ಮೈಸೂರು

ಕಾಮಗಾರಿಗೆ ಅಧಿಕಾರಿಗಳು ಕಾರ್ಯೋನ್ಮುಖರಾಗಲಿ

Published On :

ಕ.ಪ್ರ.ವಾರ್ತೆ ,  ಪಿರಿಯಾಪಟ್ಟಣ ,  ಅ. 24
ಬದಲಾದ ಸನ್ನಿವೇಶಕ್ಕೆ ತಕ್ಕಂತೆ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಮತ್ತು ಅಭಿವೃದ್ಧಿ ಕಾರ್ಯಗಳು ಶೀಘ್ರಗತಿಯಲ್ಲಿ ನಡೆಸಲು ಕಾರ್ಯೊನ್ಮುಖರಾಗಬೇಕು ಎಂದು ಶಾಸಕ ಕೆ. ವೆಂಕಟೇಶ್ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿವಿಧ ಇಲಾಖೆಗಳ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ಪಡೆದು ಅವರು ಮಾತನಾಡಿದರು.
ಕಳೆದ ಬಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರಿಂದ ತಾಲೂಕಿನಲ್ಲಿ ಹೆಚ್ಚು ಅಭಿವೃದ್ಧಿ ಕೆಲಸಗಳಾಗಲು ವಿಳಂಬವಾಗುತ್ತಿದ್ದು, ಪ್ರಸ್ತುತ ತಮ್ಮದೇ ಆದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿದ್ದು, ಸರ್ಕಾರ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳ ಅನುಷ್ಠಾನ ಕಾರ್ಯದಲ್ಲಿ ಅಧಿಕಾರಿಗಳ ಪಾತ್ರವು ಹೆಚ್ಚಿನದಾಗಿದ್ದು, ಅಧಿಕಾರಿಗಳು ಅಭಿವೃದ್ಧಿ ಕಾರ್ಯಗಳ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಎಂದು ಸೂಚಿಸಿದರು.
ಅಧಿಕಾರಕ್ಕೆ ಬಂದ ತಕ್ಷಣ ಅಧಿಕಾರಿ ವರ್ಗವನ್ನು ಬದಲಾಯಿಸಿದರು ಎಂಬ ಕೆಟ್ಟ ಅಭಿಪ್ರಾಯ ಬರಬಾರದೆಂಬ ಉದ್ದೇಶದಿಂದ ಎಲ್ಲ ಅಧಿಕಾರಿಗಳನ್ನು ತಾಲೂಕಿನಲ್ಲಿಯೇ ಉಳಿಸಿಕೊಳ್ಳಲಾಗಿದೆ. ಅಧಿಕಾರಿಗಳು ತಮ್ಮ ವ್ಯಾಪ್ತಿಯ ಕೆಲಸಗಳ ಬಗ್ಗೆ ಯಾವುದೇ ರೀತಿಯ ಸಬೂಬು ಹೇಳದೆ ಆಗಬೇಕಿರುವ ಕೆಲಸಗಳನ್ನು ಮಾಡಬೇಕು. ಒಂದು ವೇಳೆ ಅಧಿಕಾರಿಗಳಿಗೆ ಸಮಸ್ಯೆ ಇದ್ದಲ್ಲಿ ತಮ್ಮ ಬಳಿ ಹೇಳಿಕೊಂಡು ಪರಿಹರಿಸಿಕೊಳ್ಳಬೇಕು. ಮೇಲ್ಮಟ್ಟದ ಚುನಾಯಿತ ಜನಪ್ರತಿನಿಧಿಗಳಿಂದ ಅಥವಾ ಮೇಲಾಧಿಕಾರಿಗಳಿಂದ ಆಗಬೇಕಿರುವ ಕೆಲಸಗಳಿದ್ದಲ್ಲಿ ತಮ್ಮ ಗಮನಕ್ಕೆ ತಂದಲ್ಲಿ ತಾವು ಅದನ್ನು ಮಾಡಿಸಿಕೊಡುವುದಾಗಿ ಭರವಸೆ ನೀಡಿದರಲ್ಲದೆ, ತಮಗೆ ತಾಲೂಕಿನ ಅಭಿವೃದ್ಧಿಯೇ ಮುಖ್ಯ ಎಂದು ತಿಳಿಸಿದರು.
