ಉದ್ಯಮಿ ನಾಪತ್ತೆ
ಮೈಸೂರು: ಕುವೆಂಪುನಗರ 1ನೇ ಹಂತ 2ನೇ ಕ್ರಾಸ್ ನಿವಾಸಿ ಲೇ.ಎಂ. ಶಿವಣ್ಣ ಎಂಬವರ ಪುತ್ರ ಹಾಗೂ ಉದ್ಯಮಿ ಎಂ.ಎಸ್. ಉಮೇಶ್(36) ನಾಪತ್ತೆಯಾಗಿದ್ದಾರೆ. ಅ.21ರಂದು ಮನೆಯಿಂದ ಹೊರ ಹೋದ ಉಮೇಶ್ ನಾಪತ್ತೆಯಾಗಿರುವ ಬಗ್ಗೆ ಸಹೋದರ ಎಂ.ಎಸ್. ಮಂಜುನಾಥ ಪೊಲೀಸರಿಗೆ ದೂರು ನೀಡಿದ್ದಾರೆ. ಚಹರೆ- 5.9 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ದುಂಡು ಮುಖ, ದೃಢಕಾಯ ಮೈಕಟ್ಟು, ಬೊಕ್ಕ ತಲೆ, ಕನ್ನಡ, ಹಿಂದಿ ಮತ್ತು ಕೊಡವ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 0821- 2418324 ಸಂಪರ್ಕಿಸಲು ಕುವೆಂಪುನಗರ ಠಾಣೆ ಪೊಲೀಸರು ಕೋರಿದ್ದಾರೆ.
ಜೇಬುಗಳ್ಳನಿಗೆ ಧರ್ಮದೇಟು
ಮೈಸೂರು: ಬಸ್ ಹತ್ತುವ ವೇಳೆ ಪಿಕ್ ಪಾಕೇಟ್ ಮಾಡುತ್ತಿದ್ದ ವ್ಯಕ್ತಿಯನ್ನು ಸಾರ್ವಜನಿಕರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.
ಉದಯಗಿರಿ ಬಳಿಯ ಶಾಂತಿನಗರ ನಿವಾಸಿ ನೂರ್ ಅಹಮದ್ ಎಂಬಾತನೆ ಸಾರ್ವಜನಿಕರಿಂದ ಧರ್ಮದೇಟು ತಿಂದು, ಪೊಲೀಸರ ಅತಿಥಿಯಾದವ. ಈತನು ಮೈಸೂರು ನಗರ ಬಸ್ ನಿಲ್ದಾಣದಲ್ಲಿ ಬಸ್ ಹತ್ತುತ್ತಿದ್ದ ವ್ಯಕ್ತಿಯೊಬ್ಬರ ಪ್ಯಾಂಟ್ ಜೇಬಿನಲ್ಲಿದ್ದ ಪರ್ಸ್ ಎಗರಿಸುವಾಗ ಸಾರ್ವಜನಿಕರಿಗೆ ಸಿಕ್ಕಿಬಿದ್ದಿದ್ದಾನೆ.
ಸಾರ್ವಜನಿಕರಿಂದ ಧರ್ಮದೇಟು ತಿಂದ ನೂರ್ ಅಹಮದ್ನನ್ನು ದೇವರಾಜ ಠಾಣೆ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಜೂಜಾಟ; ಮೂವರ ಬಂಧನ
ಮೈಸೂರು: ಜೂಜಾಡುತ್ತಿದ್ದ ಮೂವರನ್ನು ಮೈಸೂರು ದಕ್ಷಿಣ ಠಾಣೆ ಪೊಲೀಸರು ಬಂಧಿಸಿ, 7 ಸಾವಿರ ಹಾಗೂ 3 ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಮೈಸೂರು ತಾಲೂಕು ರಮ್ಮನಹಳ್ಳಿ- ಹಂಚ್ಯಾ ನಡುವಿನ ಇಟ್ಟಿಗೆ ಗೂಡಿನ ಬಳಿ ಹತ್ತಾರು ಮಂದಿ ಜೂಜಾಡುತ್ತಿದ್ದರು. ಸೋಮವಾರ ರಾತ್ರಿ ಗಸ್ತಿನಲ್ಲಿದ್ದ ಪೊಲೀಸರು ದಾಳಿ ನಡೆಸಿದಾಗ ಮಹದೇವ, ಶಂಕರ ಸೇರಿದಂತೆ ಮೂವರನ್ನು ಸಿಕ್ಕಿಬಿದ್ದಿದ್ದು, ಉಳಿದವರು ಪರಾರಿಯಾಗಿದ್ದಾರೆ. ಎಸ್ಐ ಜಗದೀಶ್ ಮತ್ತು ಸಿಬ್ಬಂದಿ ಈ ದಾಳಿ ನಡೆಸಿದ್ದಾರೆ.
