ಮೈಸೂರು

53 ವಾರ್ಡ್ಗಳ ಸ್ವಚ್ಛತೆಗೆ ಟೆಂಡರ್

Published On :

ಕ.ಪ್ರ.ವಾರ್ತೆ    ಮೈಸೂರು    ಅ. 28
ನಗರದ 53 ವಾರ್ಡ್ಗಳ ಸ್ವಚ್ಛತೆಯನ್ನು ಟೆಂಡರ್ ನೀಡಲು ಸೋಮವಾರ ನಡೆದ ಮಹಾನಗರ ಪಾಲಿಕೆ ಸಭೆಯಲ್ಲಿ ತೀರ್ಮಾನಿಸಲಾಗಿದೆ.
12 ವಾರ್ಡ್ಗಳನ್ನು ಪಾಲಿಕೆಯ ಕಾಯಂ ಪೌರ ಕಾರ್ಮಿಕರಿಂದ ಸ್ವಚ್ಛಗೊಳಿಸುವುದು ಮತ್ತು ಉಳಿದ 53 ವಾರ್ಡ್ಗಳ ಸ್ವಚ್ಛತೆಗೆ 30 ಕೋಟಿ ವೆಚ್ಚದಲ್ಲಿ ಟೆಂಡರ್ ಕರೆದು ಹೊರಗುತ್ತಿಗೆ ನೀಡಿ ಸ್ವಚ್ಛತಾ ಕಾರ್ಯ ಕೈಗೊಳ್ಳಲು ತೀರ್ಮಾನಿಸಲಾಯಿತು.
ಹೆಚ್ಚುವರಿ ಕಾರ್ಯಸೂಚಿಯ ಅನುಸಾರ ಈ ವಿಷಯ ಚರ್ಚಿಸಿದರು. ಬೆಂಗಳೂರು ನಂತರ ವೇಗವಾಗಿ ಬೆಳೆಯುತ್ತಿರುವ ಮೈಸೂರು ನಗರದ ಸ್ವಚ್ಛತೆಗೆ ಆದ್ಯತೆ ನೀಡಬೇಕಿದೆ. ಕಸ ನಿರ್ವಹಣೆಗೆ ಕಡಿವಾಣ ಹಾಕುವ ಉದ್ದೇಶದಿಂದ ಹೊಸದಾಗಿ ಟೆಂಡರ್ ಕರೆದು ಸ್ವಚ್ಛತಾ ಕಾರ್ಯ ಕೈಗೊಳ್ಳಲು ಸಭೆ ನಿರ್ಣಯಿಸಿತು.
ರಾಜ್ಯ ಸರ್ಕಾರವು ಒಳಚರಂಡಿ ಸ್ವಚ್ಛಗೊಳಿಸುವವರಿಗೆ ವೇತನ ಹೆಚ್ಚಳ ಮಾಡಿರುವ ಹಿನ್ನೆಲೆಯಲ್ಲಿ ನಗರ ಪಾಲಿಕೆಯ ಒಳಚರಂಡಿ ಸ್ವಚ್ಛಗೊಳಿಸುವವರ ವೇತನವನ್ನೂ ಪರಿಷ್ಕರಿಸಲು ಸಭೆ ತೀರ್ಮಾನಿಸಿತು. ಉಳಿದಂತೆ ಶಾಸಕ ಎಂ.ಕೆ. ಸೋಮಶೇಖರ್ ಅವರು ಸೂಯಜ್ ಫಾರಂ ಬಳಿ ಶಾಲೆ ನಿರ್ಮಿಸಲು ಕೇಳಿದ್ದ 24 ಎಕರೆ ಜಾಗವನ್ನು ನೀಡದಿರಲು ಪಾಲಿಕೆ ನಿರ್ಧರಿಸಿತು.
