ಮೈಸೂರು

ಪತ್ನಿ ಶೀಲ ಶಂಕಿಸಿ, ವಿಷ ಕುಡಿಸಿ ಕೊಲೆ

Published On :

ಎಚ್.ಡಿ. ಕೋಟೆ: ಪತ್ನಿಯ ಶೀಲ ಶಂಕಿಸಿದ ಪತಿರಾಯನೊಬ್ಬ ಆಕೆಗೆ ವಿಷ ಕುಡಿಸಿ ಕೊಲೆ ಮಾಡಿರುವ ಘಟನೆ ತಾಲೂಕಿನ ಅಂತರಸಂತೆ ಹೋಬಳಿ ಗುಂಡ್ರೆ ಗ್ರಾಮದಲ್ಲಿ ನಡೆದಿದೆ.
ಕಳೆದ ಶುಕ್ರವಾರದಂದು ಗುಂಡ್ರೆ ಗ್ರಾಮದ ಚಿನ್ನಪ್ಪ ಎಂಬುವರ ಮಗ ಚಿನ್ನಣ್ಣ ತನ್ನ ಪತ್ನಿ ಕಮಲಮ್ಮ(28) ಎಂಬಾಕೆಯ ಶೀಲ ಶಂಕಿಸಿ ಜಗಳ ತೆಗೆದಿದ್ದಾರೆ. ನಂತರ ಮಾತಿಗೆ ಮಾತು ಬೆಳೆದು ಜಗಳ ಅತಿರೇಕಕ್ಕೆ ಹೋಗಿ ಕಮಲಮ್ಮಗೆ ಬಲವಂತವಾಗಿ ವಿಷ ಕುಡಿಸಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗಮಧ್ಯದಲ್ಲೇ ಸಾವಿಗೀಡಾಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಬೀಚನಹಳ್ಳಿ ಡಿವೈಎಸ್ಪಿ ನಂಜುಂಡ, ವೃತ್ತ ನಿರೀಕ್ಷಕ ಶಿವಸ್ವಾಮಿ, ತಹಸೀಲ್ದಾರ್ ಕೃಷ್ಣ ಘಟನೆಯನ್ನು ಪರಿಶೀಲಿಸಿದರು. ಕಮಲಮ್ಮನ ಅಣ್ಣ ಚಿನ್ನು, ತನ್ನ ಭಾವ ಚಿನ್ನಣ್ಣ ವಿರುದ್ಧ ಪೊಲೀಸರಿಗೆ ದೂರು ನೀಡಿದರು. ಆರೋಪಿ ಚಿನ್ನಣ್ಣನನ್ನು ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.
ಮನೆ ಗೋಡೆ ಕುಸಿದು ಕಾರ್ಮಿಕ ಸಾವು
ಮೈಸೂರು: ಮನೆ ಗೋಡೆ ಕುಸಿದು ಕೂಲಿ ಕಾರ್ಮಿಕನೊಬ್ಬ ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಘಟನೆ ಮಂಡಿ ಮೊಹಲ್ಲಾದಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.
ತಮಿಳುನಾಡು ರಾಜ್ಯದ ಈರೋಡ್ ಜಿಲ್ಲೆಯ ನಿವಾಸಿ ಮುರುಗೇಶ್(35) ಮೃತಪಟ್ಟವರು. ಪರಮೇಶ್ ಮತ್ತು ಪಚ್ಚಿಯಪ್ಪ ಎಂಬವರಿಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಡಿ ಮೊಹಲ್ಲಾ ಸಾಡೇ ರಸ್ತೆ 1ನೇ ಕ್ರಾಸ್‌ನಲ್ಲಿ ಮನೆ ನಿರ್ಮಿಸಲು ಸಲುವಾಗಿ ಅನ್ಸರ್ ಎಂಬವರು ತಮಿಳುನಾಡಿನಿಂದ ನಾಲ್ವರ ಕೂಲಿ ಕಾರ್ಮಿಕರನ್ನು ಕರೆ ತಂದಿದ್ದರು. ಭಾನುವಾರ ಬೆಳಗ್ಗೆಯಿಂದ ಮನೆಯ ಅಡಿಪಾಯ ತೆಗೆಯುತ್ತಿದ್ದರು. ಮಧ್ಯಾಹ್ನ 12.30ರ ವೇಳೆಗೆ ಅನ್ಸರ್ ನಿವೇಶನ ಪಕ್ಕದಲ್ಲಿದ್ದ ಮನೆಯ ಗೋಡೆ ಕುಸಿದು ಬಿದ್ದಿತು. ಈ ವೇಳೆ ಮುರುಗೇಶ್ ಗೋಡೆ ಅವಶೇಷದಡಿ ಸಿಕ್ಕಿಕೊಂಡಿದ್ದು, ಪರಮೇಶ್, ಪಚ್ಚಿಯಪ್ಪ ಎಂಬವರು ಗಾಯಗೊಂಡರು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಮತ್ತು ತುರ್ತು ಸೇವಾ ದಳದ ಸಿಬ್ಬಂದಿ ಕುಸಿದ ಗೋಡೆಯ ಅವಶೇಷಗಳನ್ನು ಹೊರ ತೆಗೆಯುವಷ್ಟರಲ್ಲಿ ಅಡಿಯಲ್ಲಿ ಸಿಲುಕಿದ್ದ ಮುರುಗೇಶ್ ಮೃತಪಟ್ಟಿದ್ದರು.
ಮೂರು ಕಡೆ ಸರ ಅಪಹರಣ
ಕ.ಪ್ರ.ವಾರ್ತೆ , ಮೈಸೂರು , ಅ. 27
ವಿಳಾಸ ಕೇಳುವ ನೆಪದಲ್ಲಿ ಬೈಕಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಮೂರು ಕಡೆ ಸರ ಅಪಹರಿಸಿಕೊಂಡು ಹೋಗಿರುವ ಘಟನೆ ಭಾನುವಾರ ನಡೆದಿದೆ.
ವಿಜಯನಗರ 1ನೇ ಹಂತ ನಿವಾಸಿ ಸುಬ್ರಹ್ಮಣ್ಯರಾವ್ ಎಂಬವರ ಪತ್ನಿ ಶಶಿಕಲಾ ಅವರು ರಂಗೋಲಿ ಹಾಕುತ್ತಿದ್ದಾಗ ಬೈಕಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ವಿಳಾಸ ಕೇಳುವ ನೆಪದಲ್ಲಿ 60 ಗ್ರಾಂ. ತೂಕದ ಚಿನ್ನದ ಸರ ಎಗರಿಸಿಕೊಂಡು ಹೋಗಿದ್ದಾರೆ. ಈ ಸಂಬಂಧ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೆ.ಪಿ. ನಗರದ ಕೊಪ್ಪಲೂರು ಬಡಾವಣೆ ನಿವಾಸಿ ಕೆ.ಕೆ. ಪಟೇಲ್ ಎಂಬವರ ಪತ್ನಿ ನಾನಾಬಾಯಿ(72) ಅವರು ವಾಯು ವಿಹಾರಕ್ಕೆ ಹೋಗುತ್ತಿದ್ದಾಗ ಬೈಕಿನಲ್ಲಿ ಬಂದವರು 60 ಗ್ರಾಂ. ತೂಕದ ಚಿನ್ನದ ಸರ ಎಗರಿಸಿಕೊಂಡು ಹೋಗಿದ್ದಾರೆ. ಈ ಸಂಬಂಧ ವಿದ್ಯಾರಣ್ಯಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಾಮರಾಜ ಮೊಹಲ್ಲಾ ಡಿ. ಸುಬ್ಬಯ್ಯ ರಸ್ತೆಯ ನಿವಾಸಿ ರತ್ನಬಾಯಿ(65) ಎಂಬವರು ಜೆಎಲ್‌ಬಿ ರಸ್ತೆಯಲ್ಲಿ ಹೋಗುತ್ತಿದ್ದಾಗ ಬೈಕಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ವಿಳಾಸ ಕೇಳುವ ನೆಪದಲ್ಲಿ 60 ಗ್ರಾಂ. ಚಿನ್ನದ ಸರ ಎಗರಿಸಿಕೊಂಡು ಹೋಗಿದ್ದಾರೆ. ಈ ಸಂಬಂಧ ಲಕ್ಷ್ಮಿಪುರಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.