ಜಿಲ್ಲೆಗೆ ಆರೋಗ್ಯ ಇಲಾಖೆಯ ಬಂಪರ್ ಕೊಡುಗೆ
ಕ.ಪ್ರ.ವಾರ್ತೆ ಹುಣಸೂರು ಸೆ. 12
ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿಗೆ ಆರೋಗ್ಯ ಇಲಾಖೆಯ ಹಲವು ಯೋಜನೆಗಳ ಬಂಪರ್ ಕೂಡುಗೆ ದೊರೆಯಲಿದೆ ಎಂದು ಆರೋಗ್ಯ ಸಚಿವ ಯು.ಟಿ ಖಾದರ್ ತಿಳಿಸಿದರು.
ತಾಲೂಕಿನ ಕೆಂಡಗಣ್ಣೇಶ್ವರಸ್ವಾಮಿ ಗದ್ದಿಗೆಯಲ್ಲಿನ ಅಮೃತಾನಂದಮಯಿ ಮಠದ ಅಮ್ಮನ 60ನೇ ವರ್ಷದ ಹುಟ್ಟುಹಬ್ಬ ಅಂಗವಾಗಿ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣೆ ಸಮಾರೋಪ ಸಮಾರಂಭದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕೇಂದ್ರ ಸರ್ಕಾರದ ಯುನಿವರ್ಸಲ್ ಹೆಲ್ತ್ ಕೇರ್ ಯೋಜನೆಗಾಗಿ ದೇಶದಲ್ಲೆ ಮೈಸೂರು ಮತ್ತು ರಾಯಚೂರು ಜಿಲ್ಲೆಯನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಂಡಿದೆ. ಈ ಯೋಜನೆಯಿಂದ ಬಿಪಿಎಲ್ ಹಾಗೂ ಎಪಿಎಲ್ ಪಡಿತರ ಚೀಟಿದಾರರಿಗೆ ಆರೋಗ್ಯ ವಿಮಾ ಸೌಲಭ್ಯ ಕಲ್ಪಿಸಲಾಗುವುದು. ಈ ಸಂಬಂಧ ಈಗಾಗಲೆ ಯೋಜನಾ ಇಲಾಖೆಯಿಂದ ಅನುಮತಿ ದೊರೆತಿದೆ. ಶೀಘ್ರದಲ್ಲಿ ಮೈಸೂರಿನಲ್ಲಿ ಚಾಲನೆ ನೀಡುವ ಸಂಬಂಧ ಪೂರ್ವಭಾವಿ ಸಭೆ ನಡೆಯಲಿದೆ. ಮೈಸೂರಿಗೆ ಅರ್ಬನ್ ಹೆಲ್ತ್ ಮಿಷನ್ ಯೋಜನೆ ಮಂಜೂರಾಗಿದ್ದು, ಆಸ್ಪತ್ರೆಗಳಿಗೆ ಸೌಲಭ್ಯ ಹೆಚ್ಚಿಸಲಾಗುವುದು ಹಾಗೂ ನಗರದಲ್ಲಿ ಸ್ಥಳಾವಕಾಶ ಕಲ್ಪಿಸಿಕೊಟ್ಟರೆ ಸ್ಪೆಷಾಲಿಟಿ ಆಸ್ಪತ್ರೆ ಸೇರಿದಂತೆ ಹಲವಾರು ಯೋಜನೆಗಳು ಮಂಜೂರಾಗಲಿವೆ ಎಂದರು.
ಮಾದರಿ ಆರೋಗ್ಯ ವ್ಯವಸ್ಥೆ: ದೇಶದಲ್ಲಿ ರಾಜ್ಯದ ಆರೋಗ್ಯ ಇಲಾಖೆ ಮಾದರಿಯಾಗಲು ಪ್ರಾಯೋಗಿಕವಾಗಿ ಹಲವು ಕ್ರಮ ಕೈಗೊಳ್ಳಲಾಗಿದೆ. ತಮ್ಮ ತವರು ಕ್ಷೇತ್ರ ಹುಲ್ಲಾಳ ಹಾಗೂ ಮಂಗಳೂರು ಸೇರಿದಂತೆ ನಾಲ್ಕು ಕ್ಷೇತ್ರಗಳಿಗೆ 125 ಕೋಟಿ ವೆಚ್ಚದಲ್ಲಿ ಶೀಘ್ರವೆ ಚಾಲನೆ ನೀಡಲಾಗುತ್ತದೆ. ರಾಜ್ಯದ ಯಾವುದೇ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸದೆ, ಇರುವ ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸಿ, ಕಂಪ್ಯೂಟರೀಕರಣ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸಲಾಗುವುದು. ರಾಜ್ಯದ 2001ರ ಜನಗಣತಿಯಂತೆ ಲಕ್ಷ ಜನಸಂಖ್ಯೆಗೊಂದು 108 ಆ್ಯಂಬುಲೆನ್ಸ್ ವಾಹನಗಳಿದ್ದು, ಮುಂದೆ 2011ರ ಜನಗಣತಿಯಂತೆ 60 ಸಾವಿರ ಮಂದಿಗೊಂದು ಆ್ಯಂಬುಲೆನ್ಸ್ ನೀಡಬೇಕು ಎಂಬ ಉದ್ದೇಶ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಿದೆ. ಹೊಸದಾಗಿ 60 ವಾಹನದ ಜತೆಗೆ, ವಿಶ್ವಬ್ಯಾಂಕ್ನಿಂದ 190 ತುರ್ತು ಚಿಕಿತ್ಸಾ ವಾಹನ ಬರುವ ನಿರೀಕ್ಷೆ ಇದೆ ಎಂದು ಹೇಳಿದರು.
