ಶುರುವಾಗದ ಕಾರ್ಖಾನೆ; ಪರದಾಟಕ್ಕಿಲ್ಲ ಕೊನೆ
ಕ.ಪ್ರ.ವಾರ್ತೆ ಕೆ.ಆರ್. ನಗರ ಸೆ. 12
ತಾಲೂಕಿನ ರೈತರ ಜೀವನಾಡಿಯಾಗಿರುವ ಚಂಚನಕಟ್ಟೆ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಕಬ್ಬು ಅರೆಯುವ ಕಾರ್ಯ ಸ್ಥಗಿತಗೊಳಿಸಿ 18 ತಿಂಗಳಾಗಿದ್ದರೂ ಆಡಳಿತ ನಡೆಸುವವರಾಗಲಿ, ಅಧಿಕಾರಿಗಳಾಗಲಿ ಗಮನ ಹರಿಸುತ್ತಿಲ್ಲ.
1980 ರಲ್ಲಿ 12 ಕೋಟಿ ಮೂಲ ಬಂಡವಾಳದೊಂದಿಗೆ ಆರಂಭವಾದ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಲಾಭದಾಯಕವಾಗಿ ಮುನ್ನಡೆಯಿತು. ನಂತರ ಬಂದ ಆಡಳಿತ ಮಂಡಳಿಗಳ ದುರಾಡಳಿತ ಮತ್ತು ಸ್ವಜನ ಪಕ್ಷಪಾತದಿಂದ ವರ್ಷದಿಂದ ವರ್ಷಕ್ಕೆ ಅವನತಿಯತ್ತ ಸಾಗುತ್ತ ಬಂದಿದೆ.
ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಹಿಂದಿನಿಂದಲೂ ರಾಜಕೀಯ ಮುಖಂಡರಿಗೆ ರಾಜಕಾರಣ ಮಾಡಲು ಅಸ್ತ್ರವಾಗಿ ಬಳಕೆಯಾಗುತ್ತಿದೆಯೇ ಹೊರತು, ಕಾರ್ಖಾನೆಯ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯುವ ದಿಸೆಯಲ್ಲಿ ಯಾರೂ ಗಂಭೀರ ಚಿಂತನೆ ನಡೆಸದ ಪರಿಣಾಮ ಇಂದು ಹೀನಾಯ ಸ್ಥಿತಿ ತಲುಪಿದೆ. ರೈತರ ಪಾಲಿಗೆ ಸಿಹಿಯಾಗಬೇಕಿದ್ದ ಕಾರ್ಖಾನೆ ಈಗ ಕಹಿಯಾಗಿದೆ.
2006 ರಲ್ಲಿ ಕಾರ್ಖಾನೆಯಲ್ಲಿ ಅಧಿಕಾರ ನಡೆಸುತ್ತಿದ್ದ ಆಡಳಿತ ಮಂಡಳಿ ರಾಜಕೀಯ ಕಾರಣಗಳಿಂದ ರಾಜಿನಾಮೆ ನೀಡಿ ನಿರ್ಗಮಿಸಿತು. ನಂತರ ಅಂದು ಮುಖ್ಯಮಂತ್ರಿಗಳಾಗಿದ್ದ ಎಚ್.ಡಿ. ಕುಮಾರಸ್ವಾಮಿ ಅವರ ಮೇಲೆ ಒತ್ತಡ ತಂದು ಶಾಸಕ ಸಾ.ರಾ. ಮಹೇಶ್, ಖಾಸಗಿಯವರಿಗೆ ವಹಿಸಲು ಪರಿಶ್ರಮಪಟ್ಟಿದ್ದರಿಂದ ಚೆನ್ನೈ ಮೂಲದ ಅಂಬಿಕಾ ಶುಗರ್ಸ್ನವರು 22 ವರ್ಷಗಳ ಅವಧಿಗೆ 169 ಕೋಟಿಗೆ ಗುತ್ತಿಗೆ ಪಡೆದರು.
ರೈತರಿಗೆ ಕೈಕೊಟ್ಟ ಕಾರ್ಖಾನೆ: ಕಾರ್ಖಾನೆಯನ್ನು ಗುತ್ತಿಗೆಗೆ ನೀಡಿದ ಆರಂಭದಲ್ಲಿಯೆ ಎಡವಿದ ಸರ್ಕಾರ, ಅಂಬಿಕಾ ಶುಗರ್ಸ್ನವರಿಗೆ ಕಾರ್ಖಾನೆಯನ್ನು ನೋಂದಣಿ ಮಾಡಿಸದೆ ನಿರ್ಲಕ್ಷ್ಯ ವಹಿಸಿದ್ದರಿಂದ ಕಾರ್ಖಾನೆಯನ್ನು ಸಮರ್ಪಕವಾಗಿ ನಿರ್ವಹಿಸದ ಅಂಬಿಕಾ ಶುಗರ್ಸ್ ಸರ್ಕಾರಕ್ಕೆ ತೆರಿಗೆ ವಂಚಿಸಿ 5 ವರ್ಷಗಳ ನಂತರ ರೈತರಿಗೆ, ಕಾರ್ಮಿಕರಿಗೆ ಕೈಕೊಟ್ಟು ಕಾರ್ಖಾನೆಯಿಂದ ಕಾಲ್ಕಿತ್ತಿದೆ.
