ಮೈಸೂರು

ಅಕ್ರಮ ಮರಳುಗಾರಿಕೆ ಮೇಲೆ ಅಧಿಕಾರಿಗಳ ದಾಳಿ

Published On :

ಕ.ಪ್ರ.ವಾರ್ತೆ   ಹುಣಸೂರು   ಸೆ. 7
ಲಕ್ಷ್ಮಣತೀರ್ಥ ನದಿಯ ಬಳಿಯಿಂದ ಅಕ್ರಮ ಮರಳು ಸಂಗ್ರಹ ತಾಣಗಳ ಮೇಲೆ ಉಪವಿಭಾಗಾಧಿಕಾರಿ ಆರ್. ವಿನೂತಪ್ರಿಯಾ ನೇತೃತ್ವದಲ್ಲಿ ತಾಲೂಕು ಆಡಳಿತ ದಾಳಿ ನಡೆಸಿ, 12 ಲೋಡ್ನಷ್ಟು ಮರಳನ್ನು ಅಧಿಕಾರಿಗಳು ವಶಪಡಿಸಿಕೊಂಡಿರುವ ಘಟನೆ ಶನಿವಾರ ಜರುಗಿದೆ.
ತಾಲೂಕಿನ ಹನಗೋಡು ಗ್ರಾಮದಲ್ಲಿ ಆಶ್ರಯ ಮನೆ ಹಾಗೂ ಇತರೆ ಕಟ್ಟಡ ನಿರ್ಮಿಸಲು ಮನೆಯ ಬಳಿ ಸಂಗ್ರಹಿಸಿದ್ದ ಮರಳನ್ನು ವಶಪಡಿಸಿಕೊಳ್ಳಲು ಹೋದ ವೇಳೆ ತಿರುಗಿ ಬಿದ್ದ ಗ್ರಾಮಸ್ಥರು, ಅಧಿಕಾರಿಗಳ ವಿರುದ್ಧ ಪ್ರತಿಭಟಿಸಿ ಮರಳನ್ನು ವಾಪಸು ಪಡೆಯುವಲ್ಲಿ ಯಶಸ್ವಿಯಾದರೂ, ಆದಾಗಲೇ ಪೊಲೀಸರ ನೆರವಿನಿಂದ ನಾಲ್ಕು ಲೋಡ್ನಷ್ಟು ಮರಳನ್ನು ಸಾಗಿಸಿಬಿಟ್ಟಿದ್ದರು.
ಶನಿವಾರ ಬೆಳಗಿನ ಜಾವ ಉಪವಿಭಾಗಾಧಿಕಾರಿ ಆರ್. ವಿನೂತಪ್ರಿಯಾ ನೇತೃತ್ವದಲ್ಲಿ ನೂತನ ತಹಸೀಲ್ದಾರ್ ವೆಂಕಟಾಚಲ, ಲೋಕೋಪಯೋಗಿ ಎಇಇ ವಾಸುದೇವನ್, ಉಪ ತಹಸೀಲ್ದಾರ್ ನರಸಿಂಹಯ್ಯ, ಗ್ರಾಮಾಂತರ ಎಸ್ಐ ಅರುಣ್ ಅವರು ಅಣೆಕಟ್ಟೆ ಬಳಿ ಇತ್ತೀಚಿನ ಪ್ರವಾಹದಲ್ಲಿ ಸಂಗ್ರಹಗೊಂಡಿದ್ದ ಮರಳನ್ನು ಕೆಲವರು ಗುಡ್ಡೆ ಹಾಕಿದ್ದರು.
ವಿಷಯ ತಿಳಿದು ಸ್ಥಳಕ್ಕೆ ತೆರಳಿ ವಶಪಡಿಸಿಕೊಂಡರಾದರೂ ತೇವದಿಂದಾಗಿ ವಾಹನಗಳು ಸ್ಥಳಕ್ಕೆ ತೆರಳಲಾಗದ ಪರಿಣಾಮ ವಾಪಸ್ ಬರುತ್ತಿದ್ದ ವೇಳೆ ಮನೆ ಕಟ್ಟುವವರು ಮನೆ ಮುಂದೆ ಹಾಕಿಕೊಂಡಿದ್ದ ಮರಳನ್ನು ವಶಪಡಿಸಿಕೊಂಡರು. ಮರಳನ್ನು ವಶಪಡಿಸಿಕೊಳ್ಳಲು ಮುಂದಾದಾಗ ಮನೆ ಮಾಲೀಕರು ಹಾಗೂ ಗ್ರಾಪಂ ಸದಸ್ಯೆ ನಾಗಮ್ಮ, ಮಾಜಿ ಸದಸ್ಯೆ ಮಹಾಲಕ್ಷ್ಮೀ, ಮುಖಂಡರಾದ ಗಿರಿಧರ್, ಪ್ರಕಾಶ್, ಚಂದ್ರು, ಸಮೀವುಲ್ಲಾ, ಸ್ವಾಮಿ, ಕೃಷ್ಣ, ಶೇಖರ್, ಸುರೇಶ್ ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರು ಸೇರಿದಂತೆ ನೂರಾರು ಮಂದಿ ಲಾರಿಗೆ ತಡೆಯೊಡ್ಡಿ ಲಾರಿಯಿಂದ ಮರಳನ್ನು ಸುರಿಸಿದರು. ಅನಂತರ ಹೆಚ್ಚಿನ ಪೊಲೀಸ್ ಪಡೆಯೊಂದಿಗೆ ಮತ್ತೆ ದಾಳಿ ನಡೆಸಿ, ಕೆಲವೆಡೆ ಮರಳನ್ನು ವಶಪಡಿಸಿಕೊಂಡರು.
ಹುಣಸೂರು ತಾಲೂಕಿನಲ್ಲಿ ಮರಳು ಸಂಗ್ರಹ ಗುತ್ತಿಗೆಯನ್ನು ಪಡೆಯಲು ಯಾರು ಮುಂದಾಗಿಲ್ಲವಾದ್ದರಿಂದ ಮರಳು ಬೇಕಾದವರು ಲೋಕಪಯೋಗಿ ಇಲಾಖೆ ಮೂಲಕ ಅರ್ಜಿ ಸಲ್ಲಿಸಿದ್ದಲ್ಲಿ, ಕೆ.ಆರ್. ನಗರ ತಾಲೂಕಿನಿಂದ ಮರಳನ್ನು ತರಿಸಿಕೊಡುವ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದೆ ಎಂದು ಉಪ ವಿಭಾಗಾಧಿಕಾರಿ ಆರ್. ವಿನೂತಾಪ್ರಿಯಾ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.