ಮೈಸೂರು

ನಾಟಿಕೋಳಿ ಮೊಟ್ಟೆಗಳ ನೋಡಿರಣ್ಣ

Published On :

ಕ.ಪ್ರ.ವಾರ್ತೆ ,  ಮೈಸೂರು ,  ಅ. 24
ಕೋಳಿ ಮೊದಲೋ, ಮೊಟ್ಟೆ ಮೊದಲೋ ಎನ್ನುವ ಪ್ರಶ್ನೆಗೆ ಉತ್ತರ ಹುಡುಕುವುದು ಬಲು ಸುಲಭವಲ್ಲ. ಆದರೆ ಕೋಳಿಗಳು ಇಡುವ ಮೊಟ್ಟೆ ದೊಡ್ಡದೋ ಸಣ್ಣದೋ ಎಂಬುದನ್ನು ಮಾತ್ರ ಸುಲಭವಾಗಿ ಹೇಳಬಹುದು.
ಸಾಮಾನ್ಯವಾಗಿ ಕೋಳಿಗಳು ಇಡುವ ಮೊಟ್ಟೆಗಳ ಗಾತ್ರ ಒಂದೇ ಆಗಿರುತ್ತದೆ. ಇಲ್ಲವೇ ಅಲ್ಪ ಪ್ರಮಾಣದಲ್ಲಿ ವ್ಯತ್ಯಾಸ ಇರುತ್ತದೆ. ಆದರೆ ಇಲ್ಲೊಂದು ಕೋಳಿ ಇಡುವ ಮೊಟ್ಟೆಯ ಗಾತ್ರ ನೋಡಿದರೆ ನಿಮಗೆ ಆಶ್ಚರ್ಯವಾಗದಿರದು.
3 ಗ್ರಾಂ, 15 ಗ್ರಾಂ, 26 ಗ್ರಾಂ, 31 ಗ್ರಾಂ ಹಾಗೂ 33 ಗ್ರಾಂ ಹೀಗೆ ಹಂತ ಹಂತವಾಗಿ ದಿನಕ್ಕೊಂದು ಗಾತ್ರದ ಮೊಟ್ಟೆ ಇಡುತ್ತಿರುವುದು ಇದರ ವೈಶಿಷ್ಟ್ಯ. ಮಾರುಕಟ್ಟೆಯಲ್ಲಿ ದೊರಕುವ ನಾಟಿಕೋಳಿ ಮೊಟ್ಟೆ ತೂಕ 40 ರಿಂದ 50 ಗ್ರಾಂ. ಫಾರಂಕೋಳಿ ಮೊಟ್ಟೆ ತೂಕ 60 ರಿಂದ 70 ಗ್ರಾಂ ಇರುತ್ತದೆ. ಕಡಿಮೆ ಎಂದರೆ 10 ಗ್ರಾಂ ವ್ಯತ್ಯಾಸವಾಗಬಹುದಷ್ಟೆ ಎಂಬುದು ಪರಿಣಿತರ ಮಾತು.
ಸಹಜ ತೂಕದ ಮೊಟ್ಟೆ ಇಡುವುದನ್ನು ನೋಡಿದ್ದ ಈ ಕೋಳಿಯ ಮಾಲೀಕರಾದ ಬಿಜೆಪಿ ಮುಖಂಡ ಪಿ. ಪುರುಷೋತ್ತಮ್ ಅವರಿಗೆ ಇದು ಅಚ್ಚರಿ ತಂದಿದೆ. ಇವರು ಮೈಸೂರಿನ ಚಾಮರಾಜ ಮೊಹಲ್ಲಾದ ಮಡಿವಾಳರ ಬೀದಿ ನಿವಾಸಿ. ಕಳೆದ 15- 20 ವರ್ಷಗಳಿಂದ ನಾಟಿಕೋಳಿ ಸಾಕುವ ಹವ್ಯಾಸ ಇರಿಸಿಕೊಂಡಿದ್ದಾರೆ. ಜತೆಗೆ ಪಕ್ಷಿಗಳ ಪ್ರಿಯರು ಆದ ಪುರುಷೋತ್ತಮ್, ಕುಕ್ಕರಹಳ್ಳಿ ಕೆರೆಗೆ ವಾಯು ವಿಹಾರ ವೇಳೆ ಪಕ್ಷಿಗಳಿಗೆ ಆಹಾರ ಕೊಡುವ ಕೂಡ ಕೆಲಸವನ್ನು ಮಾಡುತ್ತಿದ್ದಾರೆ. ಅಲ್ಲಿನ ಆವರಣದಲ್ಲಿ ಡಬ್ಬಗಳನ್ನಿಟ್ಟು, ಅದರಲ್ಲಿ ಪುರಿ, ಕಡಲೆ, ಚೌಚೌ ಹಾಗೂ ಮನೆಯಲ್ಲಿ ಮಾಡಿದ ತಿಂಡಿ ತಂದು ಹಾಕುತ್ತಾರೆ ಹಾಗೂ ಅದನ್ನು ಪಕ್ಷಿಗಳು ತಿನ್ನವುದನ್ನು ನೋಡಿ ಸಂತಸ ಪಡುತ್ತಾರೆ.
ಮನೆಯಲ್ಲಿ 15- 20 ಕೋಳಿಗಳನ್ನು ನಿರಂತರವಾಗಿ ಸಾಕುತ್ತಾ ಬಂದಿದ್ದಾರೆ. ಕೋಳಿ ಹಾಗೂ ಮೊಟ್ಟೆಗಳನ್ನು ತಮ್ಮ ಕುಟುಂಬಕ್ಕೆ ಉಪಯೋಗಿಸಿಕೊಳ್ಳುತ್ತಾರೆ. ಈ ವಿಚಿತ್ರ ಗಾತ್ರದ ಮೊಟ್ಟೆ ಇಡುವ ಕೋಳಿಯನ್ನು ನಂಜುಮಳಿಗೆ ಬಳಿ ಉದ್ಬೂರಿನ ರೈತರೊಬ್ಬರಿಂದ ಖರೀದಿಸಿದರಂತೆ. ಇದೀಗ ಅಚ್ಚರಿ ತರಿಸುವ ಮೊಟ್ಟೆಗಳನ್ನು ಹಾಗೂ ಆ ಕೋಳಿಯನ್ನು ನೋಡಲು ಜನರು ಅವರ ಮನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರಂತೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.