ಇಂದು ಅರ್ಧ ಗಂಟೆ ವಿದ್ಯುತ್ ಉಳಿಸಿ
ಮೈಸೂರು: ಶ್ರೀ ಜೈನ್ ಶ್ವೇತಾಂಬರ್ ತೇರಾಪಂಥ್ ಮಹಿಳಾ ಮಂಡಲ್ ಅನ್ಪ್ಲಗ್ ಆನ್ ಕಾರ್ಯಕ್ರಮವನ್ನು ಅ.30ರಂದು ಆಯೋಜಿಸಿದೆ. ಪರ್ಯಾವರಣದ ಸುರಕ್ಷೆಗಾಗಿ ವಿದ್ಯುತ್ನ ಸೀಮಿತ ಉಪಯೋಗ ಮಾಡಬೇಕು ಎಂಬ ಉದ್ದೇಶದಿಂದ ಅ.30ರಂದು ಸಂಜೆ 7ರಿಂದ 7.30ರವರೆಗೆ ಸಾರ್ವಜನಿಕರು ವಿದ್ಯುತ್ ಬಳಸದಂತೆ ಮಂಡಲ್ನ ಅಧ್ಯಕ್ಷೆ ಸಂತೋಷ ಕೊಟಾರಿಯಾ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕೋರಿದರು. ವಿದ್ಯುತ್ತನ್ನು ಸೀಮಿತವಾಗಿ ಬಳಸಿದರೆ ನಾವು ಚಿರಕಾಲ ವಿದ್ಯುತ್ ಉಪಯೋಗಿಸಬಹುದು ಎಂಬ ಉದ್ದೇಶದಿಂದ ಅಮರ್ ಉಜಾಲಾ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಿರುವುದಾಗಿ ಅವರು ಹೇಳಿದರು. ಗೋಷ್ಠಿಯಲ್ಲಿ ಅನಿತಾ ಕೊಟಾರಿಯಾ, ಮನಿಷಾ ಜೈನ್, ಪ್ರೇಮ್ ಜೈನ್ ಮತ್ತು ಮಧು ಇದ್ದರು.
ಡಿಸಿ, ಪೊಲೀಸ್ ಆಯುಕ್ತರ ವರ್ಗಾಯಿಸಿ
ಮೈಸೂರು: ಈ ಬಾರಿಯ ದಸರಾ ಪಾಸ್ ಗೊಂದಲ ಹಾಗೂ ಮೆರವಣಿಗೆಯನ್ನು ಅಧ್ವಾನ ಮಾಡಿದ ಜಿಲ್ಲಾಧಿಕಾರಿ ಸಿ. ಶಿಖಾ ಹಾಗೂ ಪೊಲೀಸ್ ಆಯುಕ್ತ ಡಾ. ಎಂ.ಎ. ಸಲೀಂ ಅವರನ್ನು ಹದಿನೈದು ದಿನಗಳೊಳಗೆ ವರ್ಗಾಯಿಸಬೇಕು ಎಂದು ಅಖಿಲ ಭಾರತ ಅಂಬೇಡ್ಕರ್ ಕ್ರಾಂತಿದಳ ಆಗ್ರಹಿಸಿದೆ. ದಳದ ರಾಷ್ಟ್ರೀಯ ಅಧ್ಯಕ್ಷ ಡಾ.ಆರ್. ರಾಜು ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿ, ಈ ಸಂಬಂಧ ನಿರ್ಣಯ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧ್ಯಕ್ಷ ಎಂ. ರಂಗಸ್ವಾಮಿ ತಿಳಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಅವರನ್ನು ಗಣನೆಗೆ ತೆಗೆದುಕೊಳ್ಳದೇ ಅಗೌರವದಿಂದ ವರ್ತಿಸಿರುವ ಈ ಇಬ್ಬರನ್ನು ವರ್ಗ ಮಾಡಿ, ಅಮಾನತುಪಡಿಸಿ, ತನಿಖೆ ನಡೆಸಬೇಕು. ಇಲ್ಲದಿದ್ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೈಸೂರು ಹಾಗೂ ಬೆಂಗಳೂರು ನಿವಾಸಿಗಳ ಎದುರು ನಿರಂತರವಾಗಿ ತಮಟೆ ಚಳವಳಿ ನಡೆಸುವುದಾಗಿ ಎಚ್ಚರಿಸಿದ್ದಾರೆ. ದಸರಾ ಪಾಸ್ಗಳ ಬಗ್ಗೆ ಅಧ್ವಾನ ಮಾಡಿದರು. ಕಾಳಸಂತೆಯಲ್ಲಿ ಮಾರಾಟ ನಡೆಯಿತು ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