ಅಧಿಕಾರಿಗಳು ಸರಿಯಾದ ಮಾಹಿತಿ ನೀಡಲಿ: ಇದಕ್ಕೂ ಮುನ್ನ ಕಾರ್ಯಸೂಚಿ ಅನ್ವಯ ನಡೆದ ಸಭೆಯಲ್ಲಿ ನಗರ ಪಾಲಿಕೆಯ ಕಾನೂನು ಸಲಹೆಗಾರರಾಗಿ ನೇಮಕ ಮಾಡಿಕೊಳ್ಳುವ ಸಂಬಂಧ ನಡೆದ ಚರ್ಚೆಗೆ ಪರ ಮತ್ತು ವಿರೋಧ ಅಭಿಪ್ರಾಯ ವ್ಯಕ್ತವಾಯಿತು. ಈ ಸಂಬಂಧ ಮಾತನಾಡಿದ ಮಾಜಿ ಮೇಯರ್ ಸಂದೇಶ್ ಸ್ವಾಮಿ, ಈ ಹಿಂದೆ ಕಾನೂನು ಸಲಹೆಗಾರರಾಗಿ ಪಾಲಿಕೆ ಪರ ವಾದ ಮಂಡಿಸಿದ್ದ ಸಿದ್ದೇಗೌಡ ಅವರಿಗೆ ಪಾಲಿಕೆಯ ಅಧಿಕಾರಿಗಳು ಸರಿಯಾದ ಮಾಹಿತಿ ಮತ್ತು ಕಡತ ನೀಡದ ಹಿನ್ನೆಲೆಯಲ್ಲಿ ಹಲವು ಪ್ರಕರಣಗಳು ಪಾಲಿಕೆಗೆ ವಿರುದ್ಧವಾದ ತೀರ್ಪು ಬಂದಿದೆ. ಆದ್ದರಿಂದ ಮೊದಲು ಅಧಿಕಾರಿಗಳು ಸರಿಯಾದ ಮಾಹಿತಿ ನೀಡುವಂತಾಗಬೇಕು ಎಂದರು.
ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಕೆ.ಟಿ. ಚಲುವೇಗೌಡ ಅವರು, ಸರಿಯಾಗಿ ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪಟ್ಟು ಹಿಡಿದರು.
ಕೌನ್ಸಿಲ್ಗೆ ಪರಮಾಧಿಕಾರ: ಕಾಂಗ್ರೆಸ್ ಸದಸ್ಯೆ ಮಂಜುಳಾ ಮಾನಸ ಮಾತನಾಡಿ, ಪಾಲಿಕೆ ಕರೆದಿದ್ದ ಕಾನೂನು ಸಲಹೆಗಾರರ ಹುದ್ದೆಗೆ ಈಗ ಸಿದ್ದೇಗೌಡ ಒಬ್ಬರೆ ಅರ್ಜಿ ಸಲ್ಲಿಸಿದ್ದಾರೆ. ಸ್ಥಾಯಿ ಸಮಿತಿ ಒಪ್ಪಿರುವ ಕಾರಣಕ್ಕೆ ನಾವು ಅನುಮೋದನೆ ನೀಡಲು ಸಾಧ್ಯವಿಲ್ಲ. ಕೌನ್ಸಿಲ್ಗೆ ಪರಮಾಧಿಕಾರ ಇದೆ. ಒಬ್ಬರೆ ಅರ್ಜಿ ಸಲ್ಲಿಸಿದರೆ ಪುರಸ್ಕರಿಸಲಾಗದು.
ನಿಯಮಾವಳಿಯೊಂದನ್ನು ರೂಪಿಸಿ ವಕೀಲರ ಸಂಘಕ್ಕೆ ಕಳುಹಿಸಿದರೆ, ಅಲ್ಲಿನ ನೋಟಿಸ್ ಬೋರ್ಡ್ಗೆ ಹಾಕಿದರೆ ಯಾರಾದರೂ ಅರ್ಜಿ ಸಲ್ಲಿಸುತ್ತಾರೆ ಎಂದು ಸೂಚನೆ ನೀಡಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಸದಸ್ಯ ಶಿವಕುಮಾರ್, ಕಾನೂನು ಸಲಹೆಗಾರರ ನೇಮಕಕ್ಕೆ ಸಮಿತಿ ರಚಿಸುವುದು ಸೂಕ್ತ ಎಂದರು. ಈ ವೇಳೆ ಮಾಜಿ ಮೇಯರ್ ಶ್ರೀಕಂಠಯ್ಯ ಮಾತನಾಡಿ, ಮತ್ತೊಮ್ಮೆ ಅರ್ಜಿ ಕರೆದು ನೇಮಕ ಮಾಡಿಕೊಳ್ಳಲು ಬಹಳ ಕಾಲ ಬೇಕಾಗುತ್ತದೆ. ಈಗಾಗಲೆ 10 ತಿಂಗಳು ಆ ಹುದ್ದೆ ಖಾಲಿ ಇದೆ. ಆ ಕಾರಣದಿಂದ ಸಿದ್ದೇಗೌಡರನ್ನು 11 ತಿಂಗಳ ಅವಧಿಗೆ ನೇಮಕ ಮಾಡಿಕೊಳ್ಳಬಹುದು ಎಂದು ಸಲಹೆ ನೀಡಿದರು. ಈ ಸಲಹೆಯನ್ನೆ ಮೇಯರ್ ನಿರ್ಣಯವಾಗಿ ಸ್ವೀಕರಿಸಿ ಅಂಗೀಕರಿಸಿದರು.
