ಮೈಸೂರು

ಬೃಹತ್ ಮೈಸೂರಿಗೆ ಹಲವು ಸಲಹೆ

Published On :

ಕ.ಪ್ರ.ವಾರ್ತೆ ,  ಮೈಸೂರು ,  ಅ. 24
ಬೃಹತ್ ಮೈಸೂರು ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ಎಸಿಐಸಿಎಂ ಮತ್ತು ಎಂಜಿನಿಯರ್‌ಗಳ ಸಂಸ್ಥೆ ಅಗತ್ಯ ಸಲಹೆ ಸೂಚನೆ ನೀಡಿದೆ.
ಮೈಸೂರು ನಗರ ಪಾಲಿಕೆಯನ್ನು ಬೃಹತ್ ಮಹಾನಗರ ಪಾಲಿಕೆಯಾಗಿ ಪರಿವರ್ತಿಸುವ ಅನಿವಾರ್ಯತೆ ಇದೆ. ಮೈಸೂರು ಮತ್ತು ಬೆಂಗಳೂರು ಜೋಡಿ ರೈಲು ಮಾರ್ಗ ಮತ್ತು ಹೆದ್ದಾರಿ ಅಭಿವೃದ್ಧಿ ಆಗುತ್ತಿರುವುದರಿಂದ ಮೈಸೂರಿನ ಬೆಳವಣಿಗೆ ವೇಗವಾಗಲಿದೆ. ನರ್ಮ್ ಯೋಜನೆ ಮೂಲಕ ಮೈಸೂರು ಪ್ರಗತಿ ಹೊಂದುತ್ತಿರುವುದು ಮತ್ತು ಮೈಸೂರು ಸುತ್ತಮುತ್ತಲ ಬಡಾವಣೆ ನಿವಾಸಿಗಳು ಮೂಲ ಸೌಲಭ್ಯವಿಲ್ಲದೆ ನರಳುತ್ತಿರುವುದರಿಂದ ಬೃಹತ್ ಮಹಾನಗರ ಪಾಲಿಕೆಯಾಗಿ ಪರಿವರ್ತಿಸುವ ಅಗತ್ಯವಿದೆ ಎಂದು ಎಸಿಐಸಿಎಂ ಸಂಚಾಲಕ ಎಂ. ಲಕ್ಷ್ಮಣ್ ತಿಳಿಸಿದರು.
ಎಂಜಿನಿಯರ್‌ಗಳ ಸಂಸ್ಥೆಯಲ್ಲಿ ಗುರುವಾರ ಆಯೋಜಿಸಿದ್ದ ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಮೈಸೂರು ಸುತ್ತಮುತ್ತಲಿನ 16 ಗ್ರಾಪಂ ವ್ಯಾಪ್ತಿಯ 41 ಗ್ರಾಮಗಳು, ಎಂಡಿಎ ನಿರ್ಮಿಸಿರುವ 13 ಬಡಾವಣೆ ಸೇರಿದರೆ ಮೈಸೂರು ಜನಸಂಖ್ಯೆ 16 ಲಕ್ಷ ದಾಟುತ್ತದೆ. ಆಗ ಮಾತ್ರ ನಗರದ ಅಭಿವೃದ್ಧಿ ಸಾಧ್ಯವಾಗಿ ಸುತ್ತಮುತ್ತಲ ಗ್ರಾಮಗಳಿಗೂ ಮೂಲ ಸೌಲಭ್ಯ ದೊರಕುವಂತೆ ಆಗುತ್ತದೆ ಎಂದು ಹೇಳಿದರು.
