚ್ಚಿನ ಜನರು ಆಗಮಿಸಿದ್ದರಿಂದ ದ್ರಾಕ್ಷಿ ಬೆಳೆಗೆ ಉತ್ತೇಜನ ನೀಡುವುದರೊಂದಿಗೆ ಆರೋಗ್ಯ ವೃದ್ಧಿಗೂ ಪೂರಕ ವಾತಾವರಣ ಸೃಷ್ಟಿಯಾಗಿದೆ. ಮೈಸೂರಿನ ಜನರು ಅತ್ಯಂತ ಉತ್ಸುಕರಾಗಿ ಉತ್ಸವದಲ್ಲಿ ಭಾಗವಹಿಸಿದ್ದಕ್ಕಾಗಿ ಅಭಿನಂದನೆ ಸಲ್ಲಿಸುತ್ತೇವೆ ಎಂದು ಕರ್ನಾಟಕ ದ್ರಾಕ್ಷಾರಸ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಡಾ. ಬಿ. ಕೃಷ್ಣ ತಿಳಿಸಿದ್ದಾರೆ. ಮುಂದಿನ ತಿಂಗಳು ಬೆಳಗಾವಿಯಲ್ಲಿ ಹಾಗೂ ನಂತರ ಮಂಗಳೂರಿನಲ್ಲಿ ವೈನ್ ಉತ್ಸವ ಆಯೋಜಿಸಲಾಗುವುದು. ಡಿಸೆಂಬರ್ನಲ್ಲಿ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ವೈನ್ ಉತ್ಸವ ನಡೆಯಲಿದೆ. ಹಾಗೆ ಮುಂದಿನ ವರ್ಷದಿಂದ ದಸರೆಯಲ್ಲೂ ಸಹ ಮೈಸೂರಿನಲ್ಲಿ ವೈನ್ ಉತ್ಸವ ಆಯೋಜಿಸಲು ಆಡಳಿತ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

