ಮೈಸೂರು

ವನ್ಯಜೀವಿ ಕಾಯ್ದೆ ತಿದ್ದುಪಡಿ: ಸಂಶೋಧನೆಗೆ ಮಾರಕ

Published On :

ಕ.ಪ್ರ. ವಾರ್ತೆ   ಮೈಸೂರು   ಸೆ.10
ವನ್ಯಜೀವಿ ಕಾಯ್ದೆಗೆ ತಿದ್ದುಪಡಿ ತರುತ್ತಿರುವುದು ವನ್ಯಜೀವಿಗಳ ಸಂರಕ್ಷಣೆ ಮತ್ತು ಸಂಶೋಧನೆಗೆ ಬಹುದೊಡ್ಡ ತೊಡಕಾಗಲಿದೆ ಎಂದು ವನ್ಯಜೀವಿ ಸಂಶೋಧಕ ಡಾ.ಮೇವಾ ಸಿಂಗ್ ಆತಂಕ ವ್ಯಕ್ತಪಡಿಸಿದರು.
ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯ ಮಂಗಳವಾರ ಆಯೋಜಿಸಿದ್ದ ಕರ್ನಾಟಕದಲ್ಲಿ ವನ್ಯಪ್ರಾಣಿಗಳ ವಿಸ್ತರಣೆ ಮತ್ತು ಸಂರಕ್ಷಣೆ ಕುರಿತ 11ನೇ ಸಂರಕ್ಷಣಾ ನುಡಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಿಬಿರಾರ್ಥಿಗಳ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.
ವನ್ಯಜೀವಿ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಇದು ಸಂಶೋಧನೆಯನ್ನು ನಿಯಂತ್ರಿಸುತ್ತದೆ ಮತ್ತು ವನ್ಯಜೀವಿಗಳ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ಈ ತಿದ್ದುಪಡಿ ಕಾಯ್ದೆ ಜಾರಿಗೆ ಬಂದರೆ ಈಗ ಸಂಶೋಧನೆ ನಡೆಸುತ್ತಿರುವಂತೆ ಮುಂದೆಯೂ ಸಂಶೋಧನೆ ನಡೆಸಲು ಸಾಧ್ಯವಾಗದು. ಸರ್ಕಾರ ಸೀಮಿತಗೊಳಿಸಿದ ಪ್ರದೇಶದಲ್ಲಿ ಮತ್ತು ಸೀಮಿತ ಅವಧಿಯಲ್ಲಿ ಸಂಶೋಧನೆ ನಡೆಸಬೇಕು. ತಪ್ಪಿದರೆ ಮೂರು ವರ್ಷ ಸಜೆ ವಿಧಿಸಲಾಗುತ್ತದೆ. ಅಲ್ಲದೆ ಅರಣ್ಯದಲ್ಲಿ ಗಣಿಗಾರಿಕೆಗೆ ಅನುಮತಿ ದೊರಕಿದಂತೆ ಆಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ನಮ್ಮ ಸಂಸದರು ಮತ್ತು ಜನಪ್ರತಿನಿಧಿಗಳು ತಮ್ಮ ವಿದೇಶಿ ಪ್ರವಾಸ, ಮಾಸಿಕ ಭತ್ಯೆ ಹೆಚ್ಚಳ ಮುಂತಾದ ಸ್ವಹಿತಾಸಕ್ತಿ ವಿಷಯಗಳ ಬಗ್ಗೆ ಕೂಲಂಕಷವಾಗಿ ಚರ್ಚಿಸುತ್ತಾರೆ. ಆದರೆ ಶಿಕ್ಷಣ ವಿಧೇಯಕದ ಬಗ್ಗೆಯಾಗಲಿ ಅಥವಾ ಅರಣ್ಯ ಸಂರಕ್ಷಣಾ ಕಾಯ್ದೆಯ ಬಗ್ಗೆಯಾಗಲಿ ಚರ್ಚಿಸುವುದಿಲ್ಲ. ಆದ್ದರಿಂದ ವನ್ಯಜೀವಿ ಕಾಯ್ದೆಗೆ ತಿದ್ದುಪಡಿ ವಿಧೇಯಕಕ್ಕೆ ಹಾಗೆ ಒಪ್ಪಿಗೆ ನೀಡಿದರೂ ಆಶ್ಚರ್ಯವಿಲ್ಲ. ಆದ್ದರಿಂದ ನಾನು ಮತ್ತು ಸಿಎನ್ಆರ್ ರಾವ್ ಅವರು ಒಮ್ಮೆ ಚರ್ಚಿಸಿದ್ದೇವೆ. ಈ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ಯತ್ನಿಸುತ್ತಿದ್ದೇವೆ ಎಂದು ಹೇಳಿದರು.
ಸೆನ್ಸಾರ್ ಯಂತ್ರ ಬಳಕೆ: ಗುಡ್ಡಗಾಡು ಪ್ರದೇಶ ಮತ್ತು ಟೀ ಎಸ್ಟೇಟ್ಗಳು ಇರುವ ಕಡೆಗಳಲ್ಲಿ ರೈಲು ಸಂಚರಿಸುವ ವೇಳೆ ಆನೆ ಸೇರಿದಂತೆ ಮತ್ತಿತರ ಪ್ರಾಣಿಗಳು ಸಿಲುಕಿ ಮೃತಪಡುತ್ತಿರುವುದನ್ನು ತಪ್ಪಿಸಲು ಸೆನ್ಸಾರ್ ಯಂತ್ರ ಬಳಸಲಾಗುತ್ತಿದೆ. ಪ್ರಾಣಿ ಆ ಯಂತ್ರದ ಸಮೀಪ ಬರುತ್ತಿದ್ದಂತೆಯೆ ವಾಸನೆ ಮೂಲಕ ಪತ್ತೆ ಹಚ್ಚಿ ರೇಲ್ವೆ ನಿಲ್ದಾಣದ ನಿಯಂತ್ರಣ ಕೊಠಡಿಗೆ ಸಂದೇಶ ರವಾನಿಸುತ್ತದೆ. ಆಗ ರೈಲುಗಳ ವೇಗ ಕಡಿಮೆಗೊಳಿಸಿ ಅಗತ್ಯವಿದ್ದರೆ, ರೈಲು ನಿಲ್ಲಿಸುವ ವ್ಯವಸ್ಥೆ ಇದೆ. ಇದನ್ನು ಕರ್ನಾಟಕ ಕೊಡಗಿನಲ್ಲಿಯೂ ಜಾರಿಗೆ ತರಬಹುದು. ಆದರೆ ಸರ್ಕಾರ ಗಮನ ಹರಿಸಬೇಕು ಎಂದರು.
ದೇಶದ ನಾಲ್ಕು ಮೃಗಾಲಯಗಳಲ್ಲಿ ಸಿಂಗಲೀಕಗಳ ಫೀಡಿಂಗ್ ಕೇಂದ್ರ ತೆರೆಯಲು ಚಿಂತನೆ ನಡೆಸಲಾಗಿದೆ. ಈ ಪೈಕಿ ಮೈಸೂರು, ಹೈದರಾಬಾದ್, ತ್ರಿವೇಂಡ್ರಮ್ ಸೇರಿದೆ. ಈ ಬಗ್ಗೆ ಒಂದು ಬಾರಿ ಸಭೆ ನಡೆಸಲಾಗಿದೆ. ಮತ್ತೊಂದು ಸುತ್ತಿನ ಸಭೆ ಭುವನೇಶ್ವರದಲ್ಲಿ ಮುಂದಿನ ತಿಂಗಳು ನಡೆಯಲಿದೆ. ರಾಜ್ಯದ ಕೋಲಾರ ಮತ್ತು ತುಮಕೂರಿನಲ್ಲಿ ಕಾಡುಪಾಪ ಹೆಚ್ಚಾಗಿ ಕಂಡು ಬರುತ್ತಿದೆ. ಆದ್ದರಿಂದ ಆ ಪ್ರದೇಶದ ಸಂರಕ್ಷಣೆಗೆ ಸರ್ಕಾರ ಮುಂದಾಗಿದೆ ಎಂದು ತಿಳಿಸಿದರು.
ಮೃಗಾಲಯ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ರವಿ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.