ಮೈಸೂರು

'ಕುವೆಂಪು ಮತೀಯ ಸಂಸ್ಕೃತಿ ವಿರೋಧಿಸಿದ ಮಹಾಕವಿ'

Published On :

ಕ.ಪ್ರ.ವಾರ್ತೆ ,  ಮೈಸೂರು ,  ಅ. 26
ರಾಷ್ಟ್ರಕವಿ ಕುವೆಂಪು ಅವರು ಮತೀಯ ಸಂಸ್ಕೃತಿ ವಿರೋಧಿಸಿದ ಮಹಾಕವಿ ಎಂದು ಕುವೆಂಪು ಕನ್ನಡ  ಅಧ್ಯಯನ ಸಂಸ್ಥೆ ಪ್ರಾಧ್ಯಾಪಕ, ಸಾಹಿತಿ ಡಾ.ಎನ್.ಎಸ್. ತಾರಾನಾಥ್ ಹೇಳಿದರು.
ಮೈಸೂರು ವಿವಿಯ ಕುವೆಂಪು ಕಾವ್ಯಾಧ್ಯಯನ ಪೀಠ, ಕುಪ್ಪಳ್ಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಹಾಗೂ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ ಕುವೆಂಪು ಮತ್ತು ಪರಂಪರೆ ವಿಚಾರ ಸಂಕಿರಣದ ಎರಡನೇ ದಿನದ ಗೋಷ್ಠಿಯಲ್ಲಿ ಕುವೆಂಪು ಮತ್ತು ಮಾರ್ಗ ಸಾಹಿತ್ಯ ಎಂಬ ವಿಷಯ ಕುರಿತು ಅವರು ಮಾತನಾಡಿದರು. ಕುವೆಂಪು ಅವರು ಧರ್ಮರಹಿತ ಹಾಗೂ ಮತದಿಂದ ದೂರವಾದ ಸಮಾಜವನ್ನೂ ಹಾಗೂ ಕೃತಿಯನ್ನೂ ಕಟ್ಟಿದವರು. ಧರ್ಮ, ಅಧಿಕಾರ, ಗುರುಮನೆ ಇದರಿಂದ ಹೊರತಾದ ಮತೀಯ ಸ್ಪರ್ಶವಿಲ್ಲದ ಸಾಹಿತ್ಯ ಅವರದು ಎಂದರು.
ಪಂಪ ಅರಿಕೇಸರಿ, ರನ್ನ ಭೀಮ, ಪೊನ್ನ ಮುಮ್ಮಡಿ ಕೃಷ್ಣದೇವರಾಯ ಹೀಗೆ ಅರಮನೆ ವಾತಾವರಣ ಬಿಂಬಿಸುವ ಸಾಹಿತ್ಯವಿದೆ. ಇಂತಹ ಪ್ರಭುತ್ವವನ್ನು ವಿರೋಧಿಸುವ ನೆಲೆಯನ್ನು ಕುವೆಂಪು ಸಾಹಿತ್ಯದಲ್ಲಿ ಕಂಡುಬರಲಿದೆ ಎಂದು ತಿಳಿಸಿದರು.  ಪಂಪ, ರನ್ನ ಸಾಮಿಪ್ಯ: ಯಾವುದೇ ಮಾರ್ಗ ಸಾಹಿತ್ಯದಲ್ಲಿ ನಿರ್ಲಕ್ಷ್ಯಗೆ ಒಳಗಾಗಿತ್ತೋ ಅದನ್ನು ಕುವೆಂಪು ಅವರು ಬೇರೆ ರೀತಿಯಲ್ಲಿ ಪ್ರತಿಪಾದಿಸಿದವರು. ಪಂಪ ಮತ್ತು ರನ್ನ ನಡುವೆ ಸಾಮಿಪ್ಯವಿದೆ. ಕುವೆಂಪು ಹಾಗೂ ರನ್ನ  ನಡುವೆ ಸಾಮಿಪ್ಯವಿದೆ. ರನ್ನನ ಕುರಿತು ಕುವೆಂಪು ಅನೇಕ ಲೇಖನಗಳನ್ನು ಬರೆದಿದ್ದಾರೆ ಎಂದರು.
ಕುವೆಂಪು ಮತ್ತು ನವ್ಯಕಾವ್ಯ ಎಂಬ ವಿಷಯ ಕುರಿತು ಸಾಹಿತಿ ಡಾ.ಜಿ.ಆರ್. ತಿಪ್ಪಸ್ವಾಮಿ ಮಾತನಾಡಿ, ನವೋದಯ ಹಿರಿಯ ಕವಿಗಳ ಕಟ್ಟಳೆಗಳನ್ನು ಮುರಿದವರು ಕುವೆಂಪು. ಮಾನವ ಧರ್ಮದ ಪ್ರತಿಪಾದಕರು. ನವೋದಯ ಕಾಲದ ಸಾಮಾಜಿಕ ಪರಿವರ್ತನೆಗಾಗಿ ಕುವೆಂಪು, ಅಡಿಗ, ಬೇಂದ್ರೆ ಸೇರಿದಂತೆ ಅನೇಕ ಸಾಹಿತಿಗಳು ಕಾವ್ಯ ರಚಸಿದ್ದಾರೆ ಎಂದು ತಿಳಿಸಿದರು.
ಕುವೆಂಪು ಮತ್ತು ಕಥನ ಪರಂಪರೆ ಎಂಬ ವಿಷಯ ಕುರಿತು ಡಾ.ರಾಜೇಂದ್ರ ಚೆನ್ನಿ ಹಾಗೂ ಡಾ.ವಿಜಯ ಎಸ್. ಕರಿಕಲ್. ಕುವೆಂಪು ಮತ್ತು ಕಾವ್ಯ ಮೀಮಾಂಸೆಯ ಪರಂಪರೆ ಎಂಬ ವಿಷಯ ಕುರಿತು ಡಾ. ಪ್ರೀತಿ ಶ್ರೀಮಂಧರಕುಮಾರ್ ಮಾತನಾಡಿದರು. ಕುವೆಂಪು ಕಾವ್ಯಾಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕ ಪ್ರೊ.ಓ.ಎಲ್. ನಾಗಭೂಷಣಸ್ವಾಮಿ ಗೋಷ್ಠಿ ನಿರ್ವಹಿಸಿದರು. ರಾಷ್ಟ್ರಕವಿ  ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಹಂ.ಪ. ನಾಗರಾಜಯ್ಯ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ನೀಲಗಿರಿ ತಳವಾರ್, ಪ್ರೊ.ಕೆ.ಎಸ್. ಭಗವಾನ್, ಸಿದ್ಧಾಶ್ರಮ ಇದ್ದರು.
ನಂತರ ಸಂಸ್ಥೆ ಅಧ್ಯಕ್ಷ ಪ್ರೊ.ನೀಲಗಿರಿ ತಳವಾರ್ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪದಲ್ಲಿ ಮೈಸೂರು ವಿವಿ ಕುಲಸಚಿವ ಪ್ರೊ.ಸಿ. ಬಸವರಾಜು ಹಾಗೂ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.