ಹೆಚ್ಚಾದ ವ್ಯಾಪ್ತಿ: ಬೃಹತ್ ಮೈಸೂರು ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ಈ ಹಿಂದಿನ ಸರ್ಕಾರ ವಿಷಯ ಪ್ರಸ್ತಾಪಿಸಿತ್ತು. ಕಳೆದ 1995 ರಲ್ಲಿ ಪಾಲಿಕೆ ಸರಹದ್ದನ್ನು 128.28 ಚ.ಕಿ.ಮೀ ವ್ಯಾಪ್ತಿಗೆ ನಿಗದಿಪಡಿಸಲಾಗಿತ್ತು. ಈಗ ಅದರ ವ್ಯಾಪ್ತಿ 250 ಚ.ಕಿ.ಮೀ ವರೆಗೆ ಬೆಳೆದಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣೆಗೂ ಮುನ್ನವೆ ಬೃಹತ್ ಮೈಸೂರು ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ಪ್ರಣಾಳಿಕೆ ಸಿದ್ದಪಡಿಸಿದ್ದರು. ಇದರಲ್ಲಿ ಮೈಸೂರನ್ನು ಪಾರಂಪರಿಕ ನಗರವಾಗಿ ಅಭಿವೃದ್ಧಿ ಪಡಿಸುವುದು ಅವರ ಉದ್ದೇಶವಾಗಿದೆ. ಆಗ ಪಾಲಿಕೆಯ ವಾರ್ಡ್‌ಗಳ ಸಂಖ್ಯೆ 95 ರಿಂದ 105ಕ್ಕೆ ತಲುಪುತ್ತದೆ. ಈ ಎಲ್ಲಾ ವಾರ್ಡ್‌ಗಳ ಅಭಿವೃದ್ಧಿಗೆ ಸುಮಾರು 823 ಕೋಟಿ ವೆಚ್ಚ ಆಗಬಹುದು ಎಂದರು.
ಎಂಡಿಎ ಆಯುಕ್ತ ಎಸ್. ಪಾಲಯ್ಯ ಮಾತನಾಡಿದರು. ಪಾಲಿಕೆಯ ಸಹಾಯಕ ಆಯುಕ್ತ ರಾಜು ಮಾತನಾಡಿ, ಮೈಸೂರು ನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ 41 ಗ್ರಾಮಗಳ ಪೈಕಿ 11 ಗ್ರಾಮಗಳಿಗೆ ಈಗಾಗಲೇ ಮಹಾನಗರ ಪಾಲಿಕೆಯು ಕುಡಿಯುವ ನೀರು ಮತ್ತು ಒಳಚರಂಡಿ ಸೌಲಭ್ಯ ನೀಡುತ್ತಿದೆ ಎಂದು ಹೇಳಿದರು.
ನಿವೃತ್ತ ಎಂಜಿನಿಯರ್ ಎನ್.ಎಸ್. ಚಕ್ರವರ್ತಿ ಮಾತನಾಡಿ, ಮೈಸೂರನ್ನು ಪಾರಂಪರಿಕವಾಗಿ ಮತ್ತು ಬೃಹತ್ ಮಹಾನಗರವಾಗಿ ಬೆಳೆಸುವುದು ಹೇಗೆ ಎಂದು ಪ್ರಶ್ನಿಸಿದರು. ಈ ಬಗ್ಗೆ ಉತ್ತರಿಸಿದ ಎಂ.ಲಕ್ಷ್ಮಣ್ ಕೇಂದ್ರ ಸರ್ಕಾರ ಪರಂಪರಿಕ ಕಟ್ಟಡ ಸಂರಕ್ಷಣೆಗೆ ನೀಡುವ ಹಣವನ್ನು ಮೈಸೂರು ನಗರದ ಕೇಂದ್ರ ಭಾಗಕ್ಕೆ ಮಾತ್ರ ಬಳಸಿಕೊಂಡು, ರಿಂಗ್ ರಸ್ತೆಯ ಹೊರಗಿನ ಸ್ಯಾಟ್‌ಲೈಟ್ ಟೌನ್‌ಗಳ ಅಭಿವೃದ್ಧಿಗೆ ಪ್ರತ್ಯೇಕ ಹಣ ಬಳಸುವ ಅವಕಾಶ ಇದೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.