2,780 ಮಂದಿಯನ್ನು ವಿವಿಧ ಹುದ್ದೆಗೆ ನೇಮಿಸಿಕೊಳ್ಳಲು ಉದ್ದೇಶಿಸಿತ್ತಾದರೂ, ಹೈದರಾಬಾದ್- ಕರ್ನಾಟಕಕ್ಕೆ ನಿಗದಿತ ಮೀಸಲಾತಿ ನೀಡಬೇಕಿರುವುದರಿಂದ ತಡವಾಗಿದೆ. ಅಲ್ಲದೆ 1,500 ಮಂದಿ ಎಂಬಿಬಿಎಸ್ ವೈದ್ಯರನ್ನು ನೇಮಕ ಮಾಡಿಕೊಳ್ಳಲು ಗ್ರಾಮೀಣ ಸೇವೆ ಕಡ್ಡಾಯಗೊಳಿಸಲು ರಾಷ್ಟ್ರಾಧ್ಯಕ್ಷರ ಅನುಮತಿಗೆ ಕಾಯಲಾಗುತ್ತಿದೆ ಎಂದರು. ಸರ್ಕಾರದ 2 ಮತ್ತು 3ನೇ ದರ್ಜೆ ಹಾಗೂ ಕೆಳಹಂತದ ಅಧಿಕಾರಿ ಸಿಬ್ಬಂದಿಗೆ ಅನುಕೂಲವಾಗುವಂತೆ ಆರೋಗ್ಯ ಸಂಜೀವಿನಿ ಎಂಬ ಯೋಜನೆ ಜಾರಿಗೆ ತರಲಾಗುತ್ತಿದೆ. ಇದರಿಂದ ಕಡಿಮೆ ವೇತನ ಪಡೆಯುವ ನೌಕರ ವರ್ಗದ ಕುಟುಂಬಗಳಿಗೆ ಆರೋಗ್ಯ ವಿಮೆ ಸೌಲಭ್ಯ ಸಿಗಲಿದೆ. ಈ ಹಿಂದೆ ಹಣ ನೀಡಿ ನೌಕರರು ಬಿಲ್ಗಾಗಿ ಕಾಯುತ್ತಿದ್ದ ವ್ಯವಸ್ಥೆಗೆ ಕಡಿವಾಣ ಹಾಕಿ ನೇರವಾಗಿ ಚಿಕಿತ್ಸೆ ಕೊಡಿಸಲು ಸರ್ಕಾರ ಮುಂದಾಗಿದೆ ಎಂದರು. ತಾಲೂಕಿನ ಬಿಳಿಕೆರೆ ಆಸ್ಪತ್ರೆಗೆ 108 ತುರ್ತು ಚಿಕಿತ್ಸಾ ವಾಹನದ ಸೌಲಭ್ಯ ಕಲ್ಪಿಸುವಂತೆ ಹಾಗೂ ಹುಣಸೂರು ಆಸ್ಪತ್ರೆಯಲ್ಲಿ ಖಾಲಿ ಇರುವ ಸ್ಕ್ಯಾನಿಂಗ್ ತಂತ್ರಜ್ಞರ ಹುದ್ದೆ ಭರ್ತಿ ಮಾಡುವುದಾಗಿ ಹೇಳಿದರು.
ಶಾಸಕ ಎಚ್.ಪಿ. ಮಂಜುನಾಥ್, ಜಿಪಂ ಸದಸ್ಯೆ ಡಾ. ಪುಷ್ಪಾವತಿ ಅಮರನಾಥ್, ಡಿಎಚ್ಒ ಡಾ.ಎಸ್.ಎಂ. ಮಾಲೇಗೌಡ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