ಇದರಿಂದ ಸಾವಿರಾರು ರೈತರು, 400ಕ್ಕೂ ಅಧಿಕ ಕಾರ್ಮಿಕರು ಕಾರ್ಖಾನೆಯನ್ನೇ ನಂಬಿದ್ದ ಕೂಲಿ ಕಾರ್ಮಿಕರು ಅತಂತ್ರರಾಗಿದ್ದು, ಸರ್ಕಾರವಾಗಲಿ, ಜಿಲ್ಲಾಡಳಿತವಾಗಲಿ, ಕಾರ್ಖಾನೆಯ ಪುನಾರಂಭದ ಬಗ್ಗೆ ಗಮನಹರಿಸದೇ ಅವರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿವೆ.
ಕಾರ್ಖಾನೆಯನ್ನು ಖಾಸಗಿಯವರಿಗೆ ಗುತ್ತಿಗೆಗೆ ನೀಡಲು ಎರಡು ಬಾರಿ ಟೆಂಡರ್ ಕರೆಯಲಾಗಿತ್ತಾದರೂ ಯಾವ ಕಾರ್ಖಾನೆಗಳವರು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸದ್ದರಿಂದ ಮತ್ತೆ ನೆನೆಗುದಿಗೆ ಬಿದ್ದಿದೆ. ಸಂಕಷ್ಟದಲ್ಲಿರುವ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಸರ್ಕಾರವೇ ವಹಿಸಿಕೊಂಡು, ಕೂಡಲೆ ಕಬ್ಬು ಅರೆಯುವ ಕಾರ್ಯ ಆರಂಭಿಸದಿದ್ದರೆ ಯಂತ್ರೋಪಕರಣಗಳು ತುಕ್ಕು ಹಿಡಿದು ಹಾಳಾಗುತ್ತವೆ. ಇದೆ ಪರಿಸ್ಥಿತಿ ಮುಂದುವರಿದರೆ ತೊಂದರೆ ನಿಶ್ಚಿತ.ಚುನಾಯಿತ ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗ ಕಾರ್ಖಾನೆ ಸಮಸ್ಯೆ ಬಗ್ಗೆ ಮಾತನಾಡುತ್ತಿದ್ದು, ಪರಿಹಾರ ಮತ್ತು ಪರ್ಯಾಯ ಕ್ರಮಗಳ ಬಗ್ಗೆ ಚಿಂತಿಸದಿರುವುದು ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ರೈತರ ಉದ್ಧಾರದ ಬಗ್ಗೆ ಕೇವಲ ಹೇಳಿಕೆಗಳು, ಭರವಸೆಗಳಲ್ಲೆ ಕಾಲ ಕಳೆಯುವ ಸರ್ಕಾರ ಸಾವಿರಾರು ಜನರ ಜೀವನಾಡಿಯಾಗಿರುವ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಉಳಿಸಿಕೊಳ್ಳದಿದ್ದರೆ ರೈತರ ಪರಿಶ್ರಮದಿಂದಲೇ ಜನ್ಮ ತಾಳಿದ ಕಾರ್ಖಾನೆಯು ಶಾಶ್ವತವಾಗಿ ಬಾಗಿಲು ಹಾಕಿಕೊಳ್ಳುವ ದಿನಗಳು ದೂರವಿಲ್ಲ.
ಒತ್ತಾಯ: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದಾಗ ರೈತರ ಮೊಗದಲ್ಲಿ ಮಂದಹಾಸ ಮೂಡಿ ನಮ್ಮ ಜಿಲ್ಲೆಯವರೇ ಮುಖ್ಯಮಂತ್ರಿ ಆಗುತ್ತಿರುವುದರಿಂದ ಕಾರ್ಖಾನೆ ಆರಂಭವಾಗುತ್ತದೆ ಎಂದು ಭರವಸೆಯ ಮೂಟೆಯನ್ನೇ ಹೊತ್ತಿದ್ದರು.
ಆದರೆ ಕಳೆದ ಮೂರು ತಿಂಗಳಿನಿಂದ ಒಮ್ಮೆಯೂ ಮುಖ್ಯಮಂತ್ರಿಗಳು ತವರು ಜಿಲ್ಲೆಯಲ್ಲಿ ಸ್ಥಗಿತಗೊಂಡಿರುವ ಸಕ್ಕರೆ ಕಾರ್ಖಾನೆಯ ಬಗ್ಗೆ ಮಾತನಾಡಿಲ್ಲ. ಜತೆಗೆ ಕಾರ್ಖಾನೆ ವ್ಯಾಪ್ತಿಯ ಆಡಳಿತ ಪಕ್ಷದ ಶಾಸಕರು ಅವರ ಗಮನಕ್ಕೆ ತಂದಿಲ್ಲ. ಈಗಲಾದರೂ ಮುಖ್ಯಮಂತ್ರಿಗಳು 18 ತಿಂಗಳಿನಿಂದ ಕಬ್ಬು ಅರೆಯುವ ಕಾರ್ಯ ಸ್ಥಗಿತಗೊಳಿಸಿರುವ ಚುಂಚನಕಟ್ಟೆ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಪುನರಾರಂಭದ ಬಗ್ಗೆ ಗಮನಹರಿಸಬೇಕು ಎಂಬುದು ರೈತರ ಒತ್ತಾಯವಾಗಿದೆ.
ಕುಪ್ಪೆ ಮಹದೇವಸ್ವಾಮಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

