ಪರಿಶಿಷ್ಟ ಜಾತಿ, ಪಂಗಡದ ಹಿತರಕ್ಷಣಾ ಸಮಿತಿ ಸಭೆ
ಕ.ಪ್ರ.ವಾರ್ತೆ , ಹುಣಸೂರು , ಅ. 26
ತಾಲೂಕು ಮಟ್ಟದ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಹಿತರಕ್ಷಣಾ ಸಮಿತಿ ಸಭೆಯು ಶಾಸಕ ಎಚ್.ಪಿ. ಮಂಜುನಾಥ್ ಅಧ್ಯಕ್ಷತೆಯಲ್ಲಿ ಶನಿವಾರ ತಾಲೂಕು ಕಚೇರಿಯಲ್ಲಿ ನಡೆಯಿತು.
ತಾಲೂಕು ಸಮಾಜ ಕಲ್ಯಾಣಾಧಿಕಾರಿ ಹೊನ್ನೇಗೌಡ ಮಾತನಾಡಿ, ಕಳೆದ ಸಾಲಿನಲ್ಲಿ ಒಟ್ಟು 19 ದೌರ್ಜನ್ಯ ಪ್ರಕರಣಗಳ ಪೈಕಿ 17 ಪ್ರಕರಣಗಳು ಸಾಕ್ಷಿ ಇಲ್ಲದೆ ವಜಾಗೊಂಡಿವೆ ಎಂದು ಸಭೆಗೆ ತಿಳಿಸುತ್ತಿದ್ದಂತೆ ಮಧ್ಯ ಪ್ರವೇಶಿಸಿದ ದಸಂಸ ಮುಖಂಡರು ದೌರ್ಜನ್ಯ ಪ್ರಕರಣದಲ್ಲಿ ಸಾಕ್ಷಿಗಳಿಗೆ ಧೈರ್ಯ ತುಂಬುವ ಕೆಲಸ ಹಾಗೂ ಪ್ರಕರಣಗಳು ಫೇಲಾಗದಂತೆ ನೋಡಿಕೊಳ್ಳುವ ಪೂರ್ಣ ಜವಾಬ್ದಾರಿ ತಮ್ಮ ಮೇಲಿದೆ ಎಂಬುದನ್ನು ಮನಗಾಣಬೇಕು ಎಂದು ಆಕ್ಷೇಪ ವ್ಯಕ್ತಪಡಿಸಿದರು.
ದಸಂಸ ಮುಖಂಡ ಡಿ.ಕುಮಾರ್ ಮಾತನಾಡಿ, ಬಹುತೇಕ ದೌರ್ಜನ್ಯ ಪ್ರಕರಣಗಳು ದುರುಪಯೋಗವಾಗುತ್ತಿವೆ. ಇದರಿಂದ ನೈಜ ದೌರ್ಜನ್ಯ ಪ್ರಕರಣಗಳು ಮಹತ್ವ ಕಳೆದುಕೊಳ್ಳುತ್ತಿವೆ ಎಂಬ ಅವರ ಅಭಿಪ್ರಾಯಕ್ಕೆ ಎಲ್ಲರೂ ಬೆಂಬಲ ವ್ಯಕ್ತಪಡಿಸಿದರು.
ಇನ್ನು ಸರ್ಕಾರ ವಿವಿಧ ಯೋಜನೆಗಳಿಗೆ ತಾಲೂಕಿನಾದ್ಯಂತ ಇರುವ ಎಲ್ಲಾ ಬ್ಯಾಂಕುಗಳು ಸಾಲ ಸೌಲಭ್ಯ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯುವುದಾಗಿ ಭರವಸೆ ನೀಡಿದರು.
ಇದಕ್ಕೆ ಸ್ಪಂದಿಸಿದ ಅಂಬೇಡ್ಕರ್ ನಿಗಮದ ಅಧಿಕಾರಿ, ಸರ್ಕಾರ ಎಸ್ಸಿ, ಎಸ್ಟಿ ವರ್ಗದವರು ಪಡೆದುಕೊಂಡಿದ್ದ ಸಾಲವನ್ನು ಮನ್ನಾ ಮಾಡಿದೆ ಹೊರತು, ಬ್ಯಾಂಕ್ ಸಾಲವನ್ನಲ್ಲ ಎಂಬ ಅಂಶವನ್ನು ಸಭೆಯ ಗಮನಕ್ಕೆ ತಂದರು.