ಚರ್ಚೆ ನಿರರ್ಥಕ: ವಿವಿ ಮೊಹಲ್ಲಾ ಕಾಳಿದಾಸ ರಸ್ತೆಯ ಪುಟ್ಪಾತ್ ಜಾಗದಲ್ಲಿ 20್ಢ10 ಅಳತೆಯ ಜಾಗವನ್ನು ಕಸ್ತೂರು ಬಾ ಖಾದಿ ಮತ್ತು ಗ್ರಾಮೋದ್ಯೋಗ ಕೈಗಾರಿಕಾ ಸಂಘಕ್ಕೆ ನೀಡಿರುವ ಬಾಡಿಗೆ ಅವಧಿಯನ್ನು ಐದು ವರ್ಷಕ್ಕೆ ವಿಸ್ತರಿಸುವ ಕುರಿತು ನಡೆದ ಚರ್ಚೆ ನಿರರ್ಥಕ ಎಂದು ಮಾಜಿ ಮೇಯರ್ ಅಯೂಬ್ಖಾನ್ ಪ್ರತಿಪಾದಿಸಿದರು.
ಕಳೆದ 2008ರಲ್ಲಿ ಐದು ವರ್ಷದ ಅವಧಿಗೆ ವಿಸ್ತರಿಸಲು ಪಾಲಿಕೆಗೆ ಮನವಿ ಸಲ್ಲಿಸಿದ್ದಾರೆ. ಈಗಾಗಲೆ ಐದು ವರ್ಷವೂ ಮುಗಿದಿದೆ. ಆದರೂ ಈ ವಿಷಯ ಪ್ರಸ್ತಾಪಿಸಿರುವುದು ಸರಿಯಲ್ಲ. ಐದು ವರ್ಷದಿಂದ ಬಾಡಿಗೆ ಪಡೆಯಲಾಗಿದೆಯೆ ಎಂಬ ಬಗ್ಗೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಬೇಕು ಎಂದು ಪಟು ಹಿಡಿದರು. ಸಾಕಷ್ಟು ಚರ್ಚಿಸಿದ ಬಳಿಕ ಈ ವಿಷಯವನ್ನು ತೆರಿಗೆ ಹಣಕಾಸು ಸ್ಥಾಯಿ ಸಮಿತಿಗೆ ಪರಿಶೀಲನೆಗೆ ಕಳುಹಿಸಲಾಯಿತು.
ಈ ವೇಳೆ ಫುಟ್ಪಾತ್ನಲ್ಲಿ ಅಕ್ರಮವಾಗಿ ಎಷ್ಟು ಬಸ್ ನಿಲ್ದಾಣ ನಿರ್ಮಿಸಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ವಿಪಕ್ಷ ನಾಯಕ ಡಿ. ನಾಗಭೂಷಣ್ ಒತ್ತಾಯಿಸಿದರು. ಈ ಬಗ್ಗೆ ಮಾಹಿತಿ ನೀಡಿದ ಎಂಜಿನಿಯರ್ ಕೃಷ್ಣ ಭೋವಿ ಅವರು, ಈ ಹಿಂದೆ ಪಾಲಿಕೆ ಆಯುಕ್ತರಾಗಿದ್ದ ರಾಯ್ಕರ್ ಅವರು ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ ಅಗತ್ಯವಿರುವೆಡೆ ಬಸ್ ಶೆಲ್ಟರ್ ನಿರ್ಮಿಸಲು ಅನುಮತಿ ನೀಡಿದ್ದರು. ಆದ್ದರಿಂದ ಈ ಬಗ್ಗೆ ನಿಖರ ಮಾಹಿತಿ ನಮ್ಮ ಬಳಿ ಇಲ್ಲ. ಆದರೂ ಸಾಕಷ್ಟು ಅನಧಿಕೃತ ಬಸ್ ಶೆಲ್ಟರ್ಗಳಿರುವುದಾಗಿ ಸಭೆಗೆ ತಿಳಿಸಿದರು.
ಉಪ ಮೇಯರ್ ಶೈಲೇಂದ್ರ, ಪಾಲಿಕೆ ಆಯುಕ್ತ ಪಿ.ಜಿ. ರಮೇಶ್ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.