ಕಾಮಗಾರಿ ನಡೆಯುವ ಸ್ಥಳಗಳಿಗೆ ಎಂಜಿನಿಯರ್‌ಗಳು ಹೋಗುವುದಿಲ್ಲ ಎಂಬ ಆರೋಪಗಳು ಹಿಂದಿನಿಂದಲೂ ಕೇಳಿ ಬರುತ್ತಿದೆ. ಮುಂದೆ ಅದು ಬಾರದ ಹಾಗೆ ಎಂಜಿನಿಯರ್‌ಗಳು ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಉತ್ತಮ ಕಾಮಗಾರಿಗಳನ್ನು ಮಾಡಿಸಬೇಕು ಎಂದು ತಿಳಿಸಿದರು.
ಅಂಗನವಾಡಿ ಬಗ್ಗೆ ಹೆಚ್ಚು ದೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬಗ್ಗೆ ದೂರುಗಳು ಹೆಚ್ಚು ಕೇಳಿಬರುತ್ತಿದ್ದು, ಅಂಗನವಾಡಿ ಕಾರ್ಯಕರ್ತೆಯರ ಬಗ್ಗೆ ಹೆಚ್ಚಿನ ದೂರುಗಳು ಬರುತ್ತಿವೆ. ಮುಂದಿನ ದಿನಗಳಲ್ಲಿ ದೂರುಗಳು ಬಾರದಂತೆ ನೋಡಿಕೊಳ್ಳುವಂತೆ ಸಿಡಿಪಿಒ ದೇವಕುಮಾರ್ ಅವರಿಗೆ ಸೂಚಿಸಿದರು.
ಜಿಪಂ ಎಂಜಿನಿಯರಿಂಗ್ ವಿಭಾಗ ಹಾಗೂ ಸೆಸ್ಕ್ ಇಲಾಖೆಯ ಅಧಿಕಾರಿಗಳು ಹೊಂದಾಣಿಕೆಯಿಂದ ಕೆಲಸ ಮಾಡಬೇಕಿದೆ. ಕುಡಿಯುವ ನೀರಿನ ವಿಚಾರದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವ ವಿಚಾರ ಸೇರಿದಂತೆ ಅನೇಕ ವಿಚಾರಗಳಲ್ಲಿ ಎರಡೂ ಇಲಾಖೆಗಳ ನಡುವೆ ಒಮ್ಮತ ಇಲ್ಲದಿರುವುದು ಕಂಡುಬರುತ್ತಿದ್ದು ಅಧಿಕಾರಿಗಳು ಎಚ್ಚೆತ್ತುಕೊಂಡು ಕೆಲಸ ನಿರ್ವಹಿಸುವಂತೆ ತಿಳಿಸಿದರು.
ತಾಲೂಕಿನಾದ್ಯಂತ ರೈತರು ಅನುಭವಿಸುತ್ತಿರುವ ಬೆಳೆ ನಷ್ಟದ ಬಗ್ಗೆ ಸಮರ್ಪಕ ವರದಿಯನ್ನು ಸಂಗ್ರಹಿಸುವಂತೆ ಹಾಗೂ ತಂಬಾಕು ರೈತರು ಅನುಭವಿಸಿರುವ ಬೆಳೆ ನಷ್ಟದ ಬಗ್ಗೆ ವರದಿ ತಯಾರಿಸಿ ತಂಬಾಕು ಮಂಡಳಿ ಹಾಗೂ ಸಂಸದರಿಗೆ ಕಳುಹಿಸುವಂತೆ ಕೃಷಿ ಇಲಾಖೆಯ ಎಡಿಎ ಕೆ. ರಾಜು ಅವರಿಗೆ ಹೇಳಿದರು.
ಸೆಸ್ಕ್ ಇಲಾಖೆಯಿಂದ ಸಮರ್ಪಕವಾಗಿ ಕೆಲಸಗಳು ಸಾಗುತ್ತಿಲ್ಲ ಎಂದು ತಾಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಆರೋಪಿಸಿದರು. ಜಿಪಂ ಸದಸ್ಯರಾದ ಎಂ.ಪಿ. ಚಂದ್ರೇಶ್, ಡಿ. ಮಂಜುಳಾರಾಜ್, ಎಸ್.ಎ. ಶಿವಣ್ಣ, ಕಾವೇರಿಶೇಖರ್, ತಾಪಂ ಅಧ್ಯಕ್ಷೆ ಪವಿತ್ರಾ, ಉಪಾಧ್ಯಕ್ಷ ಪ್ರಕಾಶ್, ತಹಸೀಲ್ದಾರ್ ಎಂ.ಕೆ. ಸವಿತಾ, ಇಒ ಮಹದೇವಸ್ವಾಮಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.