ಗ್ರಾಪಂಗಳಲ್ಲಿ ಶೇ.22.75ರ ಅನುದಾನವನ್ನು ಕಾಮಗಾರಿಗೆ ಮಾತ್ರ ಬಳಸುತ್ತಿದ್ದಾರೆ. ಹಾಸ್ಟೆಲ್‌ಗಳ ಸಮಸ್ಯೆ ಹಾಗೂ ವೈಯಕ್ತಿಕ ನೆರವು ನೀಡುತ್ತಿಲ್ಲ ಎಂಬ ಆರೋಪಕ್ಕೆ, ಈ ಬಗ್ಗೆ ಪ್ರತಿ ತಿಂಗಳು ಯಾವ ಉದ್ದೇಶಕ್ಕೆ ಅನುದಾನ ಬಳಕೆಯಾಗಿದೆ ಎಂದು ತಾಲೂಕಿನ 30 ಗ್ರಾಪಂಗಳ ಸಂಪೂರ್ಣ ಮಾಹಿತಿ ನೀಡಬೇಕೆಂದು ತಾಪಂ ಅಧಿಕಾರಿಗೆ ಶಾಸಕರು ತಾಕೀತು ಮಾಡಿದರು.
ಪಟ್ಟಣದ ಕಾಲೇಜು ಆವರಣದಲ್ಲಿ ಠಿಕಾಣಿ ಹೂಡಿರುವ ಹಂದಿ ಜೋಗಿ ಕುಟುಂಬಗಳಿಗೆ ಇನ್ನೊಂದು ವರ್ಷದಲ್ಲಿ ಸೂರು ಒದಗಿಸುವ ಭರವಸೆ ನೀಡಿದ ಶಾಸಕರು ಬಡವರಿಗೆ ನಿವೇಶನ ವಿತರಿಸಲು ಕೆಲ ಕಾನೂನು ತೊಡಕುಗಳಿವೆ. ಇದನ್ನೆಲ್ಲ ನಿವಾರಿಸಿ ವಿತರಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಎಲ್ಲ ಸ್ಮಶಾನಗಳ ಅಭಿವೃದ್ಧಿ: ಪಟ್ಟಣದ ಎಲ್ಲ ಸ್ಮಶಾನಗಳ ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ ಎಂದು ಶಾಸಕ ಮಂಜುನಾಥ್ ಸಭೆಯಲ್ಲಿ ತಿಳಿಸಿದರು. ಪಟ್ಟಣದ ಮಿನಿ ವಿಧಾನಸೌಧದ ಬಳಿಯ ಸಾರ್ವಜನಿಕ ಸ್ಮಶಾನವನ್ನು ಸಂಪೂರ್ಣ ಅಭಿವೃದ್ಧಿಗೊಳಿಸಿ ನೌಕರನನ್ನು ನೇಮಿಸಿ ನಿರ್ವಹಣೆ ಮಾಡಲಾಗುವುದು. ಅಲ್ಲದೆ ಉಳಿದ ಆರು ಸ್ಮಶಾನ ಅಭಿವೃದ್ಧಿಗೊಳಿಸಲಾಗುವುದು. ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಪ್ರತಿ ತಿಂಗಳು ನಾಲ್ಕು ದಲಿತರ ಸ್ಮಶಾನ ಒತ್ತುವರಿ ತೆರವುಗೊಳಿಸಿ ತಂತಿ ಬೇಲಿ ಹಾಕಿ ನೀರು ಮತ್ತು ಸೂರಿನ ಸೌಲಭ್ಯ ಕಲ್ಪಿಸುವಂತೆ ತಾಪಂ ಇಒ ಮತ್ತು ತಹಸೀಲ್ದಾರ್‌ಗೆ ಸೂಚಿಸಿದ ಶಾಸಕರು, ಇದರ ಅನುಷ್ಠಾನಕ್ಕೆ ರಾಜಸ್ವ ನೀರಿಕ್ಷಕ ಚೌಡನಾಯ್ಕರನ್ನು ನೇಮಿಸಲು ಆದೇಶಿಸಿದರು.
ತಹಸೀಲ್ದಾರ್ ಎನ್. ವೆಂಕಟಾಚಲಪ್ಪ, ಮುಖಂಡರಾದ ಕೆಂಪರಾಜು, ಬೆಳತ್ತೂರು ಮಹದೇವ, ಹರಿಹರ ಆನಂದಸ್ವಾಮಿ, ಕಾಂತ ರಾಜು, ದೇವೇಂದ್ರ, ಗಜೇಂದ್ರ, ರತ್ನಪುರಿ ಪುಟ್ಟಸ್ವಾಮಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

